Advertisement
ಒಂದೊಂದಾಗಿ ನೆಲಕ್ಕುರುಳುತ್ತಿರುವ ಜಾಹೀರಾತು ಫಲಕಗಳು, ಮಾಯವಾಗಿರುವ ಪೋಸ್ಟರ್‌ಗಳು, ಶುಭ ಕೋರುವ ಫ್ಲೆಕ್ಸ್‌ಗಳು, ಗೋಡೆಗಳ ಮೇಲೆ ಮೂಡುತ್ತಿದೆ ಬಣ್ಣ ಬಣ್ಣದ ಚಿತ್ತಾರ. ಬಿಬಿಎಂಪಿಯನ್ನು ಫ್ಲೆಕ್ಸ್ ಹಾಗೂ ಬ್ಯಾನರ್ ಮುಕ್ತ ಮಾಡಲು ಆರಂಭಿಸಿರುವ ಕಾರ್ಯಾಚರಣೆಯಿಂದಾಗಿ ರಾಜಧಾನಿ ಬೆಂಗಳೂರು ಹೊಸ ರೂಪ ಪಡೆಯುತ್ತಿದೆ.ನಗರದಲ್ಲಿ ಕಳೆದೊಂದು ತಿಂಗಳಲ್ಲಿ ನಡೆದ ಕ್ಷಿಪ್ರ ಫ್ಲೆಕ್ಸ್ ತೆರವು ಕಾರ್ಯಾಚರಣೆ ಫಲವಾಗಿ ನಗರದೆಲ್ಲೆಡೆ ಕಂಡು ಬರುತ್ತಿರುವ ದೃಶ್ಯಗಳಿವು.
Related Articles
Advertisement
ಬೆದರಿದ ಏಜೆನ್ಸಿಗಳು: ಪಾಲಿಕೆ ಈ ಹಿಂದೆ ಹಲವು ಬಾರಿ ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾದರೂ, ಯಾವುದೇ ಪ್ರಾಯೋಜನ ಆಗಿರಲಿಲ್ಲ. ಜತೆಗೆ ಪಾಲಿಕೆ ತೆರವು ಆದೇಶಗಳಿಗೆ ಜಾಹೀರಾತು ಏಜೆನ್ಸಿಗಳು ಕ್ಯಾರೆ ಎನ್ನುತ್ತಿರಲಿಲ್ಲ. ಇದೀಗ ಫ್ಲೆಕ್ಸ್, ಜಾಹೀರಾತು ವಿರುದ್ಧ ಹೈಕೋರ್ಟ್ ಗರಂ ಆಗಿರುವ ಹಿನ್ನೆಲೆಯಲ್ಲಿ ಪಾಲಿಕೆಯು ಕ್ಷಿಪ್ರ ಕಾರ್ಯಾಚರಣೆ ಮೂಲಕ ಜಾಹೀರಾತು ಫಲಕಗಳ ವಿರುದ್ಧ ಸಮರ ಸಾರಿದ್ದು, ಇದಕ್ಕೆ ಬೆದರಿದ ಏಜೆನ್ಸಿಗಳು ತಾವು ಅಳವಡಿಸಿದ ಫಲಕಗಳ ತೆರವಿಗೆ ಮುಂದಾಗಿವೆ.
ಜಾಹೀರಾತು ಫಲಕ ಶಾಶ್ವತ ಬ್ಯಾನ್: ಈವರೆಗೆ 25 ಸಾವಿರಕ್ಕೂ ಹೆಚ್ಚಿನ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳನ್ನು ತೆರವುಗೊಳಿಸಿರುವ ಪಾಲಿಕೆ, ನಗರದಲ್ಲಿ ಒಂದು ವರ್ಷದ ಮಟ್ಟಿಗೆ ಎಲ್ಲ ರೀತಿಯ ಜಾಹೀರಾತು ಪ್ರದರ್ಶನ ನಿಷೇಧಿಸಿ ನಿರ್ಣಯ ಕೈಗೊಂಡಿದೆ. ಇದೀಗ ಸರ್ಕಾರಿ ಜಾಹೀರಾತು ಫಲಕಗಳನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ಜಾಹೀರಾತು ಫಲಕಗಳಿಗ ಶಾಶ್ವತವಾಗಿ ಮುಕ್ತಿ ನೀಡಲು ನಿರ್ಧರಿಸಿದೆ. ಜತೆಗೆ ಏಜೆನ್ಸಿಗಳಿಂದ ಹಲವು ವರ್ಷಗಳಿಂದ ಬರಬೇಕಾದ ಜಾಹೀರಾತು ಬಾಕಿ ಶುಲ್ಕ ವಸೂಲಾತಿಗೂ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.
ತಲೆನೋವಾಗಿರುವ ಸ್ಟ್ರಕ್ಚರ್ ತೆರವು: ಪಾಲಿಕೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಜಾಹೀರಾತು ಫಲಕಗಳಿದ್ದು (ಕಬ್ಬಿಣದ ಸ್ಟ್ರಕ್ಚರ್), ಅವುಗಳ ತೆರವು ಕಾರ್ಯ ಪಾಲಿಕೆಗೆ ತಲೆನೋವಾಗಿದೆ. ಖಾಸಗಿ ಸ್ಥಳಗಳಲ್ಲಿ ಹಾಕಿರುವ ಫಲಕಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಆ.30ರೊಳಗೆ ಏಜೆನ್ಸಿಗಳು ಪಾಲಿಕೆಗೆ ಸಲ್ಲಿಸಬೇಕು ಇಲ್ಲವೆ, ಫಲಕಗಳನ್ನು ತೆರವುಗೊಳಿಸಬೇಕು. ಒಂದೊಮ್ಮೆ ಅವರೇ ಫಲಕ ತರೆವಿಗೆ ಮುಂದಾಗಿದ್ದರೆ, ಪಾಲಿಕೆಯಿಂದಲೇ ಖುದ್ದು ಅಂತಹ ಫಲಕಗಳನ್ನು ತೆರವು ಕಾರ್ಯ ಕೈಗೊಂಡು ಅದರ ವೆಚ್ಚ ಏಜೆನ್ಸಿಗಳಿಂದ ವಸೂಲಿ ಮಾಡಲಾಗತ್ತದೆ.
ಒಂದು ಫಲಕ ನೂರಾರು ಟನ್ ತೂಕವಿರುವುದರಿಂದ ಅದನ್ನು ತೆರವುಗೊಳಿಸಲು ಕ್ರೇನ್‌ಗಳ ಅವಶ್ಯಕತೆ ಇದೆ. ಪ್ರಸ್ತುತ ಪಾಲಿಕೆ ಬಳಿ 10 ಸಾವಿರ ಫಲಕಗಳನ್ನು ತೆರವುಗೊಳಿಸಲು ಅವಶ್ಯಕವಾಗಿರುವ ಕ್ರೇನ್, ಕಟ್ಟರ್ ಸೇರಿದಂತೆ ಸಿಬ್ಬಂದಿಗಳ ಕೊರತೆ ಇದ್ದು, ಪಾಲಿಕೆ ಇದು ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿಯೇ ಗಡುವು ಮುಗಿದ ನಂತರ ಫಲಕಗಳ ತೆರವು ಕಾರ್ಯವನ್ನು ಗುತ್ತಿಗೆ ನೀಡಲು ಪಾಲಿಕೆ ನಿರ್ಧರಿಸಿದೆ.
ಯಾರಿಗೂ ಮುಲಾಜಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾಹೀರಾತು ಫಲಕ ಹಾಗೂ ಭಿತ್ತಿಪತ್ರ ಅಳವಡಿಸಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಯುಕ್ತರು ಈಗಾಗಲೇ ಆದೇಶಿಸಿದ್ದಾರೆ. ಅದರಂತೆ ಇತ್ತೀಚೆಗೆ ಬಿಜೆಪಿ ಮುಖಂಡ ಚಿ.ನಾ.ರಾಮು ಹಾಗೂ ಆರ್.ಆರ್.ನಗರ ಪಾಲಿಕೆ ಸದಸ್ಯರ ಬೆಂಬಲಿಗರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಫ್ಲೆಕ್ಸ್ ಮುಕ್ತಿಗೆ ಮೂಹೂರ್ತ ಫಿಕ್ಸ್ ಆಗಿದ್ದು ಹೇಗೆ?: ನಗರದಲ್ಲಿ ಫ್ಲೆಕ್ಸ್ ಹಾವಳಿ ಎಷ್ಟರ ಮಟ್ಟಿಗೆ ಹೆಚ್ಚಾಗಿತ್ತೆಂದರೆ ಸಚಿವರೊಬ್ಬರ ಹುಟ್ಟುಹಬ್ಬಕ್ಕೆ ಶುಭ ಕೋರುವ ಫ್ಲೆಕ್ಸ್‌ಗಳನ್ನು ಜಾಹೀರಾತು ನಿಷೇಧಿತ ವಲಯವಾದ ವಿಧಾನಸೌಧ ಹಾಗೂ ಹೈಕೋರ್ಟ್ ಸಮೀಪವೂ ಅಳವಡಿಸಲಾಗಿತ್ತು. ಇದರಿಂದ ಗರಂ ಆದ ಹೈಕೋರ್ಟ್ ಆಗಸ್ಟ್ 1 ರಂದು ಹೈಕೋರ್ಟ್ ಪಾಲಿಕೆ ಆಯುಕ್ತರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಸಂಜೆ ವೇಳೆಗೆ ನಗರದಲ್ಲಿರುವ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಆ ಹಿನ್ನೆಲೆಯಲ್ಲಿ ಪಾಲಿಕೆ ತನ್ನೆಲ್ಲ ಕೆಲಸಗಳನ್ನು ಬದಿಗೊತ್ತಿ ಫ್ಲೆಕ್ಸ್ ತೆರವಿಗೆ ಮುಂದಾಯಿತು. ಅದರ ಆ ನಂತರವೂ ಹೈಕೋರ್ಟ್ ಪಾಲಿಕೆಗೆ ಚಾಟಿ ಬೀಸಿ ನೀವು ಫ್ಲೆಕ್ಸ್ ತೆರವುಗೊಳಿಸುವವರೆಗೆ ನಿಮ್ಮನ್ನು ಬಿಡುವುದಿಲ್ಲ ಎಂದು ಕಟು ಮಾತುಗಳಿಂದ ಎಚ್ಚರಿಸಿದರಿಂದ ಎರಡು ದಿನಗಳಲ್ಲಿ ಸಾವಿರಾರು ಫ್ಲೆಕ್ಸ್ ತೆರವುಗೊಳಿಸಿತ್ತು.
ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಕಿಡಿಕೇಡಿಗಳು ಹಲ್ಲೆ ಮಾಡಿದ್ದಕ್ಕೆ ಮತ್ತಷ್ಟು ಗರಂ ಆದ ಹೈಕೋರ್ಟ್, ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡು, ಅಗತ್ಯ ಭದ್ರತೆ ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದರಿಂದಾಗಿ ಹತ್ತಾರು ವರ್ಷಗಳಿಂದ ಬಗೆಹರಿಯದ ಫ್ಲೆಕ್ಸ್ ಸಮಸ್ಯೆ ಕೇವಲ 25 ದಿನಗಳಲ್ಲಿ ಹತೋಟಿಗೆ ಬಂದಿದ್ದು, 25 ಸಾವಿರಕ್ಕೂ ಹೆಚ್ಚು ಫ್ಲೆಕ್ಸ್ ತೆರವುಗೊಳಿಸಲಾಗಿದೆ.
ತೆರವಾದ ಫ್ಲೆಕ್ಸ್ ಸಿಮೆಂಟ್ ಕಾರ್ಖಾನೆ: ಬಿಬಿಎಂಪಿ ವತಿಯಿಂದ ನಗರದಾದ್ಯಂತ ನಡೆಸಿದ ಫ್ಲೆಕ್ಸ್ ತೆರವು ಕಾರ್ಯಾಚರಣೆಯಲ್ಲಿ ಸಂಗ್ರಹವಾದ ಫ್ಲೆಕ್ಸ್ ತ್ಯಾಜ್ಯವನ್ನು ಬಿಬಿಎಂಪಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ರವಾನೆ ಮಾಡಲಾಗಿದ್ದು, ಅದನ್ನು ಆರ್‌ಡಿಎಫ್ ಆಗಿ ಪರಿವರ್ತಿಸಲಾಗಿದೆ. ಹೀಗೆ ಪರಿವರ್ತನೆಯಾದ ಆರ್‌ಡಿಎಫ್ನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಕಾಯ್ದೆ ಏನು ಹೇಳುತ್ತದೆ?: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಗೂ ಬಾವುಟನ್ನು ಅಳವಡಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಅದರಂತೆ ತಪ್ಪಿತಸ್ಥರ ವಿರುದ್ಧ ಕೆಎಂಸಿ ಕಾಯ್ದೆ 1976ರ ಮತ್ತು ಕರ್ನಾಟಕ ಮುಕ್ತ ಪ್ರದೇಶಗಳ (ಸಂರಕ್ಷಣೆ) ಕಾಯ್ದೆ 1981ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ಕಾಯ್ದೆಯಂತೆ ತಪ್ಪಿತಸ್ಥರಿಗೆ 6 ತಿಂಗಳವರೆಗೆ ಜೈಲುವಾಸ ಅಥವಾ 1 ಲಕ್ಷ ರೂ. ದಂಡ ಅಥವಾ ದಂಡದೊಂದಿಗೆ ಜೈಲುವಾಸ ವಿಧಿಸಲಾಗುತ್ತದೆ.
ತೆರವುಗೊಳಿಬೇಕು ಇಲ್ಲವೆ, ಜೈಲಿಗೆ ಹೋಗಬೇಕು: ಪಾಲಿಕೆಯ ವ್ಯಾಪ್ತಿಯ ಪಾದಚಾರಿ ಮಾರ್ಗ, ರಾಜಕಾಲುವೆ ಹಾಗೂ ಉದ್ಯಾನಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ಪಾಲಿಕೆಯಿಂದಲೇ ತೆರವುಗೊಳಿಸುತ್ತೇವೆ. ಇನ್ನು ಖಾಸಗಿ ಜಾಗದಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ಜಾಗದ ಮಾಲೀಕರೇ ಆ.30ರೊಳಗೆ ತೆರವುಗೊಳಿಸಬೇಕು. ಇಲ್ಲವೆ ಅಗತ್ಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕು. ಒಂದೊಮ್ಮೆ ತೆರವುಗೊಳಿಸಲು ಮುಂದಾಗದಿದ್ದರೆ ಫಲಕವಿರುವ ಆಸ್ತಿಯ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಜಾಹೀರಾತು ತೆರವಿಗೆ ಆ್ಯಪ್: ನಗರದ ಖಾಸಗಿ ಆಸ್ತಿಗಳಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳ ಪತ್ತೆಗೆ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಿದ್ದು, ಈಗಾಗಲೇ ಅಧಿಕಾರಿಗಳು ಅನಧಿಕೃತ ಫಲಕಗಳ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅದರಂತೆ ಜಾಹೀರಾತು ಫಲಕವಿರುವ ಜಾಗ, ಜಾಗದ ಮಾಲೀಕರು, ಆಸ್ತಿ ತೆರಿಗೆ ಪಾವತಿ ವಿವರ ಸೇರಿದಂತೆ ವಿವಿಧ ಮಾಹಿತಿ ಕಲೆ ಹಾಕಿದ್ದು, ಅದನ್ನು ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಿದ್ದಾರೆ. ಅನಧಿಕೃತ ಜಾಹೀರಾತು ಫಲಕಗಳ ವಿವರ
ವಲಯ ಫಲಕಗಳ ಸಂಖ್ಯೆ
-ಯಲಹಂಕ 536
-ಮಹದೇವಪುರ 1,327
-ದಾಸರಹಳ್ಳಿ 198
-ಆರ್.ಆರ್.ನಗರ 186
-ಬೊಮ್ಮನಹಳ್ಳಿ 481
-ದಕ್ಷಿಣ 2,293
-ಪಶ್ಚಿಮ 1,244
-ಪೂರ್ವ 3,907
-ಒಟ್ಟು 10,172 * ವೆಂ.ಸುನೀಲ್‌ಕುಮಾರ್