ಬೆಂಗಳೂರು/ಚಿಕ್ಕೋಡಿ: ರಾಜ್ಯದ ಕರಾವಳಿ ಭಾಗ ಹಾಗೂ ಒಳನಾಡಿನ ಕೆಲವೆಡೆ ಸೋಮವಾರ ಮಳೆಯಾಗಿದೆ.
ಮಹಾರಾಷ್ಟ್ರದ ಕೊಂಕಣ ಭಾಗ ಮತ್ತು ಗಡಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಕೃಷ್ಣಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಇದರಿಂದ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಸೇತುವೆ ಎರಡನೇ ಬಾರಿ ಮುಳುಗಡೆಯಾಗಿದೆ.
ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಕೊಂಕಣ ಭಾಗದಲ್ಲಿ ಧಾರಾಕಾರ ಮಳೆ ಸುರಿದು ಗಡಿ ಭಾಗದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳು ಮೈದುಂಬಿ ಹರಿದು ಸಂಭವನೀಯ ಪ್ರವಾಹ ಎದುರಾಗಿ ತಾಲೂಕಿನ ಏಳು ಸೇತುವೆಗಳು 15 ದಿನಗಳಿಂದ ಜಲಾವೃತಗೊಂಡಿದ್ದವು. ಇದೀಗ ಮಹಾರಾಷ್ಟ್ರದ ಕೊಂಕಣ ಭಾಗದ ಮಳೆಯಿಂದ ಮತ್ತೆ ಕಲ್ಲೋಳ-ಯಡೂರ ಸೇತುವೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿದೆ. ಹೀಗಾಗಿ ಸೇತುವೆ ಮೇಲೆ ಸಂಚಾರ ನಿಷೇಧಿಸಿ ತಾಲೂಕಾಡಳಿತ ಸೂಚನೆ ನೀಡಿದೆ.
ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ 36,663 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ದೂಧಗಂಗಾ ನದಿ ಮೂಲಕ 9856 ಕ್ಯೂಸೆಕ್ ನೀರು ಹರಿದು ಕೃಷ್ಣಾ ನದಿಗೆ ಸೇರುತ್ತಿದೆ. ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ 46519 ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಹಿಪ್ಪರಗಿ ಬ್ಯಾರೇಜ್ ಮೂಲಕ 32 ಸಾವಿರ ಕ್ಯೂಸೆಕ್ ನೀರು ಹರಿದು ಆಲಮಟ್ಟಿ ಜಲಾಶಯಕ್ಕೆ ಹೋಗುತ್ತಿದೆ ಎಂದು ತಹಶೀಲ್ದಾರ್ ಸಿ.ಎಸ್. ಕುಲಕರ್ಣಿ ತಿಳಿಸಿದರು.
ಈ ಮಧ್ಯೆ ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕ್ಯಾಸಲ್‌ರಾಕ್‌ನಲ್ಲಿ ರಾಜ್ಯದಲ್ಲೇ ಅಧಿಕವೆನಿಸಿದ 8 ಸೆಂ.ಮೀ. ಮಳೆಯಾಗಿದೆ. ಬುಧವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆಯೆಂದು ಹವಾಮಾನ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.