Advertisement

ಸೌಲಭ್ಯಕ್ಕೆ ಸಾಮರ್ಥ್ಯವೇ ಮಾನದಂಡ

11:55 AM Jun 25, 2018 | |

ಬೆಂಗಳೂರು: ಸಾಮಾನ್ಯವಾಗಿ ಐಟಿ ಕಂಪನಿಗಳಲ್ಲಿ ಟೆಕ್ಕಿಗಳ ಸಾಮರ್ಥ್ಯ ಅಳೆಯಲು ಮೌಲ್ಯಮಾಪನ ನಡೆಸಲಾಗುತ್ತದೆ. ಅಲ್ಲಿ ಗಳಿಸುವ ರ್‍ಯಾಂಕ್‌ ಆಧರಿಸಿ ವೇತನ ಹೆಚ್ಚಳ ಮಾಡಲಾಗುತ್ತದೆ. ಇದೇ ಮಾದರಿಯ ಮೌಲ್ಯಮಾಪನ ಪದ್ಧತಿ ಮೂಲಕ ಚಾಲಕ ಮತ್ತು ನಿರ್ವಾಹಕರ ಸಾಮರ್ಥ್ಯ ಅಳೆಯಲು ಬಿಎಂಟಿಸಿ ಮುಂದಾಗಿದೆ. ಆದರೆ, ಇದು ವೇತನ ಹೆಚ್ಚಳಕ್ಕಾಗಿ ಅಲ್ಲ; ಸಂಸ್ಥೆಯಲ್ಲಿ ನೀಡಲಾಗುವ ಸೌಲಭ್ಯಗಳಿಗಾಗಿ.

Advertisement

ಹೌದು, ಬಡ್ತಿ ಹೊರತುಪಡಿಸಿ ಉಳಿದೆಲ್ಲ ಪ್ರಕಾರದ ಸೌಲಭ್ಯಗಳಿಗೆ ಇನ್ನುಮುಂದೆ ಚಾಲಕರು ಮತ್ತು ನಿರ್ವಾಹಕರು ಮೌಲ್ಯಮಾಪನದಲ್ಲಿ ಪಡೆದ ರ್‍ಯಾಂಕ್‌ ಮಾನದಂಡವಾಗಲಿದೆ. ಈಗಾಗಲೇ ಮೊದಲ ತ್ತೈಮಾಸಿಕ (ಜನವರಿ-ಮಾರ್ಚ್‌) ಮೌಲ್ಯಮಾಪನ ಫ‌ಲಿತಾಂಶ ಹೊರಬಿದ್ದಿದ್ದು, ರ್‍ಯಾಂಕ್‌ಗಳ ಪಟ್ಟಿಯನ್ನು ಎಲ್ಲ ಬಿಎಂಟಿಸಿ ಡಿಪೋಗಳ ಸೂಚನಾ ಫ‌ಲಕದಲ್ಲಿ ಹಾಕಲಾಗಿದೆ. ಸರ್ಕಾರಿ ಸಂಸ್ಥೆಯೊಂದರಲ್ಲಿ ಇದೇ ಮೊದಲ ಬಾರಿ ಇಂಥದ್ದೊಂದು ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. 

ವರ್ಗಾವಣೆ, ರಜೆ, ವಾರದ ರಜೆ ಸೇರಿದಂತೆ ಸಂಸ್ಥೆಯಲ್ಲಿ ನೀಡಲಾಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದರಲ್ಲಿ ಪಾರದರ್ಶಕತೆ ಜತೆಗೆ ಸಂಸ್ಥೆಗಾಗಿ ಶ್ರಮಿಸುವ ಸಿಬ್ಬಂದಿಯನ್ನು ಗುರುತಿಸಿ ಪ್ರೋತ್ಸಾಹಿಸಲು ಸಾಮರ್ಥ್ಯ ಪರೀಕ್ಷೆ ನಡೆಸಿ, ರ್‍ಯಾಂಕಿಂಗ್‌ ನೀಡುವ ವ್ಯವಸ್ಥೆಯನ್ನು ಬಿಎಂಟಿಸಿ ಪರಿಚಯಿಸಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಮೌಲ್ಯಮಾಪನ ನಡೆಯಲಿದೆ.

ಸೇವಾ ಹಿರಿತನ ಮಾನದಂಡ: ಈಗಿರುವ ವ್ಯವಸ್ಥೆಯಲ್ಲಿ ಸೇವಾ ಹಿರಿತನ ಆಧರಿಸಿ ಸೌಲಭ್ಯ ನೀಡಲಾಗುತ್ತಿದೆ. ಉದಾಹರಣೆಗೆ ಪ್ರತಿ ವರ್ಷ ವರ್ಗಾವಣೆ ಮಾಡುವಾಗ ಆಯಾ ಘಟಕಗಳಲ್ಲಿ ಸಲ್ಲಿಸಿರುವ ಅರ್ಜಿಗಳಲ್ಲಿ ಸೇವಾ ಹಿರಿತನ ಪರಿಗಣಿಸಲಾಗುತ್ತಿತ್ತು. ಆದರೆ, ಇನ್ನುಮುಂದೆ ಇದು ಲೆಕ್ಕಕ್ಕಿಲ್ಲ. ಬದಲಿಗೆ ಸಿಬ್ಬಂದಿ, ಸಾಮರ್ಥ್ಯ ಮೌಲ್ಯಮಾಪನದಲ್ಲಿ ಪಡೆದ ರ್‍ಯಾಂಕ್‌ ಮಾನದಂಡವಾಗಲಿದೆ.

ಆರಂಭದಲ್ಲಿ ಇದು ಚಾಲಕ ಮತ್ತು ನಿರ್ವಾಹಕರಿಗೆ ಮಾತ್ರ ಅನ್ವಯಿಸಲಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಸಿಬ್ಬಂದಿಯನ್ನೂ ಮೌಲ್ಯಮಾಪನ ಪದ್ಧತಿ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಚಾಲಕರು-ನಿರ್ವಾಹಕರ ಚಾಲನಾ ಅವಧಿ, ಅನುಸೂಚಿತವಲ್ಲದ ಹೆಚ್ಚುವರಿ ಸೇವೆ, ಸೇವೆ ಪ್ರಕಾರ (ಪಾಳಿ), ಪ್ರಯಾಣಿಕರ ರೇಟಿಂಗ್‌, ನಿಗದಿತ ಮಾರ್ಗ ಪೂರ್ಣಗೊಳಿಸಿರುವುದು ಸೇರಿದಂತೆ ಮೌಲ್ಯಮಾಪನಕ್ಕಾಗಿ ಹಲವು ಮಾನದಂಡಗಳನ್ನೂ ಹಾಕಲಾಗಿದೆ.

Advertisement

ಈ ಎಲ್ಲ ದತ್ತಾಂಶಗಳು ಕಂಪ್ಯೂಟರ್‌ ಆಧಾರಿತವಾಗಿವೆ. ಆದರೆ, ಇವುಗಳನ್ನು ಒಗ್ಗೂಡಿಸಿ, ರ್‍ಯಾಂಕಿಂಗ್‌ ಪಟ್ಟಿ ಸಿದ್ಧಪಡಿಸುವುದು ಮಾತ್ರ ಮ್ಯಾನ್ಯುವಲ್‌ ಆಗಿದೆ. ಆ ವ್ಯವಸ್ಥೆಯೂ ಶೀಘ್ರದಲ್ಲೇ ಅಟೊಮ್ಯಾಟಿಕ್‌ ಆಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಋಣಾತ್ಮಕ ಅಂಕಗಳೂ ಇವೆ: ಅಂದಹಾಗೆ, ಈ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಋಣಾತ್ಮಕ ಅಂಕಗಳೂ ಇವೆ. ಕರ್ತವ್ಯಕ್ಕೆ ತಡವಾಗಿ ಬಂದರೆ, ಅವಧಿಗೂ ಮೊದಲೇ ಕರ್ತವ್ಯದಿಂದ ನಿರ್ಗಮಿಸಿದರೆ, ಗಂಭೀರ ಕೆಂಪು ಗುರುತಿನ ಪ್ರಕರಣಗಳು, ಅಪಘಾತಗಳು, ಸಿಗ್ನಲ್‌ ಜಂಪ್‌ ಒಳಗೊಂಡಂತೆ ಹಲವು ಋಣಾತ್ಮಕ ಅಂಶಗಳು ಚಾಲಕರು-ನಿರ್ವಾಹಕರು ಪಡೆದ ಅಂಕಗಳಿಗೆ ಕತ್ತರಿ ಹಾಕಲಿವೆ. ಹಾಗೇ ಇಲ್ಲಿ ಗರಿಷ್ಠ ಅಂಕ ಮಿತಿ ಇರುವುದಿಲ್ಲ. ಆದರೆ, 700ರಿಂದ 800 ಅಂಕ ಗಳಿಸಲು ಅವಕಾಶ ಇದೆ. ಅತಿ ಹೆಚ್ಚು ಅಂಕ ಗಳಿಸಿದವರು ಉತ್ತಮ ರ್‍ಯಾಂಕ್‌ ಪಡೆಯುತ್ತಾರೆ.

ಮಾನದಂಡ ಏನು?: ಚಾಲನಾ ಅವಧಿ, ಅನುಸೂಚಿತವಲ್ಲದ ಹೆಚ್ಚುವರಿ ಅವಧಿ ಸೇವೆ, ಸೇವೆಯ ಪ್ರಕಾರ, ಹೆಚ್ಚುವರಿ ಸೇವಾವಧಿ ಪೂರ್ಣಗೊಳಿಸಿರುವುದು, ಕೆಎಂಪಿಎಲ್‌ (ಚಾಲಕರಿಗೆ), ಇಪಿಕೆಎಂ (ನಿರ್ವಾಹಕರಿಗೆ)… ಇವೆಲ್ಲಾ ಗುಣಾತ್ಮಕ ಅಂಕಗಳಿಗೆ ಮಾನದಂಡಗಳಾಗಿದ್ದು, ತಡವಾಗಿ ಕರ್ತವ್ಯಕ್ಕೆ ಹಾಜರಾಗುವುದು, ನಿಗದಿತ ಅವಧಿಗಿಂತ ಮುನ್ನ ನಿರ್ಗಮನ, ಅಪೂರ್ಣ ಮಾರ್ಗ, ಮಾರ್ಗ ಬದಲಾವಣೆ, ಅಪಘಾತಗಳು, ಕರ್ತವ್ಯದ ವೇಳೆ ಮೊಬೈಲ್‌ ಬಳಕೆ, ಸಂಚಾರ ನಿಯಮ ಉಲ್ಲಂಘನೆ, ಬ್ರೇಕ್‌ಡೌನ್‌, ವಾಹನ ಜಖಂಗೊಂಡರೆ ಅಂಕಗಳಲ್ಲಿ ಕಡಿತವಾಗಲಿದೆ.

ಸಂಸ್ಥೆ ಮತ್ತು ನೌಕರರ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ಯಾವುದೇ ಕ್ರಮಗಳಿಗೆ ನಮ್ಮ ಬೆಂಬಲವಿದೆ. ಆದರೆ, ಅನುಷ್ಠಾನದಲ್ಲಿ ಅಧಿಕಾರಿಗಳ ನಿಗೂಢ ನಡೆ ಅನುಮಾನದಿಂದ ನೋಡುವಂತೆ ಮಾಡುತ್ತಿದೆ. ಈ ವ್ಯವಸ್ಥೆ ಉದ್ದೇಶ ನೌಕರರ ಹಿತ ಕಾಪಾಡುವುದೇ ಆಗಿದ್ದರೆ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು. ಅಂತಹ ಯಾವುದೇ ಪ್ರಯತ್ನಗಳನ್ನು ಅಧಿಕಾರಿಗಳು ಮಾಡಿಲ್ಲ.
-ಅನಂತಸುಬ್ಬರಾವ್‌, ಪ್ರಧಾನ ಕಾರ್ಯದರ್ಶಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ನೌಕರರ ಸಂಘ

ದುಡಿಮೆಗೆ ತಕ್ಕ ಫ‌ಲ ಸಿಗಲಿದೆ: “ಮೌಲ್ಯಮಾಪನ ಪದ್ಧತಿ ದುಡಿಮೆ ತಕ್ಕ ಫ‌ಲದಂತಿದೆ. ನನ್ನ ಸಹೋದ್ಯೋಗಿ ನನಗಿಂಯ ಸೀನಿಯರ್‌. ಹೆಚ್ಚು ಗೈರುಹಾಜರಿ ಇದ್ದರೂ, ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಆತನಿಗೆ ಮೊದಲ ಆದ್ಯತೆ ಇತ್ತು. ಆತನ ಮೇಲಿನ ಹೊಟ್ಟೆಕಿಚ್ಚಿನಿಂದ ಹೀಗೆ ಹೇಳುತ್ತಿಲ್ಲ. ಕಠಿಣ ಶ್ರಮ ಹಾಕಿ ದುಡಿಯುವವರು ಸೌಲಭ್ಯ ವಂಚಿತರಾಗುತ್ತಿದ್ದರು. ಈ ನಿಟ್ಟಿನಲ್ಲಿ ಮೌಲ್ಯಮಾಪನ ಪದ್ಧತಿ ಪರಿಹಾರ ಆಗಬಲ್ಲದು’ ಎಂದು 60ನೇ ರ್‍ಯಾಂಕ್‌ ಪಡೆದ ನೆಲಮಂಗಲ ಮಾರ್ಗದ ಚಾಲಕ ಸುರೇಶ್‌ ಅಭಿಪ್ರಾಯಪಡುತ್ತಾರೆ.

ಹೊಂದಿಕೊಳ್ಳಲು ಸಮಯಬೇಕು: “ಇದೊಂದು ರೀತಿ ನಮ್ಮಲ್ಲೇ ಸ್ಪರ್ಧೆ ಏರ್ಪಡಿಸಿದಂತಿದೆ. ನನಗೆ ಈ ಬಾರಿ ಕೆಳಗಿನ ರ್‍ಯಾಂಕ್‌ ಬಂದಿದ್ದು, ಮುಂದಿನ ತ್ತೈಮಾಸಿಕದಲ್ಲಿ ಹೆಚ್ಚು ರ್‍ಯಾಂಕ್‌ ಗಳಿಸಬೇಕು ಎಂಬ ಛಲ ಬರುತ್ತದೆ. ಮೌಲ್ಯಮಾಪನ ಮಾಡುವುದು ಉತ್ತಮ. ಹೊಸ ವ್ಯವಸ್ಥೆ ಆಗಿರುವುದರಿಂದ ಅರ್ಥಮಾಡಿಕೊಳ್ಳಲು ತುಸು ಸಮಯ ಹಿಡಿಯುತ್ತದೆ’ ಎಂದು 265ನೇ ರ್‍ಯಾಂಕ್‌ ಪಡೆದಿರುವ ನಿರ್ವಾಹಕ ಮೊಹಮ್ಮದ್‌ ಅಫೊಜ್‌ ಹೇಳುತ್ತಾರೆ.

ಪಾರದರ್ಶಕವಾಗಿ ನಡೆಯಬೇಕು: “ವರ್ಗಾವಣೆ, ರಜೆ ಇನ್ನಾವುದೇ ಸೌಲಭ್ಯಗಳನ್ನು ಪಡೆಯಬೇಕಾದರೆ ನಮ್ಮ ಮೇಲಿನ ಟೋಕನ್‌ ನಂಬರ್‌ಗಳನ್ನು ನೋಡಬೇಕಿತ್ತು. ನಮ್ಮ ಸರದಿಗಾಗಿ ಕಾಯಬೇಕಿತ್ತು. ಆದರೆ, ಈಗ ಎಲ್ಲ ಕೆಲಸಗಾರರೂ ಒಂದೇ. ಜೂನಿಯರ್‌-ಸೀನಿಯರ್‌ ಎಂಬುದಿಲ್ಲ. ಇದು ತೃಪ್ತಿ ತಂದಿದೆ. ಆದರೆ, ಇದು ಪಾರದರ್ಶಕವಾಗಿ ನಡೆಯಬೇಕು’ ಎನ್ನುತ್ತಾರೆ ಶ್ರೀನಗರ-ಆರ್‌ಎಂಸಿ ಮಾರ್ಗದ ನಿರ್ವಾಹಕ ಶ್ರೀನಿವಾಸ್‌.

-ಮೊದಲ ತ್ತೈಮಾಸಿಕ ರ್‍ಯಾಂಕ್‌ ಪಟ್ಟಿ ಪ್ರಕಟಿಸಿರುವ ಬಿಎಂಟಿಸಿ
-ಸೇವಾ ಹಿರಿತನದ ಬದಲು ಹೆಚ್ಚು ಅಂಕ ಗಳಿಸಿದವರಿಗೆ ಉತ್ತಮ ಸೌಲಭ್ಯ
-ಸರ್ಕಾರಿ ಸಂಸ್ಥೆಯೊಂದರಲ್ಲೇ ಪ್ರಥಮ ಪ್ರಯತ್ನಕ್ಕೆ ಮುಂದಾದ ಸಂಸ್ಥೆ 
-ಶ್ರಮಕ್ಕೆ ತಕ್ಕಂತೆ ಅಂಕ, ಅಂಕಗಳ ಆಧಾರದಲ್ಲಿ ರ್‍ಯಾಂಕಿಂಗ್‌ ನೀಡುವ ಪದ್ಧತಿ
-ಕರ್ತವ್ಯ ನಿರ್ವಹಣೆ ವೇಳೆ ತಪ್ಪು ಮಾಡಿದರೆ ಋಣಾತ್ಮಕ ಅಂಕ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next