ರಾಮನಗರ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಸಿ.ಎಂ.ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಪರ ಘೋಷಣೆ ಕೂಗಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ನಿರೀಕ್ಷೆಯಂತೆ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಆಡಳಿತಕ್ಕೆ ಅಲ್ಲಿಯ ಜನತೆ ಆಶೀರ್ವದಿಸಿದ್ದಾರೆ. ಕಾಂಗ್ರೆಸ್ ಪರವಾಗಿ ಜನಾದೇಶ ಹೊರಬಿದ್ದಿದೆ. ಕಾಂಗ್ರೆಸ್ ಸರ್ಕಾರದ ಸಾಧನೆಗೆ ಸಂದ ಜಯ ಇದು.
ಉಪ ಚುನಾವಣೆ ಫಲಿತಾಂಶ 2018ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿದರು. ತತ್ವ ಸಿದ್ಧಾಂತಗಳನ್ನು ಬದಿಗಿಟ್ಟು ಸ್ವಪ್ರತಿಷ್ಠೆಗಾಗಿ ಪಕ್ಷ ತೊರೆದಿದ್ದವರಿಗೆ ಜನರು ತಕ್ಕ ಉತ್ತರ ನೀಡಿದ್ದಾರೆ. ಇದೇ ಗೆಲುವು ಮುಂದಿನ ಚುನಾವಣೆಯಲ್ಲಿ ಪುನರಾವರ್ತನೆಯಾಗಲಿದೆ. ಮತ್ತೂಮ್ಮೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷ ರವಿ ಕುಮಾರ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರೂ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದಾಗಿ ತಿಳಿಸಿದರು. ಪ್ರಚಾರದ ವೇಳೆ ಮತದಾರರು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಬಗ್ಗೆ ಕೊಂಡಾಡುತ್ತಿದ್ದರು.
ಸಿದ್ದರಾಮಯ್ಯ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತದಾರರ ಮನಸ್ಸು ಗೆದ್ದಿದ್ದು ವ್ಯಕ್ತವಾಗಿತ್ತು. ಇದೀಗ ಅಲ್ಲಿಯ ಮತದಾರರು ಜನ ಕಾಂಗ್ರೆಸ್ ಕೈಹಿಡಿದಿದ್ದಾರೆ. ಯಾವ ಅಲೆಯೂ ಅಲ್ಲಿ ಕೆಲಸ ಮಾಡಿಲ್ಲ. ರಾಜ್ಯದಲ್ಲಿರುವುದು ಕಾಂಗ್ರೆಸ್ ಪರವಾದ ಅಲೆ ಮಾತ್ರ ಎಂದು ಹೇಳಿದರು.
ವಿಜಯೋತ್ಸವ ಆಚರಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚೇತನ್ ಕುಮಾರ್, ಲೋಹಿತ್ ಬಾಬು, ಮುತ್ತುರಾಜು, ಸ್ವಾಮಿ, ಪಾಪಣ್ಣ ಅನಿಲ್ ಜೋಗಿಂದರ್, ಸಮದ್, ಹಾಗೂ ಪಾರ್ವತಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.