Advertisement

ಲಾರಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

11:58 AM Jun 19, 2018 | Team Udayavani |

ಬೆಂಗಳೂರು: ಡೀಸೆಲ್‌ ದರ ಏರಿಕೆ ಹಾಗೂ ಥರ್ಡ್‌ಪಾರ್ಟಿ ಪ್ರೀಮಿಯಂ ದರ ಹೆಚ್ಚಳ ಖಂಡಿಸಿ ಸೋಮವಾರದಿಂದ ದೇಶಾದ್ಯಂತ ಆರಂಭಗೊಂಡ ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮೊದಲ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. 

Advertisement

ಮುಷ್ಕರದ ಬಗ್ಗೆ ಸಂಘಟನೆಗಳ ನಡುವೆಯೇ ಭಿನ್ನಾಭಿಪ್ರಾಯ ಇರುವುದರಿಂದ ಲಾರಿ ಮಾಲಿಕರು ಮತ್ತು ಏಜೆಂಟರ ನಡುವಿನ ಗೊಂದಲಕ್ಕೆ ಕಾರಣವಾಯಿತು. ಪರಿಣಾಮ ನಿರೀಕ್ಷೆಯಂತೆ ಮುಷ್ಕರ ಯಾವುದೇ ಪರಿಣಾಮ ಬೀರಲಿಲ್ಲ. ಸರಕು-ಸಾಗಣೆ ಎಂದಿನಂತೆ ಇತ್ತು. ಅಗತ್ಯವಸ್ತುಗಳಾದ ಹಾಲು, ಹಣ್ಣು-ತರಕಾರಿ, ಪೆಟ್ರೋಲ್‌-ಡೀಸೆಲ್‌ಗೆ ಯಾವುದೇ ಅಡತಡೆ ಆಗಲಿಲ್ಲ. ಅಪರೂಪಕ್ಕೆ ಅಲ್ಲಲ್ಲಿ ಲಾರಿಗಳು ನಿಲುಗಡೆ ಆಗಿದ್ದು ಕಂಡುಬಂತು. 

ಶೇ. 80ರಷ್ಟು ಸಂಚಾರ ಸ್ಥಗಿತ; ಒಕ್ಕೂಟ: ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಅದರಂತೆ ರಾಜ್ಯದಲ್ಲೂ ಮುಷ್ಕರ ಆರಂಭವಾಗಿದ್ದು, ಶೇ. 80ರಷ್ಟು ಲಾರಿಗಳ ಸಂಚಾರ ಸ್ಥಗಿತಗೊಂಡಿದೆ. ಶೇ. 10ರಿಂದ 20ರಷ್ಟು ಮಾತ್ರ ಕಾರ್ಯಾಚರಣೆ ಮಾಡಿವೆ.

ಕಳೆದ ಮೂರು ದಿನಗಳಿಂದ ಸಾಲು ರಜೆ ಇದ್ದುದರಿಂದ ಹೊರಗಡೆ ಹೋಗಿದ್ದ ಲಾರಿಗಳು ಒಂದೊಂದಾಗಿ ಬಂದಿಳಿದಿವೆ. ಮಂಗಳವಾರದಿಂದ ಸಂಪೂರ್ಣ ಸ್ತಬ್ದಗೊಳ್ಳಲಿದ್ದು, ಇದರ ಬಿಸಿ ಜೋರಾಗಿ ತಟ್ಟಲಿದೆ ಎಂದು ಅಖೀಲ ಭಾರತ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘಗಳ ಮಹಾಒಕ್ಕೂಟದ ಕಾರ್ಯದರ್ಶಿ ಗೋಪಾಲಸ್ವಾಮಿ ಸ್ಪಷ್ಟಪಡಿಸಿದರು. 

ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ ಮುಷ್ಕರ ನಡೆಯುತ್ತಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರದಿಂದ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ. ಸಾಮಾನ್ಯವಾಗಿ ಅನಿರ್ದಿಷ್ಟಾವಧಿ ಮುಷ್ಕರಗಳ ಬಿಸಿ ಮೊದಲ ದಿನ ತಟ್ಟುವುದಿಲ್ಲ. ಎರಡು-ಮೂರನೇ ದಿನದಿಂದ ಪರಿಣಾಮ ಗೊತ್ತಾಗುತ್ತದೆ ಎಂದೂ ಅವರು ಹೇಳಿದರು. 

Advertisement

ಲಕ್ಷಾಂತರ ಸರಕು-ಸಾಗಾಣೆ ವಾಹಗಳಿದ್ದು, ಮಾಲಿಕರ ಸಂಘಟನೆಗಳೂ ಹಲವಾರು ಇವೆ. ಈ ಸಂಘಟನೆಗಳ ನಡುವೆ ಒಡಕು ಇರುವುದರಿಂದ ಮುಷ್ಕರಕ್ಕೆ ಹಿನ್ನಡೆಯಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಅಖೀಲ ಭಾರತ ಟ್ರಕ್‌ ಮಾಲೀಕರ ಒಕ್ಕೂಟವು ಇತರೆ ಸಂಘಟನೆಗಳನ್ನು ಸಂಪರ್ಕಿಸಿ, 

ಚರ್ಚಿಸದೆ ಏಕಾಏಕಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಇತರೆ ಸಂಘಟನೆಗಳು ಮುಷ್ಕರದಿಂದ ಹಿಂದೆ ಉಳಿದಿವೆ. ರಾಜ್ಯದಲ್ಲೂ ಸರಕು-ಸಾಗಣೆ ವಾಹನಗಳ ಮಾಲೀಕರ ಹಲವು ಸಂಘಟನೆಗಳಿದ್ದು, ಭಿನ್ನಾಭಿಪ್ರಾಯ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ಬೆಂಬಲಿಸಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next