ಬೆಂಗಳೂರು: ಪುರುಷತ್ವ ಇಲ್ಲದ ಪುತ್ರನ ಸಮಸ್ಯೆಯನ್ನು ಮರೆಮಾಚಿ ಮದುವೆ ಮಾಡಿಸುವ ಪೋಷಕರೇ ಎಚ್ಚರ. ಇನ್ನು ಮುಂದೆ ಹಾಗೇನಾದರೂ ಮಾಡಿದರೆ, ಪೋಷಕರ ವಿರುದ್ಧವೇ ಪೊಲೀಸರು ದೂರು ದಾಖಲಿಸಬೇಕಾದ ಪ್ರಮೇಯ ಉದ್ಭವವಾದೀತು.
ಸದ್ಯ ಇದೇ ವಿಚಾರವನ್ನಿಟ್ಟುಕೊಂಡು ಮಹಿಳೆಯೊಬ್ಬರು ಪತಿ, ಅತ್ತೆ ಮಾವನ ವಿರುದ್ಧವೇ ಕೇಸು ದಾಖಲಾಗುವಂತೆ ಮಾಡಿದ್ದಾರೆ. “”ನನ್ನ ಗಂಡನಿಗೆ ಪುರುಷತ್ವ ಇಲ್ಲ, ಅದು ಗೊತ್ತಿದ್ದೂ ಅತ್ತೆ-ಮಾವ ಮದುವೆ ಮಾಡಿಸಿದ್ದಾರೆ. ಹೀಗಾಗಿ, ಪತಿ, ಅತ್ತೆ ಮತ್ತು ಮಾವನ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು.
ಮಹಿಳೆಯ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ಮೂವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸುಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಾಣಸವಾಡಿ ಪೊಲೀಸರು ದೂರು ಪತಿ, ಅತ್ತೆ ಮಾವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತಿಭಾ (ಹೆಸರು ಬದಲಾಯಿಸಲಾಗಿದೆ) ಎಂಬುವರು 2014ರಲ್ಲಿ ಎಡ್ವಿನ್ ಎಂಬುವವರೊಂದಿಗೆ ವಿವಾಹವಾಗಿದ್ದರು. ದಂಪತಿ ಸುಬ್ಬಯ್ಯನ ಪಾಳ್ಯದ ಮನೆಯೊಂದರಲ್ಲಿ ನೆಲೆಸಿದ್ದರು. ಎಡ್ವಿನ್ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.
ವಿವಾಹವಾದ ಕೆಲವೇ ದಿನಗಳಲ್ಲೇ ಪತಿಗೆ ಪುರುಷತ್ವವಿಲ್ಲ. ಪುರುಷನಿಗೆ ಇರಬೇಕಾದ ಭಾವನೆಗಳಿಲ್ಲ ಎಂಬುದು ತಿಳಿಯಿತು. ಆದರೆ, ಮರ್ಯಾದೆಗೆ ಅಂಜಿ ಸಂಸಾರದ ವಿಚಾರವನ್ನು ಬಹಿರಂಗ ಪಡಿಸಿರಲಿಲ್ಲ. ಹೀಗೆ ಮೂರು ವರ್ಷ ಸಹಿಸಿಕೊಂಡು ಸಂಸಾರ ನಡೆಸಿದ್ದೇನೆ. ಆದರೂ ಪತಿ ಹಾಗೂ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು.
ಮಗನಿಗೆ ಪುರುಷತ್ವವಿಲ್ಲ ಎಂಬುದು ತಿಳಿದ ಅವರ ಪೋಷಕರು ಮುಚ್ಚಿಟ್ಟು ನನ್ನೊಂದಿಗೆ ವಿವಾಹ ಮಾಡಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಮಾ.16 ರಂದು ವಿಚಾರಣೆ ನಡೆಸಿದ ನ್ಯಾಯಾಲಯದ ಮೂವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.