Advertisement

ಬಿರುಮಲೆ ಗುಡ್ಡದ ದೂರದರ್ಶನ ಮರುಪ್ರಸಾರ ಕೇಂದ್ರ ಸ್ಥಗಿತ 

10:53 AM Mar 28, 2018 | Team Udayavani |

ಪುತ್ತೂರು: ಈಗಲೂ ಆ್ಯಂಟೆನಾದಲ್ಲಿ ಟಿವಿ ವೀಕ್ಷಿಸುವವರಿಗೆ ಕಹಿ ಸುದ್ದಿ. ಇನ್ನು ಮುಂದೆ ದುಬಾರಿ ಬೆಲೆ ತೆತ್ತು ಕೇಬಲ್‌ ಅಥವಾ ಡಿಶ್‌ ಟಿವಿಗಳನ್ನು ಹಾಕಿಸಿಕೊಳ್ಳಬೇಕು. ಪುತ್ತೂರಿನ ಬಿರುಮಲೆ ಗುಡ್ಡದ ದೂರದರ್ಶನ ಮರುಪ್ರಸಾರ ಕೇಂದ್ರ ಮಂಗಳವಾರದಿಂದ ಸಂಪೂರ್ಣ ಸ್ಥಗಿತಗೊಂಡಿದೆ.

Advertisement

ಪುತ್ತೂರಿನಿಂದ 60 ಕಿ.ಮೀ. ದೂರಕ್ಕೆ ತಲುಪುತ್ತಿದ್ದ ದೂರದರ್ಶನ ಪ್ರಸಾರವನ್ನು ಸ್ಥಗಿತ ಮಾಡುವಂತೆ ಪ್ರಸಾರ ಭಾರತಿ ಮೌಖೀಕ ಆದೇಶ ನೀಡಿದೆ. ಒಟ್ಟು 272 ಕೇಂದ್ರಗಳನ್ನು ಕೂಡಲೇ ಬಂದ್‌ ಮಾಡುವಂತೆ 2 ತಿಂಗಳ ಹಿಂದೆಯೇ ಆದೇಶ ನೀಡಲಾಗಿತ್ತು. ಒಟ್ಟು 171 ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ಸೋಮವಾರ ರಾತ್ರಿ ಮೌಖೀಕ ಸೂಚನೆ ನೀಡಿದೆ. ಇದರಲ್ಲಿ ಪುತ್ತೂರು ಕೂಡ ಸೇರಿದೆ.

ಪುತ್ತೂರಿನ ದರ್ಬೆ ಸಮೀಪದ ಬಿರುಮಲೆ ಗುಡ್ಡದ ತುದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದೂರದರ್ಶನ ಮರುಪ್ರಸಾರ ಕೇಂದ್ರ ಇನ್ನು ಹೆಸರಿಗಷ್ಟೇ. 1997ರ ಜನವರಿ 8ರಂದು ಉದ್ಘಾಟನೆಗೊಂಡಿದ್ದ ಈ ಕೇಂದ್ರ, 21 ವರ್ಷಗಳ ಬಳಿಕ ತೆರೆಮರೆಗೆ ಸರಿಯುತ್ತಿದೆ.

100 ವ್ಯಾಟ್‌ 189.25 ಮೆಗಾ ಹರ್ಟ್ಸ್ ಸಾಮರ್ಥ್ಯದ ಡಿವಿಬಿಟಿ2 (ಡಿಜಿಟಲ್‌ ವೀಡಿಯೋ ಬ್ರಾಡ್‌ಕಾಸ್ಟ್‌ ಟೆರೆಸ್ಟ್ರಿಯಲ್‌) ಬಿರುಮಲೆ ಗುಡ್ಡದಲ್ಲಿದ್ದ ದೂರದರ್ಶನ ಮರುಪ್ರಸಾರ ಕೇಂದ್ರ. ವಾಸ್ತವದಲ್ಲಿ ಇದರ ವ್ಯಾಪ್ತಿ 30 ಕಿ.ಮೀ. ಆದರೆ ಬಿರುಮಲೆ ಗುಡ್ಡ ಸಮುದ್ರಮಟ್ಟದಿಂದ 60 ಮೀಟರ್‌ ಹಾಗೂ ಗುಡ್ಡದ ತುದಿಯಲ್ಲಿರುವ ಟವರ್‌ನ 45 ಮೀಟರ್‌ ಸಹಿತ 105 ಮೀಟರ್‌ ಎತ್ತರದಿಂದ ಮರುಪ್ರಸಾರ ಮಾಡಲಾಗುತ್ತಿತ್ತು. ಪರಿಣಾಮ, 60 ಕಿ.ಮೀ.ನಷ್ಟು ದೂರಕ್ಕೆ ಇಲ್ಲಿನ ತರಂಗಾಂತರ ತಲುಪುತ್ತಿತ್ತು. ಇಂತಹ ವ್ಯವಸ್ಥೆ ಇತರ ಮರುಪ್ರಸಾರ ಕೇಂದ್ರಗಳಲ್ಲಿ ಇಲ್ಲ ಎನ್ನುವುದು ಬಿರುಮಲೆ ಬೆಟ್ಟದ ವಿಶೇಷ.

ಒಟ್ಟು ಎಂಟು ಹುದ್ದೆಗಳ ಪೈಕಿ 4 ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಇಬ್ಬರು ಸಹಾಯಕ ಅಭಿಯಂತರರು, ಇಬ್ಬರು ತಾಂತ್ರಿಕ ಸಹಾಯಕರು. ಅವರನ್ನೆಲ್ಲ ಈಗ ಬೇರೆಡೆಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಈ ಕಟ್ಟಡ ಪರ್ಲಡ್ಕ ಬಾಲವನ ಅಭಿವೃದ್ಧಿ ಸಮಿತಿಗೆ ಸೇರಿದ್ದು. ಸಹಾಯಕ ಆಯುಕ್ತರಿಗೆ ಇದರ ನೇತೃತ್ವ. ಸಹಾಯಕ ಆಯುಕ್ತರಿಗೆ ದೂರದರ್ಶನ ಕೇಂದ್ರ ಪ್ರತಿ ತಿಂಗಳು ಬಾಡಿಗೆ ಪಾವತಿಸುತ್ತಿತ್ತು.

Advertisement

ಮೇಲ್ದರ್ಜೆ ಕನಸು ಭಗ್ನ
ಬಿರುಮಲೆ ಗುಡ್ಡದ ದೂರದರ್ಶನ ಮರುಪ್ರಸಾರ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಬೇಡಿಕೆ ಬಹುಕಾಲದಿಂದ ಇತ್ತು. ಈ ಬೇಡಿಕೆಗೆ ಇದೀಗ ಎಳ್ಳು ನೀರು ಬಿಟ್ಟಂತಾಗಿದೆ. ಕೇಂದ್ರ ಮೇಲ್ದರ್ಜೆಗೇ ಏರುತ್ತಿದ್ದರೆ, 10 ಚಾನೆಲ್‌ ಹಾಗೂ 5 ರೇಡಿಯೋ ಕೇಂದ್ರಗಳು ಸುತ್ತಲಿನ ಜನರಿಗೆ ಸಿಗುತ್ತಿದ್ದವು. ಮೊಬೈಲ್‌ ಆ್ಯಪ್‌ನಲ್ಲೂ ಟಿವಿ ಚಾನೆಲ್‌, ರೇಡಿಯೋ ಕೇಳಬಹುದಿತ್ತು. ಬಳ್ಪದ 41 ಅಂಗನವಾಡಿ ಕೇಂದ್ರಗಳಿಗೆ ಇನ್ನೂ ಎಫ್‌ಎಂ ತಲುಪುತ್ತಿಲ್ಲ ಎಂಬ ವರದಿಯನ್ನು ಜಿ.ಪಂ. ಸಿಇಒ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿರುಮಲೆ ಗುಡ್ಡದಲ್ಲಿ 1 ಕಿ.ವ್ಯಾ. ಸಾಮರ್ಥ್ಯದ ಆಕಾಶವಾಣಿ ಟ್ರಾನ್ಸ್‌ ಮೀಟರ್‌ ಅಳವಡಿಸುವಂತೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು.

ಸುಳ್ಯದ ಕೇಂದ್ರವೂ ಸ್ಥಗಿತ
ತಿಂಗಳ ಹಿಂದೆಯಷ್ಟೇ ಸುಳ್ಯದ ಕುರುಂಜಿ ಭಾಗ್‌ನಲ್ಲಿದ್ದ ಮರುಪ್ರಸಾರ ಕೇಂದ್ರವನ್ನು ಸ್ಥಗಿತಗೊಳಿಸಲಾಗಿತ್ತು. ವಿಎಲ್‌ಪಿಟಿ (ವೆರಿ ಲೋ ಪವರ್‌ ಟ್ರಾನ್ಸ್‌ ಮಿಟ್‌) ಸ್ವಯಂಚಾಲಿತವಾಗಿ, ಸೋಲಾರ್‌ ಆಧಾರಿತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಫೆಬ್ರವರಿಯಲ್ಲಿ ಇದನ್ನು ಸ್ಥಗಿತಗೊಳಿಸಿ ಪ್ರಸಾರ ಭಾರತಿ ಆದೇಶ ಹೊರಡಿಸಿದೆ. 

ಪ್ರತಿಭಟನೆಗೆ ಸಿದ್ಧತೆ 
ವಿದ್ಯಾಭ್ಯಾಸ, ಕೃಷಿ ಚಟುವಟಿಕೆಗೆ ಗ್ರಾಮೀಣ ಭಾಗದ ಜನರು ಬಿರುಮಲೆ ಗುಡ್ಡದ ದೂರದರ್ಶನ ಕೇಂದ್ರವನ್ನು ಅವಲಂಬಿಸಿದ್ದರು. ಡಿಟಿಎಚ್‌ ಅಳವಡಿಸಲು ಹಣ ಇಲ್ಲದ ಕೃಷಿ ಹಾಗೂ ಕಾರ್ಮಿಕ ವರ್ಗ ದೂರದರ್ಶನವನ್ನೇ ಅವಲಂಭಿಸಿತ್ತು. ಇದೀಗ ಅವರಿಗೆ ಪರ್ಯಾಯ ವ್ಯವಸ್ಥೆ ಇಲ್ಲದಂತಾಗಿದೆ. ಕೇಂದ್ರ ಸಚಿವರಿಗೆ, ಆಕಾಶವಾಣಿ ಮತ್ತು ದೂರದರ್ಶನ ಮಹಾ ನಿರ್ದೇಶಕರಿಗೆ, ಮಂಗಳೂರು ಆಕಾಶವಾಣಿ ಮುಖ್ಯಸ್ಥರಿಗೆ, ಮಂಗಳೂರು ದೂರದರ್ಶನ ಅನುರಕ್ಷಣಾ ಕೇಂದ್ರ ಮುಖ್ಯಸ್ಥರಿಗೆ ಪತ್ರ ಬರೆದು ವಿಷಯ ತಿಳಿಸಲಾಗುವುದು. ಇದಕ್ಕೆ ಸೂಕ್ತ ಸ್ಪಂದನೆ ಸಿಗದೇ ಹೋದರೆ, ಪ್ರತಿಭಟನೆ ಹಾದಿ ಹಿಡಿಯುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದು ರಾಜೇಶ್‌ ಬನ್ನೂರು, ಅನಂತರಾಮ ಪಿ.ಕೆ., ಎಚ್‌. ಉದಯ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next