Advertisement
ಮಂಗಳೂರು: ಆತ ಕಾಲೇಜಿನಲ್ಲಿರುವಾಗಲೇ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಅದೇ ಕಬಡ್ಡಿ ಆಟವು ಆ ಹುಡುಗನನ್ನು ದೇಶ ಸೇವೆಗಿಳಿಯುವಂತೆ ಮಾಡಿತು. ಈಗ 15 ವರ್ಷಗಳ ಸಾರ್ಥಕ್ಯದೊಂದಿಗೆ ರಾಷ್ಟ್ರ ರಕ್ಷಣೆಯ ಕೈಂಕರ್ಯದಲ್ಲಿ ನಿರತರಾಗಿದ್ದಾರೆ ಬಾಳಿಲದ ರತ್ನಾಕರ್ ರೈ.
ರತ್ನಾಕರ್ ರೈ ಅವರ ತಂದೆ-ತಾಯಿ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ಬಳಿಕ ಮೂಡಬಿದಿರೆ ಎಡಪದವು ಶ್ರೀ ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಕಬಡ್ಡಿ ಆಟಗಾರರಾಗಿದ್ದ ರತ್ನಾಕರ್, ಕಾಲೇಜು ಹಂತದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಸುಳ್ಯದ ಹಳ್ಳಿ ಹುಡುಗ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದ ಕಬಡ್ಡಿಯೇ ಅವರನ್ನು ಮುಂದೊಂದು ದಿನ ಸೇನೆಯಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗುವಂತೆ ಮಾಡಿತ್ತು.
ಪತ್ನಿ ವರಲಕ್ಷ್ಮೀ ಶೆಟ್ಟಿ ಜತೆಗೆ.
Related Articles
ಕಬಡ್ಡಿಯಲ್ಲಿ ವಿಶೇಷ ಸಾಧನೆ ಮಾಡಿದ್ದ ರತ್ನಾಕರ್ ಕಬಡ್ಡಿ ಪ್ಲೇಯರ್ ಆಗಿ ಬದುಕು ಕಂಡು ಕೊಳ್ಳಬೇಕೆಂದು ಬಯಸಿದ್ದರು. ಆದರೆ ತೀರಾ ಬಡತನದ ಕುಟುಂಬದಿಂದ ಬಂದಿರುವ ರತ್ನಾಕರ್ ಅವರ ಶೈಕ್ಷಣಿಕ ಬದುಕಿಗೆ ಆಧಾರವಾಗಿ ನಿಂತವರು ಪ್ರೇಮನಾಥ ಶೆಟ್ಟಿ ಕಾವು. ಪ್ರೇಮನಾಥ ಶೆಟ್ಟಿ ಅವರೇ ರತ್ನಾಕರ್ ಅವರ ಶಿಕ್ಷಣದ ಖರ್ಚು ವೆಚ್ಚ ಭರಿಸುತ್ತಿದ್ದರಲ್ಲದೆ, ಅವರನ್ನು ಸೈನ್ಯಕ್ಕೆ ಸೇರಿಸಬೇಕೆಂಬ ಕನಸು ಹೊಂದಿದ್ದರು. ಕಬಡ್ಡಿ ಆಟದಲ್ಲಿ ಸೈ ಎನಿಸಿಕೊಂಡಿದ್ದ ರತ್ನಾಕರ್ ಆ ಆಟದ ಮೂಲಕವೇ ಭಾರತೀಯ ಸೇನೆಗೆ ಆಯ್ಕೆಯಾದರು. ಹಾಗಾಗಿ ಸೈನ್ಯಕ್ಕೆ ಸೇರುವಲ್ಲಿ ಕಾವು ಪ್ರೇಮನಾಥ ಶೆಟ್ಟಿ ಅವರೇ ಪ್ರೇರಣೆ ಎಂದು ನೆನಪಿಸಿಕೊಳ್ಳುತ್ತಾರೆ ರತ್ನಾಕರ್ ರೈ. ಜತೆಗೆ ಬಾಳಿಲದ ಆದರ್ಶ ಫ್ರೆಂಡ್ಸ್ ಕ್ಲಬ್‌ನ ಪ್ರೋತ್ಸಾಹವನ್ನೂ ಅವರು ಮರೆಯುವುದಿಲ್ಲ.
Advertisement
ಮನೆ ಕಟ್ಟಿದ ಖುಷಿರತ್ನಾಕರ್ ಅವರ ತಂದೆ ಪಿ. ಬಾಬು ರೈ ಮತ್ತು ತಾಯಿ ಪಿ. ಭಾಗೀರಥಿ ರೈ, ಸಹೋದರರಾದ ಸುರೇಶ್ ರೈ ಹಾಗೂ ನವೀನ್ ರೈ ಬಾಳಿಲದ ಮನೆಯಲ್ಲಿದ್ದಾರೆ. ಪತ್ನಿ ವರಲಕ್ಷ್ಮೀ ಶೆಟ್ಟಿ ಏಳು ತಿಂಗಳ ಮಗು ವರ್ಷಿತ್ ಶೆಟ್ಟಿ ಜತೆಗಿನ ಪುಟ್ಟ
ಸಂಸಾರ ರತ್ನಾಕರ್ ಅವರದ್ದು. ತೀರಾ ಬಡತನದ ಹಿನ್ನೆಲೆ ಹೊಂದಿದ್ದ ರತ್ನಾಕರ್, ಎಳವೆಯಿಂದಲೇ ಕಷ್ಟದಲ್ಲಿ ಬೆಳೆದು
ಬಂದವರು. ಭಾರತೀಯ ಸೇನೆಗೆ ಸೇರಿದ ಅನಂತರ ಹೊಸ ಮನೆ ಕಟ್ಟಿ ಮನೆಗೆ ಆಧಾರಸ್ಥಂಭವಾಗಿದ್ದಾರೆ. ಅದೇ ಬದುಕಿನ ಅತೀವ ಖುಷಿಯ ವಿಷಯ ಎನ್ನುತ್ತಾರೆ ಅವರು. ತರಬೇತಿ ನೀಡುವೆ
ಸೇನೆಗೆ ಸೇರುವ ಬಗ್ಗೆ ಹಲವರಿಗೆ ಭಯ ಇರುತ್ತದೆ. ಆದರೆ ಭಯ ಪಡಬೇಕಾದ ಅಗತ್ಯವೇ ಇಲ್ಲ. ತಾಯಿ ಭಾರತಿಯ
ಸೇವೆ ಮಾಡಿದಾಗ ಸಿಗುವ ಖುಷಿ ಬೇರೆ ಯಾವುದರಿಂದಲೂ ಸಿಗದು. ಯುವಕರು ಸೇನೆ ಸೇರುವತ್ತ ಮನಸ್ಸು ಮಾಡಬೇಕು. ಸೇನೆಗೆ ಸೇರಲು ಆಸಕ್ತರಿರುವವರು ನಾನು ರಜಾ ಅವಧಿಯಲ್ಲಿ ಊರಿಗೆ ಬಂದಾಗ ನನ್ನನ್ನು ಸಂಪರ್ಕಿಸಿದರೆ ಪೂರಕ ತರಬೇತಿ ನೀಡಲೂ ಸಿದ್ಧನಿದ್ದೇನೆ ಎನ್ನುತ್ತಾರೆ ರತ್ನಾಕರ್ ರೈ. ಕಬಡ್ಡಿಯಲ್ಲಿ ಮುಂದುವರಿಯಬೇಕೆಂದಿದ್ದರೂ, ದೇಶಸೇವೆಯ ಕನಸು ಎಳವೆಯಿಂದಲೇ ಇತ್ತು. ಆ ಕನಸನ್ನು ನನಸು ಮಾಡಿಕೊಂಡ ಹೆಮ್ಮೆ ನನಗೆ ಇದೆ.
– ರತ್ನಾಕರ್ ದೇಶ ರಕ್ಷಣೆಗೆ ಸಂಕಲ್ಪ ತೊಡಿ
ಯುವಕರು ದೇಶ ಸೇವೆಗೆ ಮುಂದಾಗಬೇಕು. ಜೀವನಕ್ಕೆ ದಾರಿಯಾಗಬೇಕು ಎಂದು ಸೇನೆಗೆ ಸೇರಬಾರದು. ನಿಜವಾಗಿ ದೇಶ ರಕ್ಷಣೆಯ ಸಂಕಲ್ಪ ತೊಟ್ಟು ಬರುವ ಮನಸ್ಸಿರಬೇಕು. ಅದೇ ಜೀವನಕ್ಕೆ ಸಾರ್ಥಕಭಾವ ಕೊಡುತ್ತದೆ.
-ರತ್ನಾಕರ್ ರೈ ಬಾಳಿಲ ಆತ ಸದಾ ಮುಂದು
ಮೊದಲಿಗೆ ಸ್ವಲ್ಪ ಬೇಸರವಿತ್ತು. ಬಳಿಕ ದೇಶ ಸೇವೆಗೆ ಹೊರಟ ಮಗನ ಬಗ್ಗೆ ಹೆಮ್ಮೆ ಎನಿಸುತ್ತಿದೆ. ರಜೆಯಲ್ಲಿ ಊರಿಗೆ ಬಂದು ವಾರ್ ಫೀಲ್ಡ್ ಬಗ್ಗೆ ಎಲ್ಲ ತಿಳಿಸುವಾಗ ರೋಮಾಂಚನವಾಗುತ್ತದೆ. ಆತ ಕಬಡ್ಡಿ, ವಾಲಿಬಾಲ್ ಸಹಿತ ಎಲ್ಲ ಕ್ರೀಡೆಯಲ್ಲೂ ಸದಾ ಮುಂದಿರುತ್ತಿದ್ದ.
-ಪಿ. ಭಾಗೀರಥಿ ರೈ, ತಾಯಿ ಸ್ನೇಹಿತರು ಪ್ರೊ ಕಬಡ್ಡಿಗೆ; ರತ್ನಾಕರ್ ದೇಶ ಸೇವೆಗೆ
ಈಗಾಗಲೇ ಪ್ರೊ ಕಬಡ್ಡಿ ಮೂಲಕ ದೇಶಾದ್ಯಂತ ಮನೆ ಮಾತಾಗಿರುವ ಸುಕೇಶ್ ಹೆಗ್ಡೆ, ಪ್ರಶಾಂತ್ ಮುಂತಾದವರು ರತ್ನಾಕರ್ ಅವರೊಂದಿಗೆ ಆಡುತ್ತಿದ್ದವರು. ಕಬಡ್ಡಿ ಒಡನಾಡಿಗಳೆಲ್ಲ ಕಬಡ್ಡಿಯಲ್ಲಿ ದೇಶವನ್ನು ಪ್ರತಿನಿಧಿಸಿದರೆ, ರತ್ನಾಕರ್ ದೇಶ ರಕ್ಷಕನಾಗಿ ಗಮನ ಸೆಳೆದಿದ್ದಾರೆ. ಸೈನಿಕನಾಗಿ ದೇಶ ಸೇವೆಗೆ ಹೋದರೂ, ಆಗಾಗ್ಗೆ ಊರಿಗೆ ಬರುವಾಗ ಸ್ನೇಹಿತರೊಂದಿಗೆ ಸೇರಿಕೊಂಡು ಕಬಡ್ಡಿ ಆಡುವುದನ್ನು ರತ್ನಾಕರ್ ಮರೆಯುವುದಿಲ್ಲ. ಧನ್ಯಾ ಬಾಳೆಕಜೆ