Advertisement

ಬಸ್‌ ಪ್ರಯಾಣ ದರ ಇಳಿಕೆ ಸಾಧ್ಯತೆ

01:01 PM Dec 03, 2017 | Team Udayavani |

ಬೆಂಗಳೂರು: ಬಸ್‌ ಪ್ರಯಾಣ ದರ ಇಳಿಕೆಗೆ ಅವಕಾಶ ಇದ್ದರೆ, ಆ ನಿಟ್ಟಿನಲ್ಲೂ ನೋಡೋಣ. ಆದರೆ, ಇದು ಕೇವಲ ಸಂಸ್ಥೆಯೊಂದರಿಂದಲೇ ಸಾಧ್ಯವಿಲ್ಲ. ಸರ್ಕಾರದ ಸ್ಪಂದನೆಯೂ ಬೇಕಾಗುತ್ತದೆ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು.

Advertisement

ನಗರದ ಕೆಂಪೇಗೌಡ ಬಸ್‌ ನಿಲ್ದಾಣ ಮತ್ತು ಯಶವಂತಪುರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ನೂತನವಾಗಿ ನಿರ್ಮಿಸಿದ “ಇಂದಿರಾ ಟ್ರಾನ್ಸಿಟ್‌ ಕ್ಲಿನಿಕ್‌’ಗಳ ಉದ್ಘಾಟನೆ ಹಾಗೂ 70 ಹೊಸ ಬಸ್‌ಗಳ ಉದ್ಘಾಟನೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಎಂಟಿಸಿ ಬಸ್‌ಗಳ ಪ್ರಯಾಣ ದರವನ್ನು ಶೇ. 50ರಷ್ಟು ಕಡಿಮೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಆದರೆ, ಸದ್ಯ ಸಂಸ್ಥೆಯು ನಷ್ಟದಲ್ಲಿದೆ. ಇದು ಕಾರ್ಮಿಕರು, ಕಾರ್ಮಿಕ ಮುಖಂಡರು ಸೇರಿದಂತೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದಾಗ್ಯೂ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ದರ ಇಳಿಕೆ ಕೇವಲ ಸಂಸ್ಥೆಯೊಂದರಿಂದಲೇ ಸಾಧ್ಯವಿಲ್ಲ. ಸರ್ಕಾರದ ನೆರವು ಕೂಡ ಅಗತ್ಯ. ಆದ್ದರಿಂದ ಸರ್ಕಾರದೊಂದಿಗೂ ಈ ಸಂಬಂಧ ಚರ್ಚಿಸಲಾಗುವುದು. ನಂತರ ತೀರ್ಮಾನಿಸಲಾಗುವುದು. ಸದ್ಯಕ್ಕಂತೂ ಈ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಶೀಘ್ರ ಕೈಗೆಟಕುವ ದರದಲ್ಲಿ ಸೇವೆ: ಇದಕ್ಕೂ ಮುನ್ನ ಮಾತನಾಡಿದ ಬಿಎಂಟಿಸಿ ಅಧ್ಯಕ್ಷ ಎಂ. ನಾಗರಾಜ (ಯಾದವ್‌), ಶೀಘ್ರದಲ್ಲೇ ಬಿಎಂಟಿಸಿ ಬಸ್‌ ಸೇವೆಗಳು ಮತ್ತಷ್ಟು ಪ್ರಯಾಣಿಕರ ಕೈಗೆಟಕುವ ದರದಲ್ಲಿ ಲಭ್ಯವಾಗಲಿವೆ ಎಂದು ಸುಳಿವು ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ದರವನ್ನು ಶೇ. 50ರಷ್ಟು ಇಳಿಸಬೇಕು.

Advertisement

ಇದರಿಂದ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ. ಜತೆಗೆ ಸಾರ್ವಜನಿಕ ಸಾರಿಗೆಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿದೆ ಎಂದರು. ಇದೇ ಸಂದರ್ಭದಲ್ಲಿ ಈಚರ್‌ ಮತ್ತು ಟಾಟಾ ಕಂಪೆನಿಯ ಅತ್ಯಾಧುನಿಕ 70 ಬಸ್‌ಗಳ ಸೇವೆಗೆ ಚಾಲನೆ ನೀಡಲಾಯಿತು. 

ಕ್ಲಿನಿಕ್‌ ವೇಳಾಪಟ್ಟಿ: ಬಿಬಿಎಂಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ “ಇಂದಿರಾ ಟ್ರಾನ್ಸಿಟ್‌ ಕ್ಲಿನಿಕ್‌’ ನಿತ್ಯ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸಲಿದ್ದು, ಭಾನುವಾರ ಮಾತ್ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಸೇವೆ ಲಭ್ಯ ಇರುತ್ತದೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ, ಜನರಿಕ್‌ ಔಷಧಿಗಳ ವಿತರಣೆ, ಇಎಚ್‌ಆರ್‌ ಸೇರಿದಂತೆ ಹಲವು ಸೇವೆಗಳು ಕ್ಲಿನಿಕ್‌ನಲ್ಲಿ ಲಭ್ಯ.

ಒಬ್ಬ ವೈದ್ಯ, ಒಬ್ಬ ಶುಶ್ರೂಷಕಿ, ಔಷಧ ವಿತರಕರು ಇರುತ್ತಾರೆ. ಈ ಎಲ್ಲ ಸೇವೆಗಳೂ ಪ್ರಯಾಣಿಕರು ಮತ್ತು ಕಾರ್ಮಿಕರಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಶೀಘ್ರದಲ್ಲೇ ಈ ಕ್ಲಿನಿಕ್‌ ನಗರದ ಎಲ್ಲ ಟಿಟಿಎಂಸಿ ಮತ್ತು ಪ್ರಮುಖ ಬಸ್‌ ನಿಲ್ದಾಣಗಳಲ್ಲೂ ವಿಸ್ತರಣೆ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next