Advertisement

ಬಾಲಕ ಹೊರಟ ಹಡಗು ಚಂಡಮಾರುತಕ್ಕೆ ಸಿಕ್ಕಿತ್ತು

03:45 AM Jan 12, 2017 | Harsha Rao |

ಸಾಹಸಿ ಹುಡುಗನ ಕಥಾಪ್ರಯಾಣ

Advertisement

ಇದು ಸಾಹಸ ಕತೆಗಳ ಸರಣಿ. ಅಜಿತನೆಂಬ ಹುಡುಗನ ಬೇರೆ ಬೇರೆ ಸಾಹಸಗಳನ್ನು ಹೇಳುವ ಈ ಸೀರೀಸ್‌ನಲ್ಲಿ ನೀವು ಟಿವಿಯಲ್ಲಿ ನೋಡೋ ಥ್ರಿಲ್ಲಿಂಗ್‌ ಕತೆಗಳಂಥ ಕತೆಗಳೇ ಸಿಗಲಿವೆ. ಕಣ್ಣು ಮುಚ್ಚದೇ ಓದುವಂಥ, ಮುಂದೇನಾಗುತ್ತದೆ ಅನ್ನುವ ಕುತೂಹಲ ಉಳ್ಳಂಥ ಈ ಕತೆಗಳನ್ನು ಓದಿ ಎಂಜಾಯ್‌ ಮಾಡಿ.

ಮೂಲ: ಮ್ಯಾನ್‌ ಓವರ್‌ಬೋರ್ಡ್‌- ವಸಂತಮೂರ್ತಿ,

ಪುಸ್ತಕದ ಹೆಸರು: ಶಾರ್ಟ್‌ ಸ್ಟೋರೀಸ್‌ ಫಾರ್‌ ಚಿಲ್ಡ್ರನ್‌

ಪ್ರಕಟಣೆ: ಚಿಲ್ಡ್ರನ್‌ ಬುಕ್‌ ಟ್ರಸ್ಟ್‌, ದೆಹಲಿ

Advertisement

ದೈತ್ಯ ಹಡಗಿನ ಡೆಕ್‌ನ ಮೇಲೆ ನಿಂತಿದ್ದೆ. ಹಡಗು ನಿಧಾನವಾಗಿ ಚೆನ್ನೈ ಬಂದರಿನಿಂದ ಹೊರಟಿತ್ತು. ತೀರದಲ್ಲಿ ನಿಂತು ಕೈ ಬೀಸುತ್ತಿದ್ದ ಅಜ್ಜಿ ತಾತ ಕಣ್ಮರೆಯಾದರು. ಅವರು ಚುಕ್ಕಿಚಿತ್ರದಂತೆ ಕಾಣುವವರೆಗೂ ನಾನು ಕೈ ಬೀಸುತ್ತ ನಿಂತಿದ್ದೆ. ಅವರು ಕಣ್ಮರೆಯಾದ ಮೇಲೆ ಅಲ್ಲಿ ನಾನೊಬ್ಬನೇ. ಅದನ್ನು ನೆನೆಸಿಯೇ ನಾನು ಪುಳಕಿತನಾಗುತ್ತಿದ್ದೆ. ಹಡಗಿನಲ್ಲಿ ಒಬ್ಬನೇ ಪ್ರಯಾಣಿಸುತ್ತಿದ್ದದ್ದು ಅದೇ ಮೊದಲು. 

“ಒಬ್ಬನೇ ಪ್ರಯಾಣ ಮಾಡುತ್ತಿದ್ದೀಯಾ?’ ಪಕ್ಕದಲ್ಲಿ ನಿಂತಿದ್ದ ಪ್ರಯಾಣಿಕರು ಕೇಳಿದರು. 
“ಹೌದು ಅಂಕಲ್‌, ರಜೆಯಲ್ಲಿ ಅಜ್ಜಿಮನೆಗೆ ಬಂದಿದ್ದೆ. ಈಗ ಸಿಂಗಾಪುರದಲ್ಲಿರುವ ನನ್ನ ಅಪ್ಪ ಅಮ್ಮನ ಹತ್ರ ಹೋಗ್ತಿದ್ದೀನಿ’ ಅಂದೆ. 

“ನಿನ್ನ ಹೆಸರೇನು?’ ಅಂತ ಕೇಳಿದ್ರು.
“ಅಜಿತ್‌’ ಅಂದೆ.

ಅವತ್ತಿಡೀ ಆ ದೊಡ್ಡ ಹಡಗಲ್ಲಿ ಓಡಾಡುತ್ತಾ ಕಳೆದೆ. ಅದೊಂದು ತೇಲುವ ದೊಡ್ಡ ಮನೆಯಂತಿತ್ತು. ಸುಸಜ್ಜಿತ ರೂಮ್‌ಗಳು, ಸ್ವಿಮ್ಮಿಂಗ್‌ ಪೂಲ್‌, ಇನ್‌ಡೋರ್‌ ಔಟ್‌ ಡೋರ್‌ ಆಟಗಳು, ಲೈಬ್ರೆರಿ ಎಲ್ಲ ಇತ್ತು. 
ಮರುದಿನ ಮುಂಜಾನೆ ಎದ್ದು ಹೊರಬಂದಾಗ ಎಲ್ಲರೂ ಡೈನಿಂಗ್‌ ಹಾಲ್‌ನಲ್ಲಿ ಸೇರಿದ್ದರು. ಸಣ್ಣ ಮ್ಯೂಸಿಕ್‌ ಕೇಳಿ ಬರುತ್ತಿತ್ತು. ಕೆಲವರು ಬೆಳಗಿನ ಉಪಹಾರ ಸೇವನೆ ಮಾಡುತ್ತಿದ್ದರು. ಇದ್ದಕ್ಕಿದ್ದ ಹಾಗೆ ಲೌಡ್‌ಸ್ಪೀಕರ್‌ನಲ್ಲಿ ಸೂಚನೆಯೊಂದು ಕೇಳಿಬಂತು. ಹಡಗಿನ ಕ್ಯಾಪ್ಟನ್‌ ಮಾತನಾಡುತ್ತಿದ್ದರು, ” ಗೆಳೆಯರೇ, ಈಗಷ್ಟೇ ಸಂದೇಶ ಬಂದಿದೆ. ನಾವು ಪ್ರಯಾಣಿಸುವ ಮಾರ್ಗದಲ್ಲಿ ಚಂಡಮಾರುತ ಅಪ್ಪಳಿಸಲಿದೆ. ದಯವಿಟ್ಟು ಭಯಭೀತರಾಗಬೇಡಿ, ಸಾವಧಾನದಿಂದ ಕುಳಿತುಕೊಳ್ಳಿ. ಆರೋಗ್ಯ ಸಮಸ್ಯೆಯಿರುವವರು, ಸಮುದ್ರದಲ್ಲಿ ಪ್ರಯಾಣಿಸುವಾಗ ಹೊಟ್ಟೆತೊಳಸುವ, ವಾಂತಿಯ ಸಮಸ್ಯೆ ಇರುವವರು ದಯವಿಟ್ಟು ನಿಮ್ಮ ನಿಮ್ಮ ಕ್ಯಾಬಿನ್‌ಗೆ ಹೋಗಿ ಕುಳಿತುಕೊಳ್ಳಿ, ಧನ್ಯವಾದ’ 

ಈ ಸುದ್ದಿ ಕಿವಿಗೆ ಬಿದ್ದದ್ದೇ ಜನರೆಲ್ಲ ಏಕ್‌ದಂ ಚಿಂತಾಕ್ರಾಂತರಾಗಿ ಕುಳಿತರು. ಎಲ್ಲ ಕಡೆ ಭಯದ ವಾತಾವರಣ. ಒಬ್ಬ ವೃದ್ಧ ಹೆಂಗಸು ಜೋರಾಗಿ ಪ್ರಾರ್ಥಿಸತೊಡಗಿದರು, ” ಓ ದೇವರೆ, ನಮ್ಮಲ್ಲಿ ಕರುಣೆ ಇಡು. ನನ್ನ ಒಬ್ಬನೇ ಮಗ ಸಿಂಗಾಪುರದಲ್ಲಿ ನನಗೋಸ್ಕರ ಕಾಯುತ್ತಿದ್ದಾನೆ’ 

ಅಷ್ಟರಲ್ಲಿ ಒಬ್ಬ ಪ್ರಯಾಣಿಕ ಅವರನ್ನು ಸಮಾಧಾನಿಸಿದರು, ” ಚಿಂತೆ ಮಾಡಬೇಡಿ ಮ್ಯಾಡಮ್‌. ಚಂಡಮಾರುತ ಬರುವ ಸೂಚನೆ ಇದೆ ಎಂದಷ್ಟೇ ಅವರು ಹೇಳಿದ್ದು. ಚಂಡಮಾರುತ ಬಂದೇ ಬರುತ್ತದೆ ಎಂದು ಖಚಿತವಾಗಿ ಹೇಳಿಲ್ಲ. ನಮಗೇನೂ ತೊಂದರೆಯಾಗಲಿಕ್ಕಿಲ್ಲ’ 

ನನ್ನ ಹಿಂಬದಿ ಕುಳಿತ ಹೆಂಗಸೊಬ್ಬರು ಆಯಾಸದಿಂದ ಬಸವಳಿದು ಕೂತಿದ್ದರು, ಅವರು ತಮ್ಮಷ್ಟಕ್ಕೇ ಗೊಣಗಿಕೊಂಡ ಹಾಗೆ “ಮೊದಲೇ ನನಗೆ  ಸಮುದ್ರ ಪ್ರಯಾಣ ಅಂದ್ರೆ ಆಗಲ್ಲ. ಇನ್ನು ಚಂಡಮಾರುತ ಬಂದರೆ ದೇವರೆ ಕಾಪಾಡಬೇಕು’ ಎಂದು ಆತಂಕದಿಂದ ಸಮುದ್ರವನ್ನೇ ನೋಡುತ್ತ ಹೇಳಿದರು. 

ಈ ದೊಡ್ಡವರು ಯಾಕೆ ಹೀಗೆ ಆಕಾಶವೇ ತಲೆಮೇಲೆ ಬಿದ್ದಹಾಗೆ ಕೂತಿದ್ದಾರೆ ಅನ್ನುವುದೇ ಅರ್ಥ ಆಗಲಿಲ್ಲ. ನನಗೆ ನಾನೋದಿದ ಹಲವಾರು ಸಮುದ್ರಯಾನದ ಸಾಹಸಗಳು ನೆನಪಾಗಿ ರೋಮಾಂಚನವಾಗುತ್ತಿತ್ತು. ನನ್ನ ಪಕ್ಕದಲ್ಲಿ ಕೂತ ಸ್ವಲ್ಪ ವಯಸ್ಸಾದ ವ್ಯಕ್ತಿಯತ್ತ ತಿರುಗಿ ಕೇಳಿದೆ, “ಅಂಕಲ್‌ ನೀವು ಯಾವತ್ತಾ$ªರೂ ಚಂಡಮಾರುತ ನೋಡಿದ್ದಿರಾ? ಬಹಳ ಅಡ್ವೆಂಚರಸ್‌ ಆಗಿ ಇರುತ್ತಲ್ವಾ?’ 

“ಆಗ ಸಮುದ್ರ ಈಗಿನ ಹಾಗೆ ಶಾಂತವಾಗಿರುವುದಿಲ್ಲ. ದೊಡ್ಡ ದೊಡ್ಡ ಅಲೆಗಳೇಳುತ್ತವೆ. ಅದು ನಮ್ಮ ಹಡಗಿಗೆ ಬಡಿದು ಅದು ಅಲ್ಲೋಲ ಕಲ್ಲೋಲವಾಗುತ್ತೆ. ಚಂಡಮಾರುತ ಇರುವಾಗ ಯಾವತ್ತೂ ಸಮುದ್ರಯಾನ ಮಾಡಿಲ್ಲ. ಆದರೆ ದೂರದಲ್ಲಿ ನಿಂತು ನೋಡಿದ್ದೇನೆ. ನಾನು ಸ್ಕೂಲ್‌ಗೆ ಹೋಗ್ತಿದ್ದಾಗ ಒಬ್ಬರು ಟೀಚರ್‌ ತಾವು ಸಮುದ್ರ ಪ್ರಯಾಣದಲ್ಲಿ ಕಂಡ ಚಂಡಮಾರುತದ ಬಗ್ಗೆ ಹೇಳಿದ್ದರು. ಅದಂತೂ ಭಯಾನಕ ಬಿಡು’ ಅಂದರು.

“ಅಂಕಲ್‌ ನಾವು ಊಟ ಮಾಡುವ ಟೈಂಗೆ ಚಂಡಮಾರುತ ಬಂದರೆ ಮಜಾ ಇರುತ್ತಲ್ಲ? ನಮ್ಮ ಊಟದ ತಟ್ಟೆಗಳು, ಟೇಬಲ್‌ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿ ಓಡಾಡುತ್ತಾ ಡಾನ್ಸ್‌ ಮಾಡಬಹುದು’ ಅಂದೆ, ಅಲ್ಲಿದ್ದವರಲ್ಲೇ ಅಸಹನೆಯಿಂದ ನನ್ನ ಕಡೆ ನೋಡಿದರು. 

ಸಂಜೆಯಾಗುತ್ತಿರುವ ಹಾಗೆ ಬಲವಾದ ಗಾಳಿ ಬೀಸತೊಡಗಿತು. ಗಾಳಿಯ ಸಂಗೀತಕ್ಕೆ ಹಡಗು ಡಾನ್ಸ್‌ ಮಾಡಲಾರಂಭಿಸಿತು. ದೊಡ್ಡ ದೊಡ್ಡ ಅಲೆಗಳು ಬಂದು ಹಡಗಿಗೆ ಅಪ್ಪಳಿಸುತ್ತಿದ್ದವು. ಹಡಗು ಅತ್ತ ಇತ್ತ ಮೇಲೆ ಕೆಳಗೆ ಚಿಮ್ಮುತ್ತಿತ್ತು. ಡೆಕ್‌ನಲ್ಲಿ ಕಾಲು ಜಾರುವಂತಿದ್ದರೂ ನಾನು ಅಲ್ಲೇ ಅತ್ತಿಂದಿತ್ತ ಇತ್ತಿಂದತ್ತ ಓಡುತ್ತಿದ್ದೆ. ನಾನು ಮೊದಲು ಮಾತನಾಡಿಸಿದ ಅಂಕಲ್‌ ಅಲ್ಲೇ ರೈಲಿಂಗ್‌ಗೆ ಒರಗಿ ಕೂತಿದ್ದು ಕಂಡಿತು. ನಾನು ಅವರತ್ತ ಓಡಿದೆ, ಅವರೂ ನನ್ನ ಹಾಗೆ ಚಂಡಮಾರುತವನ್ನ ಎನ್‌ಜಾಯ್‌ ಮಾಡ್ತಿದ್ದಾರೆ ಅಂದುಕೊಂಡೇ ಮಾತನಾಡಿಸಿದೆ, “ಹಾಯ್‌ ಅಂಕಲ್‌, ಗುಡ್‌ ಮಾರ್ನಿಂಗ್‌, ಏನು ಮಜವಾಗಿದೆ ಅಲ್ವಾ?’ ಅಂದೆ. 

ಆದರೆ ಅವರ ಹತ್ತಿರ ಹೋದಾಗ ಅವರಿಗೆ ಮಾತನಾಡಲಾಗುತ್ತಿರಲಿಲ್ಲ, ಕುಸಿದು ಕುಳಿತಂತಿತ್ತು, ಉಸಿರಾಡಲೂ ಕಷ್ಟಪಡುತ್ತಿದ್ದರು. ಹಡಗಿನಿಂದ ಕೆಳಗೆ ಜಾರದಂತೆ ರೈಲಿಂಗ್‌ನ್ನು ಕಷ್ಟಪಟ್ಟು ಹಿಡಿದಿದ್ದರು. ಆ ಹಿಡಿತ ಬಿಗಿಯಿಲ್ಲದೇ ಹಡಗಿನ ಕುಲುಕಾಟಕ್ಕೆ ಆಗಲೋ ಈಗಲೋ ಕೆಳಗೆ ಬೀಳುವಂತಿದ್ದರು. 

ಅವರನ್ನು ಆ ಸ್ಥಿತಿಯಲ್ಲಿ ಕಂಡಾಗ ದಿಗಿಲಾಯಿತು. ” ಅಂಕಲ್‌ ಸಾರಿ, ಗೊತ್ತಾಗ್ಲಿಲ್ಲ ನಂಗೆ. ಹುಷಾರಿಲ್ವಾ? ಡಾಕ್ಟರ್‌ನ್ನು ಕರೊRಂಡು ಬರಲಾ?’ ಅಂದೆ. ಅವರು ಉತ್ತರಿಸಲಿಲ್ಲ. ಕೈಯಲ್ಲೇ ಸನ್ನೆ ಮಾಡಿದರು. 
“ಹೆಲ್ಪ್ ಹೆಲ್ಪ್ ..’ ಅಂತ ಜೋರಾಗಿ ಕೂಗುತ್ತಾ ಅಲ್ಲಿಂದ ಓಡಿದೆ ..

ಮುಂದಿನವಾರ: ಅಜಿತ್‌ಗೆ ಸಿಕ್ಕ ಸ್ಪೆಷಲ್‌ ಗಿಫ್ಟ್…

– ಅನು: ಪ್ರಿಯಾ ಕೆರ್ವಾಶೆ

Advertisement

Udayavani is now on Telegram. Click here to join our channel and stay updated with the latest news.

Next