—
ನನ್ನ ಗೆಳತಿಯ ವ್ಯಾನಿಟಿ ಬ್ಯಾಗ್ ಅನ್ನು ಸಕಾರಣವೊಂದಕ್ಕೆ ನಾನು ನೋಡಬೇಕಾಯಿತು. ಅಲ್ಲಿ ಹತ್ತಾರು ಚೀಟಿಗಳು ಮುದುಡಿಕೊಂಡಿದ್ದವು. ಅದು ಅವರ ಮನೆಯ ಕರೆಂಟು ಬಿಲ್‌ಗಳಲ್ಲ, ಆಕೆಗೆ ಯಾರೋ ಬರೆದ ಪ್ರೇಮಪತ್ರಗಳೂ ಆಗಿರಲಿಲ್ಲ. ಅವು ಕೇವಲ ಲೆಕ್ಕಪತ್ರಗಳಷ್ಟೇ. ಅವಳ ಕೈಯಲ್ಲಿಯೇ ಬರೆದ ಲೆಕ್ಕದ ಚೀಟಿಗಳವು. ಒಂದರಲ್ಲಿ ಕೇಸರಿಬಾತ್- 5 ಪ್ಲೇಟ್, ಚಹಾ 3, ಕಾಫೀ 2 ಅಂತ ಬರೆದಿದ್ದರೆ, ಮತ್ತೂಂದರಲ್ಲಿ ಚಕ್ಕುಲಿ- ಬಿಸ್ಕತ್ತು- ಎರಡೆರಡು ಪ್ಯಾಕ್, ಕಾಫೀ 6, ಚಹಾ 1 ಎಂದು ಬರೆದಿತ್ತು. ಮತ್ತೂಂದರಲ್ಲಿ ಮೈಸೂರು ಪಾಕ್- 10, ಖಾರಾ- 1 ಕಿಲೋ, ಹಾಲು- 2, ಚಹಾ- 6 ಎಂದು ಬರೆಯಲಾಗಿತ್ತು. ಹಾಗೆ ಸುಮಾರು, ಹತ್ತಕ್ಕೂ ಅಧಿಕ ಚೀಟಿಗಳಿದ್ದವು.
Advertisement
“ಇದೇನಪ್ಪಾ?’ ಎಂದು ತಲೆ ಕೆರೆದುಕೊಂಡೆ. ಹೊರಗೆಲ್ಲೋ ಹೋಗಿದ್ದ ಗೆಳತಿ ವಾಪಸು ಬಂದಾಗ ಕೇಳಿದೆ: “ಅಲ್ವೇ… ನೀನೇನೋ ಬ್ಯಾಗ್ ಓಪನ್ ಮಾಡು ಅಂದೆ. ಆದರೆ, ಅದರಲ್ಲೆಲ್ಲ ಬರೀ ಚೀಟಿಗಳೇ ಇದೆಯಲ್ವೇನೇ… ಸಾರಿ, ಕಣೇ… ನಾನು ಅದನ್ನೆಲ್ಲ ಓದಿºಟ್ಟೆ. ಆದರೆ, ಅದರಲ್ಲಿ ಬರೆದ ಕೇಸರಿಬಾತ್, ಮೈಸೂರು ಪಾಕ್‌ಗಳ ವಿಚಾರ ಮಾತ್ರ ಗೊತ್ತಾಗ್ಲೆà ಇಲ್ಲ. ಅದ್ಸರಿ, ಏನವು?’. ಅವಳ ಮುಖ ತುಸು ಕಪ್ಪೇರಿತು. ಪತ್ತೇದಾರಿ ಪ್ರತಿಭಾ ಥರ ನಾನೇನಾದ್ರೂ ತನಿಖೆ ಮಾಡಿದ್ದು ಅವಳಿಗೆ ಹಿಡಿಸದೇ ಹೋಯಿತಾ ಅಂದುಕೊಂಡೆ. ಆದರೆ, ಆಕೆ ಕೋಪಗೊಂಡಿದ್ದು ನನ್ನ ಮೇಲಲ್ಲ. ಕೆಲವು ಪುರುಷರ ಮೇಲೆ ಅಂತ ತಡವಾಗಿ ಗೊತ್ತಾಯಿತು.
—
ಮದುವೆಯೇ ಒಂದು ದುಂದುವೆಚ್ಚದ ಸಂಭ್ರಮ. ಒಂದು ಮದುವೆ ಮುಗಿಸುವ ಹೊತ್ತಿಗೆ ಹೆಣ್ಣಿನ ತಂದೆ, ಹತ್ತಾರು ಕೈಗಳಿಂದ ಸಾಲ ಮಾಡಿ, ಬದುಕಿನಲ್ಲಿ ಕುಸಿದು ಹೋಗಿರುತ್ತಾರೆ. ಇವೆಲ್ಲದರ ನಡುವೆ “ಟ್ರೈಲರ್’ ಎಂಬಂತೆ ಸಂದರ್ಶನಗಳ ಹೊರೆ. ವಧುಪರೀಕ್ಷೆಯ ಕಾಫೀ- ತಿಂಡಿಯ ವೆಚ್ಚಗಳನ್ನೂ ಹೆಣ್ಣಿನ ತಂದೆಯ ಕುತ್ತಿಗೆಗೆ ಕಟ್ಟುವುದು ಯಾವ ನ್ಯಾಯ ಎನ್ನುವುದು ನನ್ನ ವಾದ. ಉಪ್ಪಿಟ್ಟು- ಕಾಫೀಯಿಂದ ಆರಂಭವಾಗುವ ವಧುಪರೀಕ್ಷೆಯಲ್ಲಿ ದುಡ್ಡು ಕರಗುವುದೇ ಗೊತ್ತಾಗುವುದಿಲ್ಲ. ಭಾವನೆಗಳಿಗೆ ಇಲ್ಲಿ ಸ್ಥಾನವಿಲ್ಲ, ಅಂತಸ್ತಿಗೆ, ಸಂಭಾವನೆಗೆ ಇಲ್ಲಿ ಹೆಚ್ಚು ಬೆಲೆ. ಇವೆಲ್ಲದರ ನಡುವೆ ಜಾತಕ ನೋಡುವ ಪ್ರಹಸನ ಕೂಡ ಒಂದು ಕಾಲಹರಣದ ಸಂಗತಿ. ಹತ್ತಾರು “ಗಂಡುಗಳು’ ಬಂದು, ಚೆನ್ನಾಗಿ ತಿಂದು ನಗುತ್ತಲೇ ಹೋಗುತ್ತಾರೆ. “ಊರಿಗೆ ಹೋಗಿ ಫೋನ್ ಮಾಡ್ತೇವೆ’ ಎಂದು ಸೌಜನ್ಯದಿಂದಲೇ ಹೇಳುವ ಜನ ಆನಂತರದಲ್ಲಿ ಉಗುಳು ನುಂಗುತ್ತಾ, “ನಮಗೇನೋ ಸಂಬಂಧ ಇಷ್ಟ ಆಯ್ತು. ಆದರೆ, ಜಾತಕ ಹೊಂದುತ್ತಿಲ್ಲ’, “ಹುಡುಗಿ ಕೊಂಚ ದಪ್ಪಗಾದಳು’, “ಈ ಸಂಬಂಧ ಬೆಳೆಸಲು ನಮ್ಮ ಮನೆ ದೇವರು ಅಪ್ಪಣೆ ನೀಡಲಿಲ್ಲ’… ಎಂಬ ಬಣ್ಣ ಬಣ್ಣದ ಸಬೂಬು ಹೇಳಿ, ನುಣುಚಿಕೊಳ್ಳುತ್ತಾರೆ. ಹಾಗೆ ಜಾತಕಗಳ ಝೆರಾಕ್ಸ್‌ಗೆ ಹತ್ತಿಪ್ಪತ್ತು ರೂಪಾಯಿ ಖೋತಾ!
Related Articles
Advertisement
ಹೀಗಿದ್ದರೂ ಹುಡುಗಿ ಮತ್ತವಳ ಮನೆಯ ಕಡೆಯವರು ಸುಮ್ಮನೇ ಚಿಂತಿಸುತ್ತಾ ಕೂರುವಂತಿಲ್ಲ. ಇಂದಲ್ಲಾ ನಾಳೆ ಕಂಕಣಬಲ ಕೂಡಿ ಬರುತ್ತದೆ ಎನ್ನುವ ಆಶಾವಾದವನ್ನು ಹೊತ್ತುಕೊಂಡೇ ತಿರುಗಬೇಕಾಗುತ್ತದೆ. ನೆಂಟರಿಷ್ಟರ ಚುಚ್ಚುನುಡಿಗಳು, ಅಸಂಬದ್ಧ ಪ್ರಶ್ನೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. “ಎಷ್ಟು ಗಂಡುಗಳು ಬಂದರೂ, ಯಾರೂ ಯಾಕೆ ಒಪ್ತಿಲ್ಲ?’, “ಸದ್ಯಕ್ಕೆ ಮದ್ವೆ ಮಾಡೋದಿಲ್ವೇ?’, “ಎಷ್ಟು ದಿನಾ ಅಂತ ಮನೇಲಿ ಇಟ್ಕೊàತೀರಾ?’- ಇಂಥ ಪ್ರಶ್ನೆಗಳ ದಾಳಿ ಯಾವಾಗಲೂ ಇದ್ದಿದ್ದೇ.
ಹುಡುಗಿಯನ್ನು ನೋಡಲು ಬರುವ ಗಂಡಿನ ತಾಯಿಯೂ ಹೆಣ್ಣೇ ಅಲ್ಲವೇ? ಮದುವೆಯ ಮುಂಚೆ ಆಕೆಯೂ ತಂದೆಗೆ ಮಗಳಾಗಿದ್ದವಳೇ ಅಲ್ಲವೇ? ಆದರೂ ತನ್ನ ಮಗನಿಗೆ ಹೆಣ್ಣು ನೋಡುವ ಸಂದರ್ಭ ಬಂದಾಗ ಅವೆಲ್ಲವನ್ನೂ ಆಕೆ ಮರೆತುಬಿಡೋದು ಯಾಕೆ? ಮನೆಯಲ್ಲಿ ಮದುವೆಯಾಗದ ಹೆಣ್ಣಿದ್ದಾಳೆ ಎಂದಾಕ್ಷಣ, ಸುಮ್ಮನೆ ನೋಡಿ ಬಂದರಾಯಿತು ಎನ್ನುವ “ಪಿಕ್‌ನಿಕ್’ ಮನೋಭಾವವನ್ನು ಗಂಡಿನ ಮನೆಯವರು ಬಿಡಬೇಕು.
ಒಮ್ಮೊಮ್ಮೆ ತಂದೆತಾಯಿಗೆ ಒಪ್ಪಿಗೆಯಾಗಿದ್ದರೂ ಉದ್ಯೋಗದಲ್ಲಿರುವ ಹಾಗೂ ವ್ಯಾವಹಾರಿಕ ಪ್ರಪಂಚದೊಡನೆ ಬದುಕುವ ಹುಡುಗನಿಗೆ ಮನೆಯಲ್ಲಿರುವ ಹುಡುಗಿ ಇಷ್ಟವಾಗುವುದಿಲ್ಲ. ಹಾಗಾಗಿ, ಬಾಳ ಸಂಗಾತಿಯಾಗಿ, ಎಂಥ ಹುಡುಗಿ ಬೇಕು ಎಂಬುದನ್ನು ಹೆತ್ತವರೊಂದಿಗೆ ಮೊದಲೇ ಚರ್ಚಿಸಿ. ನೀವು ಬಯಸಿದಂಥ ಗುಣ, ಬಣ್ಣ, ಆರ್ಥಿಕ ಸಬಲತೆ ಬಗ್ಗೆ ಚೆಕ್ ಮಾಡಿ. ಎಲ್ಲವೂ ಹೊಂದಿಕೊಳ್ಳಬಹುದೆಂಬ ಭರವಸೆಯಿದ್ದಲ್ಲಿ ಮಾತ್ರ ಹುಡುಗಿ ನೋಡಲು ಹೋಗಿ.
ಸಂಗಾತಿಯ ಹುಡುಕಾಟ ಸುಲಭವಲ್ಲ. ಹಾಗೆಂದು ಹೆಣ್ಣು ಸಹ ಮಾರಾಟಕ್ಕಿಲ್ಲವಲ್ಲ. ಮದುವೆಯ ನಂತರ ಮನಃಸ್ಥಿತಿಯ ಹೊಂದಾಣಿಕೆಯ ಲೋಪದಲ್ಲಾಗುವ ಸಂಬಂಧಗಳ ಬಿರುಕಿಗೆ ಯಾರೂ ಹೊಣೆಯಲ್ಲ. ಅದು ಅವರಲ್ಲಿರಬೇಕಾದ ಅರಿವು ಮತ್ತು ಬದುಕುವ ಸಾಮರ್ಥ್ಯದ ಮೇಲೆ ನಿರ್ಧಾರವಾಗುವ ವಿಚಾರ. ಬಂದವರ ಮುಂದೆಲ್ಲಾ ನಿಂತು ಹೋಗಲು ಹೆಣ್ಣು ಶೋಕೇಸ್‌ನಲ್ಲಿ ಇಡುವ ಗೊಂಬೆಯಲ್ಲವಲ್ಲ!—-
ಹುಡ್ಗನ ಮನೆಯವ್ರೇ, ಇಲ್ಲೊಮ್ಮೆ ಕೇಳಿ…
– ಹುಡುಗಿಯ ಬಗ್ಗೆ ನಾಲ್ಕಾರು ಮಂದಿಯಿಂದ ಸಂಗತಿ ಕಲೆಹಾಕಿಯೇ ವಧುಪರೀಕ್ಷೆಗೆ ಹೊರಡಿ.
– ಹುಡುಗಿ ಒಪ್ಪಿಗೆಯಾದರೆ, ಅಲ್ಲಿಯೇ ತಿಳಿಸಿ. ಇಲ್ಲವೇ, ವಾರದೊಳಗೆ ಕರೆ ಮಾಡಿ ತಿಳಿಸಿದರೆ ಅನುಕೂಲ.
– ಜಾತಕ ಕೊಂಡೊಯ್ದವರು, ಕೂಡಲೇ ತಾರಾಬಲದ ಬಗ್ಗೆ ಮಾಹಿತಿ ತಿಳಿಸಿದರೆ, ಕಾಲಹರಣ ತಪ್ಪುತ್ತದೆ.
– ಹುಡುಗಿ ಮನೆಯವರು ಬಡವರಾಗಿದ್ದರೆ, ವಧುಪರೀಕ್ಷೆಯ ಆಹಾರ ತಿಂಡಿಯ ಖರ್ಚನ್ನು ಭರಿಸುವುದರಲ್ಲಿ ತಪ್ಪೇನೂ ಇಲ್ಲ.
– ಒಂದು ವೇಳೆ ಹುಡುಗಿ ಒಪ್ಪಿಗೆ ಆಗದಿದ್ದರೆ, ಆಕೆಯ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವುದು ಶೋಭೆಯಲ್ಲ.
—-
ಹುಡ್ಗಿ… ನೀ ಹುಷಾರು ಕಣೇ…
– ಅಪ್ಪನಿಗೆ ಫೋನ್ ಕಾಲ್ ಬಂತು ಅಂತ ಎಲ್ಲ ಪುರುಷರ ಸಂದರ್ಶನಕ್ಕೂ ಗ್ರೀನ್ ಸಿಗ್ನಲ್ ಕೊಡ್ಬೇಡಿ. ಹಿಂದೆ ಮುಂದೆ ಆಲೋಚಿಸಿ ಒಪ್ಪಿಗೆ ನೀಡಿ.
– ವಧುಪರೀಕ್ಷೆಯ ಸಂಭ್ರಮವನ್ನು ವಿಜೃಂಭಣೆಯಿಂದ ಮಾಡುವ ಅಗತ್ಯವಿಲ್ಲ ಎನ್ನುವ ಮಾತನ್ನು ಮನೆಯವರಿಗೆ ತಿಳಿಸಿ.
– ಸಂದರ್ಶನದ ಸಮಾಚಾರವನ್ನು ಊರಿಗೆಲ್ಲ ಹಬ್ಬಸದೆ ಇರೋದೇ ಉತ್ತಮ.
– ನಿಮಗೂ ಒಪ್ಪಿಗೆಯಾಗಿ, ಹುಡುಗನೂ ಒಪ್ಪಿ, ಮನೆಯವರೂ ಆತನನ್ನು ಇಷ್ಟಪಟ್ಟರೆ ಮಾತ್ರ ಒಂದು ನಿರ್ಧಾರಕ್ಕೆ ಬನ್ನಿ. ಯಾರ ಬಲವಂತಕ್ಕೂ ಮಣಿಯದಿರಿ.
– ವಧುಪರೀಕ್ಷೆ ವೇಳೆ ಹುಡುಗನ ಮನೆಯವರು ಟೈಮ್‌ಪಾಸ್‌ಗೆ ಬಂದಿದ್ದಾರೆ ಅಂತೇನಾದ್ರೂ ಗೊತ್ತಾದರೆ, ಜಾಸ್ತಿ ಹೊತ್ತು ಅವರೆದುರು ನಿಲ್ಲಬೇಡಿ. – ಪೂಜಾ ಎಚ್.ವಿ., ಭದ್ರಾವತಿ