ಬೆಳಗಾವಿ: ಅಧಿಕಾರ ಮತ್ತು ಅನುದಾನದ ಕೊರತೆ ಎದುರಿಸುತ್ತಿರುವ ತಾಪಂ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂಬ ಸರ್ಕಾರದ ಚಿಂತನೆ ನಾನಾ ರೀತಿಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಅಧಿಕಾರ ವಿಕೇಂದ್ರೀಕರಣ ಎಂಬ ಉದ್ದೇಶದಿಂದ ಮೂರು ಹಂತಗಳಲ್ಲಿ ಗ್ರಾಮ ಮತ್ತು ಜಿಲ್ಲಾ ಪಂಚಾಯತ್‌ಗಳ ಜತೆಗೆ ಅಸ್ತಿತ್ವಕ್ಕೆ ಬಂದ ತಾಪಂಗಳು ನಿಜವಾಗಿಯೂ ಈಗ ಬೇಕೇ ಎಂಬ ಜಿಜ್ಞಾಸೆ ಸರ್ಕಾರದ ವಲಯದಲ್ಲಿ ಮೂಡಿದೆ.
ತಾಪಂಗಳ ಕಾರ್ಯನಿರ್ವಹಣೆ ಹಾಗೂ ಅದರ ಅವಶ್ಯಕತೆ ಬಗ್ಗೆ ಮೊದಲಿಂದಲೂ ಚರ್ಚೆಯಾಗುತ್ತಿದೆ. ಕೆಲವು ವರ್ಷಗಳ ಹಿಂದೆ ತಾಪಂ ವ್ಯವಸ್ಥೆ ರದ್ದು ಮಾಡುವ ಸರ್ಕಾರದ ಕ್ರಮ ಪ್ರಶ್ನಿಸಿ ಹೋರಾಟವೇ ನಡೆದಿತ್ತು. ಆಗ ಸರ್ಕಾರದ ಮೇಲೆ ಒತ್ತಡ ಹಾಕಿ ಅದನ್ನು ಅಲ್ಲಿಯೇ ತಣ್ಣಗೆ ಮಾಡಲಾಗಿತ್ತು. ಈಗ ಮತ್ತೆ ಸರ್ಕಾರ ಈ ವಿಷಯ ಪ್ರಸ್ತಾಪ ಮಾಡಿರುವುದು ತಾಪಂ ಸದಸ್ಯ ಆಕಾಂಕ್ಷಿಗಳಲ್ಲಿ ನಿರಾಸೆ ಉಂಟುಮಾಡಿದೆ. ತಾಪಂಗಳಲ್ಲಿ ಮುಖ್ಯವಾಗಿ ಇರುವದು ಅನುದಾನದ ಸಮಸ್ಯೆ.
ಗ್ರಾಮ ಪಂಚಾಯತ್ ಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಅನುದಾನ ಬರಲಾರಂಭಿಸಿದ ಮೇಲೆ ತಾಪಂಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇದೇ ವಿಷಯವಾಗಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‌ಸಾಮಾನ್ಯ ಸಭೆಗಳಲ್ಲಿ ಬಿಸಿ ಬಿಸಿ ಚರ್ಚೆ ಸಹ ಆಗಿದೆ. ತಾಪಂಗಳೆಂದರೆ ಗ್ರಾಮ ಹಾಗೂ ಜಿಲ್ಲಾ ಪಂಚಾಯತ್‌ಗಳ ನಡುವೆ ಕೆಲಸ ಮಾಡುವ ಪೋಸ್ಟ್‌ಮನ್ ಎಂಬ ಹಾಸ್ಯದ ಮಾತುಗಳು ಸಭೆಯಲ್ಲಿ ವ್ಯಕ್ತವಾಗಿವೆ.
ಇದನ್ನೂ ಓದಿ:ಫೆ.5ರಿಂದ ನೌಕರರ ಕ್ರೀಡಾಕೂಟ: ಬೀಳಗಿ
ಗ್ರಾಮ ಪಂಚಾಯತ್ ಗಳು ಮತ್ತು ಪಿಡಿಒಗಳ ಮೇಲೆ ನಿಯಂತ್ರಣ, ಅನುದಾನ ಸರಿಯಾಗಿ ವಿನಿಯೋಗವಾಗಬೇಕು ಎಂದರೆ ತಾಪಂಗಳು ಇರಲೇಬೇಕು. ಎಲ್ಲವನ್ನೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮಾಡುವದು ಸಾಧ್ಯವಿಲ್ಲ. ಇವೆರಡರ ಮಧ್ಯೆ ತಾಲೂಕು ಪಂಚಾಯತ್‌ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ ಎಂಬುದು ತಾಲೂಕುಪಂಚಾಯತ್ ಸದಸ್ಯರ ಅಭಿಪ್ರಾಯ.
ಸಮರ್ಪಕ ಅನುದಾನ ಇಲ್ಲ ಎಂಬುದನ್ನ ಬಿಟ್ಟರೆ ತಾಪಂಗಳಿಗೆ ದೊಡ್ಡ ಅಧಿಕಾರ ಇದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಸದಸ್ಯರು ಬರುತ್ತಿಲ್ಲ. ಕೇವಲ ಅನುದಾನ ಇಲ್ಲ ಎಂದು ದೂರುತ್ತಿದ್ದಾರೆಯೇ ಹೊರತು ನಾವು ಈಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಅನುದಾನ ಹೆಚ್ಚಿಗೆ ಕೇಳುವದೆಂದರೆ ಅದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತೆ ಎಂಬುದು ತಾಲೂಕು ಪಂಚಾಯತ್ ಸದಸ್ಯರ ಅನಿಸಿಕೆ.
ಕೇಶವ ಆದಿ