Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು, ಜೂ. 11 ಮತ್ತು 12ರಂದು ಹಲವಾರು ವಿದ್ಯಾರ್ಥಿಗಳ ಹೆತ್ತವರಿಗೆ ಅಪರಿಚಿತರು ಪೊಲೀಸ್ ಅಧಿಕಾರಿಗಳಂತೆ ಬಿಂಬಿಸಿಕೊಂಡು ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿ ಮಗ/ಮಗಳನ್ನು ಬಂಧಿಸಿದ್ದೇವೆ. ಅವರ ಬಿಡುಗಡೆಗೆ ಕೂಡಲೇ ಹಣ ನೀಡಿ ಎಂದಿದ್ದಾರೆ. ಹೆತ್ತವರು ಆತಂಕಿತರಾಗಿ ಶಾಲೆಗಳಲ್ಲಿ ವಿಚಾರಿಸಿದಾಗ ಅವರ ಮಕ್ಕಳು ಶಾಲೆಯಲ್ಲಿ ಸುರಕ್ಷಿತರಾಗಿರುವುದು ಗೊತ್ತಾಗಿದೆ. ಕರೆ ಬಂದಿರುವ ಸಂಖ್ಯೆಗಳನ್ನು ಪರಿಶೀಲಿಸಿದಾಗ ಪೋಲಂಡ್, ಪಾಕಿಸ್ಥಾನ ದೇಶಗಳ ಕೋಡ್ ಸಂಖ್ಯೆಯನ್ನು ಹೊಂದಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹೆತ್ತವರ ಮೊಬೈಲ್ ನಂಬರ್‌ನ್ನು ವಂಚಕರು “ಡಾಟಾ ಬೇಸ್ ಸೈಟ್’ಗಳಿಂದ ಖರೀದಿ ಮಾಡಿರುವ ಸಾಧ್ಯತೆ ಇದೆ. ನಮ್ಮ ದೇಶದಲ್ಲಿ ಇಂತಹ ಅನೇಕ ವೆಬ್‌ಸೈಟ್‌ಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಅನೇಕ ಸಂಸ್ಥೆಗಳು ಕೂಡ ಅನಧಿಕೃತವಾಗಿ ಮೊಬೈಲ್ ಸಂಖ್ಯೆ, ಮತ್ತಿತರ ಮಾಹಿತಿಯನ್ನು ಪಡೆದುಕೊಳ್ಳುತ್ತವೆ. ಪರೀಕ್ಷಾ ಮಂಡಳಿಗಳಿಂದ ಸೈಬರ್ ವಂಚಕರು ಈ ರೀತಿಯ ಡಾಟಾ ಬೇಸ್‌ಗಳನ್ನು ಪಡೆದು ಅವುಗಳನ್ನು ಇತರ ವಂಚಕರಿಗೆ ಮಾರಾಟ ಮಾಡಿರುವ ಸಾಧ್ಯತೆ ಅಲ್ಲಗಳೆಯಲಾಗದು. ಹಾಗಾಗಿ ಪರೀಕ್ಷಾ ಮಂಡಳಿಗಳ ಬಗ್ಗೆಯೂ ತನಿಖೆ ನಡೆಸುವುದು ಸೂಕ್ತ. ಈ ರೀತಿಯಾಗಿ ಮಾಹಿತಿಯನ್ನು ಮಾರಾಟ ಮಾಡುವುದು “ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆ್ಯಕ್ಟ್’ ಪ್ರಕಾರ ಅಪರಾಧ. ಆದರೆ ಈ ಕಾಯಿದೆ ನಮ್ಮ ದೇಶದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎನ್ನುತ್ತಾರೆ ಮಂಗಳೂರಿನ ಸೈಬರ್ ಭದ್ರತಾ ತಜ್ಞ ಡಾ| ಅನಂತಪ್ರಭು ಜಿ. ಅವರು.
Related Articles
ಬುಧವಾರ ಮತ್ತೆ ಇಬ್ಬರು ಹೆತ್ತವರಿಗೆ ಇದೇ ರೀತಿಯ ಕರೆಗಳು ಬಂದಿರುವುದಾಗಿ ತಿಳಿದು ಬಂದಿದೆ. ನಗರದ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೋರ್ವರ ಹೆತ್ತವರಿಗೆ ಕರೆ ಮಾಡಿದ ಅಪರಿಚಿತರು “ನಿಮ್ಮ ಮಗನ ಮೇಲೆ ಡ್ರಗ್ಸ್ ಕೇಸ್ ಹಾಕಿದ್ದೇವೆ. ಈತನನ್ನು ಬಿಡಿಸಿಕೊಂಡು ಹೋಗಬೇಕಾದರೆ ಕೂಡಲೇ ಹಣ ನೀಡಿ’ ಎಂಬುದಾಗಿ ಹೇಳಿದ್ದಾರೆ. ಮತ್ತೋರ್ವರಿಗೆ ಮಗಳನ್ನು ಅಪಹರಣ ಮಾಡಲಾಗಿದೆ ಎಂಬುದಾಗಿ ಹೇಳಿ ಹಣಕ್ಕೆ ಒತ್ತಾಯಿಸಿದ್ದಾರೆ. ಹೆತ್ತವರು ಕೂಡಲೇ ಕಾಲೇಜಿಗೆ ಕರೆ ಮಾಡಿ ಕೇಳಿದಾಗ ಇದೊಂದು ನಕಲಿ ಬೆದರಿಕೆ ಕರೆ ಎಂಬುದಾಗಿ ಗೊತ್ತಾಗಿದೆ.
Advertisement
ನಂಬರ್ ಸಿಕ್ಕಿದ್ಹೇಗೆ: ಇನ್ನೂ ನಿಗೂಢ ಪ್ರಥಮ ಪಿಯುಸಿಯ ಮಕ್ಕಳ ಹೆತ್ತವರ ನಂಬರ್ ವಂಚಕರ ಕೈಗೆ ಸಿಕ್ಕಿದ್ದು ಹೇಗೆ ಎಂಬುದು ಇನ್ನೂ ನಿಗೂಢವಾಗಿದೆ. ಇದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆತ್ತವರು ಹೀಗೆ ಮಾಡಿ
ತಮ್ಮ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಸಂಸ್ಥೆಯ ಲ್ಯಾಂಡ್‌ಲೈನ್ ದೂರವಾಣಿ ಸಂಖ್ಯೆ ಮಾತ್ರವಲ್ಲದೆ ಮೊಬೈಲ್ ಸಂಖ್ಯೆ, ಕ್ಲಾಸ್ ಟೀಚರ್ ಮೊಬೈಲ್ ಸಂಖ್ಯೆಯನ್ನು ತೆಗೆದಿಟ್ಟುಕೊಂಡಿರಬೇಕು. ಸಂಶಯ ಬಂದಾಗ ಕೂಡಲೇ ಅವರಿಗೆ ಕರೆ ಮಾಡಿ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸೈಬರ್ ಭದ್ರತಾ ತಜ್ಞರು, ಪೊಲೀಸರು ಸಲಹೆ ನೀಡಿದ್ದಾರೆ.