Advertisement

ಬಿಆರ್‌ಟಿಎಸ್‌ ವಿಳಂಬವಾಗಲು ಭೂಸ್ವಾಧೀನ ತೊಡಕು ಕಾರಣ

03:12 PM Jun 19, 2017 | |

ಹುಬ್ಬಳ್ಳಿ: ಭೂಸ್ವಾಧೀನ ವಿಚಾರದಲ್ಲಿ ಕೆಲವರು ಕೋರ್ಟ್‌ ಮೊರೆ ಹೋಗಿರುವುದು, ಸಾರ್ವಜನಿಕ ಬಳಕೆ ಸೌಲಭ್ಯಗಳ ಸ್ಥಳಾಂತರದಿಂದಾಗಿ ಬಿಆರ್‌ಟಿಎಸ್‌ ಯೋಜನೆ ಕಾಮಗಾರಿ ವಿಳಂಬವಾಗುತ್ತಿದೆ. ಅಕ್ಟೋಬರ್‌ ವೇಳೆಗೆ ಬಹುತೇಕ ಕಾಮಗಾರಿ ಪೂರ್ಣಗೊಳಿಸಿ ನವೆಂಬರ್‌ನಲ್ಲಿ ಬಸ್‌ ಸಂಚಾರ ಆರಂಭಿಸಲಾಗುವುದು ಎಂದು ಬಿಆರ್‌ಟಿಎಸ್‌ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕೇರಿ ಹೇಳಿದರು. 

Advertisement

ಇಲ್ಲಿನ ಗೋಕುಲ ರಸ್ತೆಯ ಅಕ್ಷಯ ಇನ್‌ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸಾರ್ವಜನಿಕರಿಗೆ ಯೋಜನೆ ಕುರಿತ ಮಾಹಿತಿ ನೀಡಿಕೆ ಸಭೆಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದಲ್ಲಿ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ, ಡೀಪೋ, ವಿಭಾಗೀಯ ಕಾರ್ಯಾಗಾರ, ಅವಳಿನಗರ ಮಧ್ಯ 31 ಬಸ್‌ ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಎಲ್ಲ ಕಾಮಗಾರಿಗಳು ಅಕ್ಟೋಬರ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು. 

ಇದುವರೆಗೆ ಸುಮಾರು 72 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು, ಅಂದಾಜು 303 ಕೋಟಿ ರೂ. ಪರಿಹಾರ ನೀಡಲಾಗಿದೆ. ಯೋಜನೆಯ ಶೇ. 90ರಷ್ಟು ಭೂ ಸ್ವಾಧೀನವಾಗಿದ್ದು, ಧಾರ್ಮಿಕ ಕೇಂದ್ರಗಳ ಜಾಗದ ಕುರಿತು ಇನ್ನು ಇತ್ಯರ್ಥವಾಗಿಲ್ಲ. ಅದೇ ರೀತಿ ಬಿವಿಬಿ ಕಾಲೇಜು ಬಳಿ ರಸ್ತೆಯ ಮಧ್ಯಭಾಗದಲ್ಲಿ ಜಾಹೀರಾತು ಗುತ್ತಿಗೆದಾರರು ಕೋರ್ಟ್‌ ಮೊರೆ ಹೋಗಿದ್ದಾರೆ ಎಂದರು. 

ಐದು ಬಸ್‌ ಪ್ರಾಯೋಗಿಕ ಸಂಚಾರ: ವೋಲ್ವೋ ಕಂಪೆನಿಯಿಂದ 100 ಹಾಗೂ ಆರ್ಟಿಕ್ಯುಲೇಟರ್‌ ಕಂಪೆನಿಯಿಂದ 30 ಸೇರಿ ಒಟ್ಟು 130 ಬಸ್‌ಗಳನ್ನು ಸುಮಾರು 115 ಕೋಟಿ ರೂ. ವೆಚ್ಚದಲ್ಲಿ ಖರೀದಿ ಮಾಡಲಾಗುತ್ತದೆ. ಜೂನ್‌ ಅಂತ್ಯಕ್ಕೆ ಐದು ಬಸ್‌ಗಳು ಪ್ರಾಯೋಗಿಕ ಸಂಚಾರ ಕೈಗೊಳ್ಳುವವು ಎಂದರು.

ಒಟ್ಟಾರೆ ಯೋಜನೆ ವೆಚ್ಚ 692 ಕೋಟಿ ರೂ. ಆಗಿದ್ದು, ಇದರಲ್ಲಿ ವಿಶ್ವಬ್ಯಾಂಕ್‌ 254 ಕೋಟಿ ರೂ. ನೆರವು ನೀಡಿದ್ದರೆ, ರಾಜ್ಯ ಸರಕಾರ 438 ಕೋಟಿ ರೂ. ನೀಡಿದೆ. ವಿವಿಧ ಮೂಲಭೂತ ಸೌಕರ್ಯಕ್ಕಾಗಿ ಇದುವರೆಗೆ ಸುಮಾರು 132 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು. 

Advertisement

ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣದಿಂದ ಶೇ. 70ರಷ್ಟು, ರೈಲ್ವೆ ನಿಲ್ದಾಣ-ಬಿಎಸ್‌ ಎನ್‌ಎಲ್‌ ಬಳಿಯಿಂದ ಶೇ. 20ರಷ್ಟು ಸಿಬಿಟಿ-ರೈಲ್ವೆ ನಿಲ್ದಾಣದಿಂದ ಶೇ. 10ರಷ್ಟು ಬಸ್‌ಗಳು ಸಂಚಾರ ಕೈಗೊಳ್ಳಲಿವೆ. ರೈಲ್ವೆ ನಿಲ್ದಾಣದಿಂದ ಬಸವನದವರೆಗೆ ಇರುವ ರಸ್ತೆಯನ್ನೇ ಬಳಸಿಕೊಳ್ಳಲಾಗುತ್ತದೆ. 

ಯೋಜನೆ ಕಾಮಗಾರಿಯಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂಬುದನ್ನು ಒಪ್ಪಿಕೊಂಡ ಅವರು, ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ಶ್ರೀನಗರ ಕ್ರಾಸ್‌ಬಳಿ ಲಾರಿ ರಸ್ತೆಯಲ್ಲಿ ಸಿಕ್ಕುಕೊಂಡು ರಸ್ತೆ ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿತ್ತು. ಇದಕ್ಕೆ ಬಿಆರ್‌ಟಿಎಸ್‌ ಕಾಮಗಾರಿ ಕಾರಣವಲ್ಲ. ಬದಲಾಗಿ ಅಡುಗೆ ಅನಿಲ ಪೂರೈಕೆ ಕಂಪೆನಿ ಕಾಮಗಾರಿ ಕಾರಣ ಎಂದರು. 

ಬಿಆರ್‌ಟಿಎಸ್‌ ಯೋಜನೆ ಯೋಜನಾ ವ್ಯವಸ್ಥಾಪಕ ಎಸ್‌ಕೆಎಂ ಕೊಟ್ರಯ್ಯ ಮಾತನಾಡಿ, ಯೋಜನೆ ಮಾರ್ಗದಲ್ಲಿ 17 ಧಾರ್ಮಿಕ ಕಟ್ಟಡಗಳಿವೆ. ಅದರಲ್ಲಿ 10 ಕಟ್ಟಡ ಸರಕಾರಿ ಜಾಗದಲ್ಲಿದ್ದು, ಅವುಗಳನ್ನು ತೆರವುಗೊಳಿಸಲಾಗಿದೆ. ಉಳಿದ 7 ಕಟ್ಟಡ ಖಾಸಗಿ ಜಾಗದಲ್ಲಿವೆ. ಬಿಆರ್‌ಟಿಎಸ್‌ ಮೇಲೆ ಒಟ್ಟು 180 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 72 ರಿಟ್‌ ಅರ್ಜಿಗಳು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು. ಕೋರ್ಟ್‌ ಇತ್ತೀಚೆಗೆ ಎಲ್ಲ ರಿಟ್‌ಗಳನ್ನು ನಿರಾಕರಿಸಿದೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next