ಬೆಂಗಳೂರು: ನಗರದ ಅಲ್ಲಲ್ಲಿ ನೀರವ ಮೌನ, ಅಗಲಿದ ನೆಚ್ಚಿನ ನಾಯಕನ ಭಾವಚಿತ್ರದ ಮುಂದೆ ನಿಂತು ಮಿಡಿವ ಹೃದಯಗಳು, ಬೆಳ್ಳಂಬೆಳಗ್ಗೆಯೇ ಪ್ರೀತಿಪಾತ್ರ ನಟನ ಅಂತಿಮ ದರ್ಶನಕ್ಕೆ ಹೊರಟ ಅಭಿಮಾನಿಗಳ ಗುಂಪು, ಬಿಕೋ ಎನ್ನುತ್ತಿದ್ದ ಗಾಂಧಿನಗರ… ಹಿರಿಯ ನಟ ಅಂಬರೀಶ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಕಂಡುಬಂದ ದೃಶ್ಯಗಳಿವು.
ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಮತ್ತು ಆ ಮೂಲಕ ಜನರನ್ನು ಸೆಳೆದ ರೆಬೆಲ್ ಸ್ಟಾರ್ ಕಣ್ಮರೆಗೆ ನಗರದ ಪ್ರಮುಖ ಬೀದಿಗಳು ಕಂಬನಿ ಮಿಡಿದವು. ಅಭಿಮಾನಿಗಳ ಬಳಗಗಳು ಅಂಬರೀಶ್ ಅವರ ವಿವಿಧ ಭಂಗಿಗಳ ಭಾವಚಿತ್ರಗಳನ್ನು ಹಾಕಿ, ಪುಷ್ಪನಮನ ಸಲ್ಲಿಸಿತು. ಅದರ ಮುಂದೆ ಹಾದುಹೋಗುವವರೆಲ್ಲಾ ಅಗಲಿದ ನಟನಿಗೆ ನಮನ ಸಲ್ಲಿಸುತ್ತಿದ್ದುದು ಸಾಮಾನ್ಯವಾಗಿತ್ತು. ಈ ಮಧ್ಯೆ ವಾರಾಂತ್ಯದ ರಜೆ ಕೂಡ ಇದ್ದುದರಿಂದ ಜನ, ವಾಹನ ಸಂಚಾರ ವಿರಳವಾಗಿತ್ತು. ಇದರಿಂದ ಸಾವಿನ ಸೂತಕದ ಛಾಯೆ ಆವರಿಸಿದಂತಿತ್ತು.
ಅಭಿಮಾನಿಗಳು ಸ್ವತಃ ಬಂಧುವೊಬ್ಬ ತಮ್ಮಿಂದ ದೂರವಾಗಿದ್ದಾನೆ ಎಂಬಂತೆ ಭಾರವಾದ ಮುಖಹೊತ್ತು ಕಂಠೀರವ ಕ್ರೀಡಾಂಗಣದತ್ತ ದೌಡಾಯಿಸುತ್ತಿರುವುದು ಕಂಡುಬಂತು. ನಗರದ ವಿವಿಧ ಭಾಗಗಳಿಂದ ಬೆಳಿಗ್ಗೆಯೇ ಬೈಕ್, ಆಟೋಗಳಲ್ಲಿ, ಮಂಡ್ಯ ಸೇರಿದಂತೆ ಮತ್ತಿತರ ಕಡೆಗಳಿಂದ ಬಸ್‌ಗಳಲ್ಲಿ ತಂಡೋಪತಂಡವಾಗಿ ಧಾವಿಸುತ್ತಿದ್ದರು. ಮೆಜೆಸ್ಟಿಕ್‌ನಲ್ಲಂತೂ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ, ಅಂತಿಮ ದರ್ಶನಕ್ಕೆ ತೆರಳಿದ್ದರು.
ಯಶವಂತಪುರ ಮಾರುಕಟ್ಟೆ ರಸ್ತೆಯಲ್ಲಿ ವೀರಶೈವ ವೇದಿಕೆ ವೈಪಿಆರ್ ಟ್ರಸ್ಟ್, ಬಿ.ಕೆ. ನಗರದ ಮಹಾತ್ಮ ಗಾಂಧಿ ಯುವಕರ ಸಂಘ, ದಾಸರಹಳ್ಳಿಯ ರಾಕ್‌ಸ್ಟಾರ್ ಬಾಯ್ಸ, ಬಾಗಲುಗುಂಟೆ, ಯಶವಂತಪುರ ಮಿನಿ ಬಜಾರ್ ಬಳಿ ವಿವಿಧ ಅಭಿಮಾನಿ ಬಳಗಗಳು, ಜೆ.ಪಿ. ಪಾರ್ಕ್ ಬಳಿ ಬಿಜೆಪಿ ಕಾರ್ಯಕರ್ತರು, ಮತ್ತಿಕೆರೆ, ಮಲ್ಲೇಶ್ವರದಲ್ಲಿ ಆಟೋ ಚಾಲಕರ ಸಂಘಗಳು, ಹಡ್ಸನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತಗಳಲ್ಲಿ ಅಂಬರೀಶ್ ಅವರ ಭಾವಚಿತ್ರದ ಫಲಕ ಹಾಕಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಗಾಂಧಿನಗರದಲ್ಲಂತೂ ಎಂದಿನ ಗೌಜು-ಗದ್ದಲ ಇರಲಿಲ್ಲ. ಜನ ಸಂಚಾರ ವಿರಳವಾಗಿದ್ದು, ಬಿಕೋ ಎನ್ನುತ್ತಿತ್ತು. ಚಿತ್ರಮಂದಿರಗಳು, ನಾಟಕ ಮಂದಿರ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತಿತರ ಕಡೆಗಳಲ್ಲಿ ಮೈಸೂರು ಪೇಟಾಧಾರಿಯಾಗಿ ಸಿಂಹಾಸನದಲ್ಲಿ ವಿರಾಜಮಾನರಾದ ಅಂಬರೀಶ್ ಅವರ ಚಿತ್ರಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯ ಫೋಟೋಗಳು ಅಲ್ಲಲ್ಲಿ ಕಂಡವು.
* ವಿಜಯ್‌ಕುಮಾರ್ ಚಂದರಗಿ