ಬೆಂಗಳೂರು: ಹಣ ನೀಡದಿರುವುದಕ್ಕೆ ತಾಯಿ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪುತ್ರನನ್ನು ಸದಾಶಿವನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಉತ್ತಮ್ ಕುಮಾರ್ ಬಂಧಿತ ಆರೋಪಿ. ಆರೋಪಿ ಡಿ.6ರ ರಾತ್ರಿ ತಾಯಿ ಭಾರತಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಮಂಜುನಾಥ್ ಮತ್ತು ಭಾರತಿ ದಂಪತಿಯ ದತ್ತು ಪುತ್ರ ಉತ್ತಮ್ ಕುಮಾರ್, ಪೋಷಕರ ಜತೆ ಅಶ್ವತ್ಥನಗರದಲ್ಲಿ ವಾಸವಾಗಿದ್ದ. ಈ ಮಧ್ಯೆ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ. ಇದರಿಂದ ಬೇಸರಗೊಂಡಿದ್ದ ಪೋಷಕರು ಸಾಕಷ್ಟು ಬಾರಿ ಬುದ್ದಿ ಹೇಳಿದ್ದರು. ಆದರೂ ಆರೋಪಿ ಬದಲಾಗಿರಲಿಲ್ಲ.
ಅಲ್ಲದೆ, ಕುಡಿಯಲು ಸ್ನೇಹಿತರ ಬಳಿ 10 ಸಾವಿರ ರೂ. ಸಾಲ ಮಾಡಿಕೊಂಡಿದ್ದ. ಹೀಗಾಗಿ ಸ್ನೇಹಿತರು ಹಣ ಹಿಂದಿರುಗಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಡಿ.6ರ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದ ಉತ್ತಮ್ ಕುಮಾರ್, ತಾಯಿ ಭಾರತಿಗೆ 10 ಸಾವಿರ ರೂ. ಹಣ ಕೊಡುವಂತೆ ಕೇಳಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ ಮನೆಯಲ್ಲಿದ್ದ ಪ್ರಟ್ರೋಲ್‌ನ್ನು ಆಕೆ ಮೈಮೇಲೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಪತ್ನಿಯ ಚೀರಾಟ ಕೇಳಿ ತಕ್ಷಣ ನೆರವಿಗೆ ಧಾವಿಸಿದ ಅವರ ಪತಿ ಮಂಜುನಾಥ್ ಹೊದಿಕೆಯಿಂದ ಬೆಂಕಿ ನಂದಿಸಿ, ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಪೊಲೀಸರು ಹೇಳಿದರು.
ಮದ್ಯದ ಅಮಲಿನಲ್ಲಿ ತಪ್ಪು ಮಾಡಿದೆ: “ಮದ್ಯದ ಅಮಲಿನಲ್ಲಿ ತಪ್ಪು ಮಾಡಿದ್ದೇನೆ. ಸಾಲ ತೀರಿಸಲು ತಾಯಿ ಬಳಿ 10 ಸಾವಿರ ರೂ. ಹಣ ಕೇಳಿದೆ. ಅವರು ಕೊಡಲು ನಿರಾಕರಿಸಿದರು. ಇದರಿಂದ ಕೋಪಗೊಂಡು ತ್ಯವೆಸಗಿದ್ದೇನೆ’ ಎಂದು ಉತ್ತಮ್ ಕುಮಾರ್ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.