ಹೊಟೇಲ್, ವಿಮಾನ ನಿಲ್ದಾಣ, ನಗರದ ಯಾವುದೋ ಮಾಲ್‌ಗೆ ಹೋಗುತ್ತೀರಿ. ನಿಮ್ಮ ಸ್ಥಳ ತಲುಪಿದ ಕೂಡಲೇ ಕಾರು ಅಲ್ಲೇ ಬಿಟ್ಟು ಹೋದರೂ ಅದನ್ನು ಸೂಕ್ತ ಕಡೆಯಲ್ಲಿ ಪಾರ್ಕ್ ಮಾಡಲು ಜನ ತಯಾರಿರುತ್ತಾರೆ. ಹೀಗೆ ಪಾರ್ಕ್ ಮಾಡುವ ಸೌಕರ್ಯಕ್ಕೆ ವ್ಯಾಲೆಟ್ ಪಾರ್ಕಿಂಗ್ ಎಂದು ಹೆಸರು. ಭಾರತದ ಅನೇಕ ಕಡೆಗಳಲ್ಲಿ ಕಾರು ಪಾರ್ಕ್ ಮಾಡಲು ಹೀಗೆ ಜನರನ್ನು ಬಳಸಲಾಗುತ್ತಿದ್ದರೆ, ವಿದೇಶದಲ್ಲಿ ಈಗ ರೊಬೋಟ್‌ಗಳು ಬಂದಿವೆ.
ಕಾರನ್ನು ನಿರ್ದಿಷ್ಟ ಸ್ಥಾನದಲ್ಲಿ ಬಿಟ್ಟು ಹೋದರೆ ರೊಬೋಟ್‌ಗಳೇ ಬಂದು ಪಾರ್ಕ್ ಮಾಡುತ್ತವೆ. ಲಂಡನ್‌ನ ಗೇಟ್‌ವಿಕ್ ವಿಮಾನ ನಿಲ್ದಾಣದಲ್ಲಿ ಈಗ ರೊಬೋಟ್ ವ್ಯಾಲೆಟ್ ಜಾರಿಗೆ ಬಂದಿದೆ. ಕಳೆದ ಆಗಸ್ಟ್ ತಿಂಗಳಿಂದ ರೊಬೋಟ್‌ಗಳು ಕಾರು ಪಾರ್ಕಿಂಗ್ ಮಾಡುತ್ತಿವೆ.
ಮಿಲಿಟರಿ ಗ್ರೇಡ್‌ನ ಜಿಪಿಎಸ್ ವ್ಯವಸ್ಥೆಗಳನ್ನು ಈ ರೊಬೋಟ್‌ಗಳು ಹೊಂದಿದ್ದು, ಕಾರು ಪಾರ್ಕಿಂಗ್ ಸ್ಥಳದಲ್ಲಿ ಖಾಲಿ ಜಾಗವನ್ನು ಗುರುತಿಸಿ ತನ್ನಿಂದ ತಾನಾಗಿಯೇ ಪಾರ್ಕ್ ಮಾಡುತ್ತವೆ. ಕಾರನ್ನು ಪ್ರಯಾಣಿಕರು ನಿರ್ದಿಷ್ಟ ಜಾಗದಲ್ಲಿ ನಿಲ್ಲಿಸಿ ಹೋದರೆ, ಅದನ್ನು ಗುರುತಿಸುವ ರೊಬೋಟ್‌ಗಳು ಕಾರನ್ನು ತುಸು ಎತ್ತಿ ಅವುಗಳನ್ನು ನಿರ್ದಿಷ್ಟ ಜಾಗದಲ್ಲಿ ಪಾರ್ಕ್ ಮಾಡುತ್ತವೆ. ಸುಮಾರು 100 ಕಾರುಗಳನ್ನು ಪಾರ್ಕ್ ಮಾಡುವಷ್ಟು ಜಾಗವನ್ನು ರೊಬೋಟ್‌ಗಳಿಗೆ ನೀಡಲಾಗಿದೆ.
ಕಾರುಗಳ ಅಗಲ-ಉದ್ದವನ್ನು ಊಹಿಸುವ ರೊಬೋಟ್‌ಗಳು ಅಷ್ಟೇ ಜಾಗವಿರುವಲ್ಲಿ ಪಾರ್ಕ್ ಮಾಡುತ್ತವೆ. ಪ್ರಯಾಣಿಕರ ಟೋಕನ್ ಮೂಲಕ ಇವುಗಳು ಕಾರುಗಳನ್ನು ಗುರುತಿಸುತ್ತವೆ. ಸ್ಟಾನ್ಲಿ ರೊಬೋಟಿಕ್ಸ್ ಹೆಸರಿನ ಕಂಪೆನಿ ಇವುಗಳನ್ನು ಆವಿಷ್ಕಾರ ಮಾಡಿದ್ದು, ಪಾರ್ಕಿಂಗ್ ಪ್ರದೇಶದಲ್ಲಿ ಆಗುವ ಗೊಂದಲಗಳನ್ನು ಪರಿಹರಿಸುತ್ತವೆ. ವಿಮಾನ ಪ್ರಯಾಣ ಮಾಡಿ ಬರುವ ಪ್ರಯಾಣಿಕ ತನ್ನಲ್ಲಿರುವ ಟೋಕನ್ ನಂಬರನ್ನು ಮತ್ತೆ ಕಂಪ್ಯೂಟರ್‌ಗೆ ನಮೂದಿಸಿದರೆ, ಪಾರ್ಕಿಂಗ್‌ನಿಂದ ಮತ್ತೆ ರೊಬೋಟ್ ಕಾರನ್ನು ತಂದು ಒಪ್ಪಿಸುತ್ತವೆ. ಈಗಾಗಲೇ ರೊಬೋಟ್ ಪಾರ್ಕಿಂಗ್ ಯಶಸ್ವಿಯಾಗಿದ್ದು, ಇದನ್ನು ಇತರ ವಿಮಾನ ನಿಲ್ದಾಣಗಳಲ್ಲೂ ಅಳವಡಿಸುವ ಇರಾದೆಯನ್ನು ಕಂಪೆನಿ ಹೊಂದಿದೆ.