Advertisement

ಬಸ್‌ ಚಾಲಕನಿಗೆ ಸೋಂಕು ತಂದ ಆಪತ್ತು

05:44 AM Jun 13, 2020 | Lakshmi GovindaRaj |

ಬೆಂಗಳೂರು: ನಗರದ ಎಲ್ಲ ಬಿಎಂಟಿಸಿ ಘಟಕಗಳಲ್ಲಿ ಚಾಲನಾ ಸಿಬ್ಬಂದಿ ಹೆಚ್ಚುವರಿ ಇದ್ದು, ಯಾರಿಗೆ “ಡ್ಯೂಟಿ’ ನೀಡಬೇಕು ಎನ್ನುವ ಗೊಂದಲದಲ್ಲಿ ವ್ಯವಸ್ಥಾಪಕರಿದ್ದಾರೆ. ಆದರೆ, ಕೆ.ಆರ್‌. ಪುರ ಘಟಕದ ಚಿತ್ರಣ ಮಾತ್ರ  ತದ್ವಿರುದ್ಧವಾಗಿದ್ದು, ಅಗತ್ಯಕ್ಕಿಂತ ಶೇ. 50ರಷ್ಟು ಸಿಬ್ಬಂದಿ ಕೊರತೆ ಇದೆ! – ಇದು ಚಾಲಕ ಕಂ ನಿರ್ವಾಹಕರೊಬ್ಬರಿಗೆ ಕಾಣಿಸಿಕೊಂಡ ಕೋವಿಡ್‌ 19 ವೈರಸ್‌ ಸೋಂಕಿನ ಎಫೆಕ್ಟ್.

Advertisement

ಇತರೆ ಘಟಕಗಳಂತೆ ಈ ಕೆ.ಆರ್‌. ಪುರದಲ್ಲಿ ಕೂಡ ನಿತ್ಯ  ಹೆಚ್ಚುವರಿ ಸಿಬ್ಬಂದಿ ಇರುತ್ತಿದ್ದರು. ಅಂದರೆ 120 ಅನುಸೂಚಿಗಳಿದ್ದರೆ, 260 ಸಿಬ್ಬಂದಿ ಡ್ಯೂಟಿಗೆ ಬರುತ್ತಿದ್ದರು. ಆದರೆ, ಶುಕ್ರವಾರ ಈ ಸಂಖ್ಯೆ 80ಕ್ಕೆ ಕುಸಿದಿತ್ತು. ಪರಿಣಾಮ ಏಕಾಏಕಿ ಕೊರತೆ ಉಂಟಾಗಿ, ಕೇವಲ 40 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲು ಸಾಧ್ಯವಾಯಿತು. ಸಹೋದ್ಯೋಗಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ “ಸಿಬ್ಬಂದಿ ಕೊರತೆ’ಗೆ ಕಾರಣ ಎಂದು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

“ಸೋಂಕು ತಗುಲಿರುವುದರಿಂದ ಉಳಿದ ಸಿಬ್ಬಂದಿ ಸಹಜವಾಗಿ ಆತಂಕಗೊಂಡಿದ್ದಾರೆ. ಇದರಿಂದ ಏಕಾಏಕಿ ಕೆಲವರು ತಲೆನೋವು, ಹೊಟ್ಟೆನೋವು ಮತ್ತಿತರ ನೆಪ ಹೇಳಿ ರಜೆ ಹಾಕಿದ್ದಾರೆ. ಇನ್ನು ಹಲವರು ಫೋನ್‌ ಸ್ವಿಚ್‌ಆಫ್  ಮಾಡಿದ್ದಾರೆ. ಕೆಲವರು ಫೋನ್‌ಗೆ ಸಿಕ್ಕರೂ ನೆಟ್‌ವರ್ಕ್‌ ಸಮಸ್ಯೆ ಎಂದೂ ಹೇಳಿದ್ದಾರೆ. ಇದೆಲ್ಲ  ದರಿಂದ ಉದ್ದೇಶಿತ ಡಿಪೋ-24ರಲ್ಲಿ (ಕೆ.ಆರ್‌. ಪುರ) ಸುಮಾರು 120-130 ಬಸ್‌ಗಳ ಬದಲಿಗೆ 40 ಬಸ್‌ ಗಳು ಕಾರ್ಯಾಚರಣೆ ಮಾಡಿವೆ. ಎರಡು-ಮೂರು ದಿನ ಗಳಲ್ಲಿ ಸಹಜ ಸ್ಥಿತಿಗೆ ಬರಲಿದೆ’ ಎಂದು ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದರು.

ಹತ್ತಿರದ ಡಿಪೋಗಳಿಂದ ಸೇವೆ: ಸಾಮಾನ್ಯ ದಿನಗಳಿಗೆ ಹೋಲಿಸಿದರೆ, ಈ ಡಿಪೋ ವ್ಯಾಪ್ತಿಯಲ್ಲಿನ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕೂಡ ಶುಕ್ರವಾರ ಕಡಿಮೆ ಇತ್ತು. ಹಾಗಾಗಿ, ಆದಾಯ ಕಡಿಮೆ ಬಂದಿದೆ. ಆದರೆ, ನಿರ್ದಿಷ್ಟ  ಆದಾಯದ ಮಾಹಿತಿ ಮರುದಿನ ದೊರೆಯುತ್ತದೆ. ಹೊಸಕೋಟೆ, ಮಂಡೂರು, ಗುಂಜೂರು ಸೇರಿದಂತೆ ಕೆ.ಆರ್‌. ಪುರಕ್ಕೆ ಹತ್ತಿರದಲ್ಲಿರುವ ಘಟಕಗಳಲ್ಲಿ ಸಿಬ್ಬಂದಿ ಹೆಚ್ಚುವರಿ ಇದ್ದರು.

ಅಲ್ಲಿಂದ ಕೊರತೆಯನ್ನು ಸರಿದೂಗಿಸಲಾಗಿದೆ ಎನ್ನಲಾಗಿದೆ.  “ಹತ್ತಿರದ ಡಿಪೋಗಳಲ್ಲೂ ಸಿಬ್ಬಂದಿ ಸಂಖ್ಯೆ ಅಷ್ಟಕ್ಕಷ್ಟೇ ಇತ್ತು. ಅಷ್ಟೇ ಅಲ್ಲ ಗುರುವಾರಕ್ಕೆ ಹೋಲಿಸಿದರೆ, ಶುಕ್ರವಾರ ಸಂಸ್ಥೆಯ ಬಹುತೇಕ ನಾಲ್ಕೂ ವಿಭಾಗಗಳಲ್ಲಿ 100-120 ಸಿಬ್ಬಂದಿ ಕಡಿಮೆ ಇದ್ದರು. ಹಾಗಂತ ಕೆ.ಆರ್‌.  ಪುರ ಡಿಪೋದಲ್ಲಿಯಂತೆ ಕೊರತೆ ಆಗಿರಲಿಲ್ಲ. ಯಾಕೆಂದರೆ, ಈ ಮೊದಲೇ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚುವರಿ ಸಿಬ್ಬಂದಿ ಇದ್ದಾರೆ. ಆ ಹೆಚ್ಚುವರಿ ಪ್ರಮಾಣ ಮಾತ್ರ ಕಡಿಮೆ ಇತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

“ಡಿಪೋ 24ರ ಹೊರತು ಎಲ್ಲೂ ಕೊರತೆ ಇಲ್ಲ’: “ಕೆ. ಆರ್‌. ಪುರ ಹೊರತುಪಡಿಸಿದರೆ, ಉಳಿದ ಯಾವ ಡಿಪೋ ಅಥವಾ ವಿಭಾಗಗಳಲ್ಲೂ ಸಿಬ್ಬಂದಿ ಸಮಸ್ಯೆ ಇರಲಿಲ್ಲ. ಎಲ್ಲ ಕಡೆಯೂ ಹೆಚ್ಚುವರಿ ಇದ್ದಾರೆ. ಚಾಲಕರೊಬ್ಬರಲ್ಲಿ ಸೋಂಕು  ಕಾಣಿಸಿಕೊಂಡಿದ್ದರಿಂದ ಡಿಪೋ-24ರಲ್ಲಿ ಸಿಬ್ಬಂದಿಗೆ ಸಹಜವಾಗಿ ಆತಂಕ ಉಂಟಾಗಿತ್ತು. ಈಗ ಅದನ್ನು ಮಾತುಕತೆ ಮೂಲಕ ದೂರ ಮಾಡಲಾಗಿದೆ. ಹಾಗಾಗಿ, ಶನಿವಾರದಿಂದ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಆರೋಗ್ಯ ಇಲಾಖೆ  ನಿಯಮಗಳನ್ನು ಪಾಲಿಸುತ್ತಿದ್ದು, ಘಟಕವನ್ನು ಸೀಲ್‌ಡೌನ್‌ ಮಾಡುವುದಿಲ್ಲ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಸ್ಪಷ್ಟಪಡಿಸಿದರು.

ಮಾಸ್ಕ್ ಧರಿಸದಿದ್ದರೆ 500 ರೂ. ದಂಡ!: ಈ ಮಧ್ಯೆ ಮುಖಗವಸು ಧರಿಸದೆ ಕರ್ತವ್ಯ ನಿರ್ವಹಿಸುವ ಚಾಲನಾ ಸಿಬ್ಬಂದಿ (ಚಾಲಕ ಮತ್ತು ನಿರ್ವಾಹಕ)ಗೆ 500 ರೂ. ದಂಡ ವಿಧಿಸುವುದಾಗಿ ಬಿಎಂಟಿಸಿ ಎಚ್ಚರಿಕೆ ನೀಡಿದ್ದು, ಈ ಸಂಬಂಧ  ಶುಕ್ರವಾರ ಆದೇಶ ಹೊರಡಿಸಿದೆ. ಕರ್ತವ್ಯದಲ್ಲಿರುವ ಚಾಲನಾ ಸಿಬ್ಬಂದಿ ಮುಖಗವಸು ಧರಿಸುವುದು ಕಡ್ಡಾಯ. ಒಂದು ವೇಳೆ ಧರಿಸದೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವಿರುದ್ಧ ಸಾರಥಿ, ತನಿಖಾ ಸಿಬ್ಬಂದಿ ಮತ್ತು ಬಸ್‌  ನಿಲ್ದಾಣಾಧಿಕಾರಿಗಳು ಪ್ರಕರಣ ದಾಖಲಿಸಲಿದ್ದು, ಮೊದಲ ಬಾರಿಗೆ ನಿಯಮ ಉಲ್ಲಂ ಸಿದರೆ 500 ರೂ. ದಂಡ ವಿಧಿಸಲಾಗುವುದು. ಒಂದಕ್ಕಿಂತ ಹೆಚ್ಚು ಬಾರಿ ಇದು ಪುನರಾವರ್ತನೆಯಾದರೆ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬಿಎಂಟಿಸಿ ಎಚ್ಚರಿಸಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next