Advertisement

ನಾನು ಓದಿದ ಪುಸ್ತಕ : “ಆನಂದ’ರ ಕಥಾಪ್ರಪಂಚ

05:35 AM May 12, 2020 | mahesh |

ಆನಂದ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು ಅಜ್ಜಂಪುರ ಶ್ರೀನಿವಾಸ. ಅವರು ಅನೇಕರಿಗೆ ಪರಿಚಿತರಿರುವುದು ಅವರ ಪ್ರಸಿದ್ಧ ಕಥೆ “ನಾನು ಕೊಂದ ಹುಡುಗಿ’ಯಿಂದ. ಇವರ ಹಲವಾರು ಸಣ್ಣ ಕಥೆಗಳನ್ನು ಒಗ್ಗೂಡಿಸಿ, ಡಾ.ವಿಜಯಾ ಹರನ್‌ ಅವರು “ಆನಂದ ಅವರ ಸಮಗ್ರ ಕತೆಗಳು’ ಎಂಬ ಪುಸ್ತಕ ಹೊರತಂದಿದ್ದಾರೆ. ಈ ಸಂಕಲನದಲ್ಲಿ, ಆನಂದರ ಸ್ವರಚನೆಯ 20 ಕತೆಗಳು ಮತ್ತು ಅನುವಾದಿಸಿರುವ 12 ಕಥೆಗಳಿವೆ. ಆನಂದರ ಕಥೆಗಳಲ್ಲಿನ ಜೀವಾಳ, ಸರಳ ಭಾಷೆ ಮತ್ತು ವರ್ಣನೆ. ಅವರ ಬಹುಪಾಲು ಕಥೆಗಳಲ್ಲಿ, ಮಧ್ಯಮವರ್ಗದ ಸಂಸಾರಗಳ ಹಲವು ಚಿತ್ರಗಳಿವೆ. ಹಾಸ್ಯ, ಪ್ರಕೃತಿ ವರ್ಣನೆ, ಮಕ್ಕಳ ಬಾಲಲೀಲೆಗಳ ವರ್ಣನೆ, ಮಹಿಳಾ ಪಾತ್ರಗಳ ವರ್ಣನೆಗಳು, ಕತೆಗಳ ಕಲಾತ್ಮಕತೆಯನ್ನು ಹೆಚ್ಚಿಸಿವೆ.

Advertisement

ಭಿಕ್ಷಾನ್ನದ ಕಥಾವಸ್ತು ಹೊಂದಿರುವ “ಭವತಿ ಭಿಕ್ಷಾಂ ದೇಹಿ’ ಕಥೆ ಓದುತ್ತಿದ್ದಂತೆ ಕಣ್ಣಂಚು ತೇವವಾಗುತ್ತದೆ. ಮಾಟಗಾತಿ, ರಾಧೆಯ ಕ್ಷಮೆ, ಕೊನೇ ಎಂಟಾಣೆ-ಕತೆಗಳು, ಇಂಗ್ಲಿಷ್‌ಗೆ ಅನುವಾದಗೊಂಡಿವೆ. ಕನ್ನಡದ ಮಹತ್ವದ ಕಥೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ “ನಾನು ಕೊಂದ ಹುಡುಗಿ’ – ಹಿಂದಿಗೆ ಅನುವಾದಗೊಂಡಿದೆ. ಸಾಹಿತ್ಯ ರಚನೆಯ ಹೊರತಾಗಿ, ಆನಂದರು ಹಲವಾರು ಕ್ಷೇತ್ರಗಳಲ್ಲಿ ಪರಿಣತರಾಗಿದ್ದರು. ಉತ್ತಮ ಕ್ರಿಕೆಟಿಗನೂ ಆಗಿದ್ದ ಅವರನ್ನು, “ಸಿಕ್ಸರ್‌ ಸೀತಾರಾಮ್‌’ ಎಂದೂ ಕರೆಯಲಾಗುತ್ತಿತ್ತು. ಇವರ ಬಗೆಗಿನ ಇನ್ನೊಂದು ಅಪರೂಪದ ಸಂಗತಿ ಎಂದರೆ, ಇವರೊಬ್ಬ ಅತ್ಯುತ್ತಮ ಕುಂಚ  ಕಲಾವಿದರೂ ಆಗಿದ್ದರು. ರಾಷ್ಟ್ರಕವಿ ಕುವೆಂಪು ಅವರ “ಕಾನೂರು ಹೆಗ್ಗಡತಿ’ ಕಾದಂಬರಿಯ ಮುಖಪುಟಕ್ಕೆ, ಆನಂದರು ಬರೆದುಕೊಟ್ಟ ಕಾಜಾಣದ ಚಿತ್ರ, ಕುವೆಂಪು ಅವರಿಗೆ ತುಂಬಾ ಮೆಚ್ಚುಗೆಯಾಗಿ, ಮುಂದೆ ಅವರು ಅದನ್ನು ತಮ್ಮ “ಉದಯರವಿ’ ಪ್ರಕಾಶನದ ಚಿಹ್ನೆಯಾಗಿ ಬಳಸಿಕೊಂಡರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಕೆ.ಎಚ್‌. ಸ್ವಾತಿ

Advertisement

Udayavani is now on Telegram. Click here to join our channel and stay updated with the latest news.

Next