ಬೆಂಗಳೂರು: ಯಲಹಂಕದ ಟಾಟಾ ರಮೇಶ್‌ಗೆ ಬೆದರಿಕೆ ಹಾಕಿದ ಪ್ರಕರಣದ ವಿಚಾರಣೆ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಐವರು ಹಳೇ ರೌಡಿಶೀಟರ್‌ಗಳ ವಿರುದ್ಧ ಬೆಂಗಳೂರು ಪೂರ್ವ ವಲಯದ ಪೊಲೀಸರು ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಇಬ್ಬರು ಇತ್ತೀಚೆಗೆ ಅಗ್ನಿ ಶ್ರೀಧರ್ ಮನೆಯಲ್ಲಿ ಬಂಧನಕ್ಕೊಳಗಾಗಿದ್ದರು.
ಮೊಹನ್ ಅಲಿಯಾಸ್ ಡಬ್ಬಲ್ ಮೀಟರ್ ಮೋಹನ್, ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ, ಸುನೀಲ್ ಅಲಿಯಾಸ್ ಸೈಲೆಂಟ್ ಸುನೀಲ, ರೋಹಿತ್ ಅಲಿಯಾಸ್ ಒಂಟೆ ಮತ್ತು ಪ್ರಮೋದ್ ಅಲಿಯಾಸ್ ಕರಿಯಪ್ಪ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೂರ್ವ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.
ಟಾಟಾ ರಮೇಶ್‌ಗೆ ಪ್ರಾಣ ಬೆದರಿಕೆ ಆರೋಪದಲ್ಲಿ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಮನೆಗಳಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದುದು ಪತ್ತೆಯಾಗಿತ್ತು. ಅಲ್ಲದೆ, ಆರೋಪಿಗಳೆಲ್ಲರೂ ಪರಸ್ಪರ ಪರಿಚಿತರಾಗಿದ್ದು, ಸಂಘಟಿತರಾಗಿ ಅಪರಾಧವೆಸಗಲು ಸಂಚು ರೂಪಿಸಿದ್ದರು. ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರು.
ಆರೋಪಿಗಳ ವಿರುದ್ಧ ಕೆಲ ವರ್ಷಗಳ ಹಿಂದೆಯೇ ನಗರದ ಕೆಲ ಠಾಣೆಗಳಲ್ಲಿ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಅಧಿಕಾರ ಬಳಸಿ ಅವರ ವಿರುದ್ಧ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಂಧಿತರ ಪೈಕಿ ಡಬ್ಬಲ್ ಮೀಟರ್ ಮೋಹನ್ ಹಾಗೂ ವಿಲ್ಸನ್‌ಗಾರ್ಡನ್ ನಾಗ ಫೆ.20ರಂದು ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಡಕಾಯಿತಿ ಮಾಡಲು ಸಂಚು ರೂಪಿಸಿದ್ದರು. ಈ ಮಾಹಿತಿ ಆಧಾರಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇವರಿಂದ ಸ್ವದೇಶಿ ಪಿಸ್ತೂಲು ಮತ್ತು 6 ಗುಂಡುಗಳು ಹಾಗೂ ಚಾಕು ಮತ್ತಿತರ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು.
ಅಗ್ನಿ ಮನೆಯಲ್ಲಿದ್ದರು: ರೋಹಿತ್ ಅಲಿಯಾಸ್ ಒಂಟೆ ತನ್ನ ಸಹಚರ ಸತೀಶ್ ಮೂಲಕ ಉದ್ಯಮಿ ಟಾಟಾ ರಮೇಶ್‌ಗೆ ಬೆದರಿಕೆ ಹಾಕಿಸಿದ್ದ. ಈ ಕೃತ್ಯಕ್ಕೆ ಸೈಲೆಂಟ್ ಸುನೀಲನೇ ಮುಖ್ಯಸ್ಥನಾಗಿದ್ದ. ಈತನ ಸೂಚನೆ ಮೇರೆಗೆ ಆರೋಪಿಗಳು ರಮೇಶ್‌ಗೆ ಪ್ರಾಣ ಬೆದರಿಕೆ ಹಾಕಿದ್ದರು.
5ನೇ ಕೋಕಾ ಪ್ರಕರಣ
ಕೋಕಾ ಕಾಯ್ದೆ ಅಡಿಯಲ್ಲಿ ದಾಖಲಾಗುತ್ತಿರುವ 3ನೇ ಪ್ರಕರಣ ಇದಾಗಿದೆ. ಬನ್ನಂಜೆ ರಾಜನ ಮೇಲೆ ಒಂದು ಕೇಸ್, ದಕ್ಷಿಣ ಕನ್ನಡದಲ್ಲಿ ಮತ್ತೂಂದು ಪ್ರಕರಣ, ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರ್ ಸೇರಿ ಇತರ ಕೆಲ ಆರೋಪಿಗಳ ವಿರುದ್ಧ, ಕೆ.ಆರ್.ಪುರ ಮಾಜಿ ಕಾರ್ಪೊರೇಟರ್ ಸುರಪುರ ಶ್ರೀನಿವಾಸ್ ಹತ್ಯೆ ಪ್ರಕರಣದ ಹಂತಕರನ್ನೂ ಇದೇ ಕಾಯ್ದೆಯಡಿ ಬಂಧಿಸಲಾಗಿತ್ತು.