ಬೆಂಗಳೂರು: ಸ್ವಾತಂತ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯ ಪಥಸಂಚಲನದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಅಶ್ವದಳಕ್ಕೆ ಹೊಸ ರೂಪ ಕೊಡಲು ವಿಶೇಷ ಆಸ್ತಕ್ತಿ ವಹಿಸಿರುವ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಸಿಬ್ಬಂದಿಗೆ ಹೊಸ ಸಮವಸ್ತ್ರದ ಜತೆಗೆ ಆತ್ಯಾಧುನಿಕ ಸವಲತ್ತುಗಳುಳ್ಳ ಅಶ್ವಶಾಲೆ ಹಾಗೂ ಕುದುರೆಗಳನ್ನು ಸಾಗಿಸಲು 40 ಲಕ್ಷ ಮೌಲ್ಯದ ವಾಹನ ಖರೀದಿಸಲು ಮುಂದಾಗಿದ್ದಾರೆ.
ಸಿಬ್ಬಂದಿಗೆ ಹೊಸ ಸಮವಸ್ತ್ರ
ವಾರಾಂತ್ಯದಲ್ಲಿ ಮಾತ್ರ ಕಬ್ಬನ್‌ಪಾರ್ಕ್ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಗಸ್ತು ತೀರುಗುತ್ತಿದ್ದ ಅಶ್ವದಳ ಇದೀಗ ವಾರದ ಐದು ದಿನಗಳು ಸಂಚಾರ ಮಾಡಲಿವೆ. ಈ ಹಿನ್ನೆಲೆಯಲ್ಲಿ ಗಸ್ತಿನ ಸಿಬ್ಬಂದಿಗೆ ಈ ಹಿಂದಿನ ಪೊಲೀಸ್ ಧಿರಿಸಿನ ಬದಲಿಗೆ ಖಾಕಿ ಪ್ಯಾಂಟ್, ಕಪ್ಪು ಮಿಶ್ರಿತ ಶರ್ಟ್ ಹಾಗೂ ನಗರ ಪೊಲೀಸ್ ಲಾಂಛನ ಹೊಂದಿರುವ ಹೆಲ್ಮೆಟ್ ನೀಡಲಾಗಿದೆ. ಒಟ್ಟಾರೆ ಪೊಲೀಸ್ ಆಯುಕ್ತರ ಕನಸಿನಂತೆ ವಿದೇಶಿ ಪೊಲೀಸರ ಮಾದರಿಯಲ್ಲಿ ಸಿಬ್ಬಂದಿ ಕಾಣುವಂತೆ ಸಿದ್ದಪಡಿಸಲಾಗಿದೆ.
ಅಷ್ಟೇ ಅಲ್ಲದೇ ಅಶ್ವದಳಕ್ಕೆ ಆಕರ್ಷಕ ಲುಕ್ ನೀಡುವ ಜತೆಗೆ ದುರಸ್ಥಿಗೊಂಡಿದ್ದ ಕುದುರೆ ಲಾಯವನ್ನೂ ಸುಸಜ್ಜಿತಗೊಳಸಲಾಗುತ್ತಿದೆ. ಕುದುರೆಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸಾಗಿಸುವುದಕ್ಕಾಗಿಯೇ “ಹಾರ್ಸ್ ಫ್ಲೋಟ್” ಎನ್ನುವ ಉತ್ತಮ ವ್ಯವಸ್ಥೆಯುಳ್ಳ ವಾಹನ ತರಿಸಲು 40 ಲಕ್ಷ ರೂ. ವೆಚ್ಚದಲ್ಲಿ ವಾಹನ ಖರೀದಿಸಲಾಗುವುದು ಎಂದು ಸಿಎಆರ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.