ಸಿಂದಗಿ: ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳು ಪ್ರಚಾರ ಮಾಧ್ಯಮದ ಮುಖ್ಯ ಅಂಗಗಳಾಗಿದ್ದು ಅವುಗಳನ್ನು ಪಕ್ಷದ ಬೆಳವಣಿಗೆಗೆ ಪೂರಕವಾಗುವಂತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಜಯಪುರ ಬಿಜೆಪಿ ಜಿಲ್ಲಾ ಚುನಾವಣೆ ಉಸ್ತುವಾರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಶೋಕ ಅಲ್ಲಾಪುರ ಹೇಳಿದರು.
ಪಟ್ಟಣದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರಚಾರಕ್ಕೆ ಮಾಧ್ಯಮ ಅತ್ಯವಶ್ಯಕ. ಪಕ್ಷದ ಚಟುವಟಿಕೆಗಳಬಗ್ಗೆ, ಪಕ್ಷದ ನಾಯಕರ ಮತ್ತು ಜನಪ್ರತಿನಿಧಿಗಳ ಸಾಧನೆ ಬಗ್ಗೆ ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡುವುದರಿಂದ ಏಕ ಕಾಲಕ್ಕೆ ಸಾವಿರಾರು ಜನರಿಗೆ ತಲುಪುತ್ತವೆ. ಈ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸಿಂದಗಿ ಮಂಡಳ ಪ್ರಥಮ ಸ್ಥಾನವಿರುವುದು ಹೆಮ್ಮೆ ವಿಷಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರವಿ ಖಾನಾಪುರ ಮಾತನಾಡಿ, ಪಕ್ಷದ ಬೆಳವಣಿಗೆಯಲ್ಲಿ
ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಅನವಶ್ಯಕ ಬಳಕೆ ಮಾಡದೇ ಪಕ್ಷದ ಬೆಳವಣಿಗೆಗೆ ಸದ್ಬಳಕೆ ಮಾಡಿಕೊಳ್ಳಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ರಮೇಶ ಭೂಸನೂರ ಅವರು ಬಹುಮತಗಳಿಂದ ಚುನಾಯಿಸಿ ತರುವಂತೆ ಕೆಲಸ ಮಾಡಬೇಕು ಎಂದರು.
ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಸಂಚಾಲಕ ದಾಮೋದರ ಪವಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಹೂಗಾರ, ಶ್ರೀಕಾಂತ ಸೋಮಜಾಳ, ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಸಜ್ಜನ, ಮಂಡಲ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸಂದೀಪ ಚೌರ, ಯುವ ಮುಖಂಡ ಸಂತೋಷ ಪಾಟೀಲ ಡಂಬಳ, ಪ್ರಶಾಂತ ಅಗಸರ, ಸಿದ್ರಾಮ ಆನಗೊಂಡ, ಶಿವಾನಂದ ಆಲಮೇಲ, ಆನಂದ ಪವಾರ, ಅಮೃತ ಕೊಟ್ಟಲಗಿ, ಯಲ್ಲಾಲಿಂಗ ಮಳ್ಳಿ, ಮಹಾಂತೇಶ ಅಗಸರ, ವಿಶ್ವ ಬಿರಾದಾರ, ಸಿದ್ದಲಿಂಗ ಅಗಸರ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಯುವ ಮೋರ್ಚಾ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.