Advertisement
ಹೋಟೆಲ್ ಹಾಗೂ ಕ್ಲಬ್‌ಗಳಲ್ಲಿ ಈಗಾಗಲೇ ಹೊಸ ವರ್ಷದ ಪ್ರಯುಕ್ತ ಚಲನಚಿತ್ರ ನಟ-ನಟಿಯರ ಕಾರ್ಯಕ್ರಮಗಳು ಆಯೋಜಿಸಿದ್ದು, ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಸಹ ನಡೆಯುತ್ತಿದೆ. ಮಾಲ್‌ಗಳಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಡಿ. 31 ರಂದು ರಾತ್ರಿ ಹಲವು ಕಾರ್ಯಕ್ರಮಗಳನ್ನೂ ನಗರದ ಮಾಲ್‌ಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಹೊಸ ವರ್ಷ ಸ್ವಾಗತಿಸಲು ನಾಲ್ಕೈದು ದಿನಗಳಿಂದಲೇ ಹೋಟೆಲ್ ಹಾಗೂ ಕ್ಲಬ್‌ಗಳು ಮುಂದಾಗಿದ್ದು ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.
Related Articles
Advertisement
ನೂತನ ವರ್ಷಕ್ಕೆ ಅನಂತ ನಮನ: ಪ್ರತಿವರ್ಷ ಡಿ.30 ರಿಂದ ಜ.1ವರೆಗೆ ಅದಮ್ಯ ಚೇತನದಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೇವಾ ಉತ್ಸವ ಹಮ್ಮಿಕೊಳ್ಳುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿತ್ತು. ಡಿ.31ರ ಮಧ್ಯರಾತ್ರಿ ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಸಂಕಲ್ಪ ಮಾಡಿ, ವಂದೇಮಾತರಂ ಗೀತೆ ಹಾಡಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಸೇವಾ ಉತ್ಸವದ ಬದಲಾಗಿ ಅನಂತ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರತಿವರ್ಷ ಮಾಡುತ್ತಿರುವ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂಬುದು ಅನಂತಕುಮಾರ್ ಅವರ ಆಶಯವಾಗಿತ್ತು. ಹೀಗಾಗಿ ಈ ಬಾರಿ ಸೇವಾ ಉತ್ಸವದ ಬದಲಾಗಿ ಅನಂತಕುಮಾರ್ ಅವರಿಗೆ ಸಂಗೀತ ಮತ್ತು ಚಿತ್ರದ ಮೂಲಕ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಡಿ.31ರ ಮಧ್ಯರಾತ್ರಿ ಹೊಸ ಸಂಕಲ್ಪ ಮಾಡಿ ವಂದೇಮಾತರಂ ಗೀತೆ ಹಾಡಲಾಗುವುದು ಎಂದು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ.
ಡಿ.30ರಂದು ಸಂಜೆ 5ಕ್ಕೆ ಅನಂತನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಚಿತ್ರನಮನದಲ್ಲಿ ಅವರ ಬಾಲ್ಯದಿಂದ ಅವರು ನಿಧನರಾಗುವರೆಗಿನ ಛಾಯಾಚಿತ್ರಗಳ ಪ್ರದರ್ಶನ ಇರಲಿದೆ. 1500ಕ್ಕೂ ಹೆಚ್ಚಿನ ಚಿತ್ರಗಳು ಈ ಪ್ರದರ್ಶನದಲ್ಲಿ ಇರಲಿವೆ. ಡಿ.31ರಂದು ಗೀತ ನಮನ ಹಮ್ಮಿಕೊಳ್ಳಲಾಗಿದ್ದು, ಪ್ರಸಿದ್ಧ ಗಾಯಕರು ದೇಶಭಕ್ತಿ ಗೀತೆ ಹಾಗೂ ಭಾವಗೀತೆಗಳನ್ನು ಹಾಡಲಿದ್ದಾರೆ.
ಹುಸೇನ್ ಸಾಬ್, ಸಂಗೀತ ಕಟ್ಟಿ, ನರಹರಿ ದಿಕ್ಷಿತ್, ಚಂದ್ರಿಕ ಗುರುರಾಜ್, ಶ್ರೀನಿವಾಸ ಉಡುಪ, ಆನೂರು ಅನಂತಕೃಷ್ಣ ಶರ್ಮ, ವೀಣಾವಾರುಣಿ ಮತ್ತಿತರರು ಭಾಗವಹಿಸಲಿದ್ದಾರೆ. ಜ.1ರಂದು ಸಂಜೆ 4ಕ್ಕೆ ಸಾವಿರಾರು ಮಂದಿ ಏಕಕಾಲದಲ್ಲಿ ವಂದೇ ಮಾತರಂ ಗೀತೆ ಹಾಡುವ ಮೂಲಕ ಅನಂತ ನಮನ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.