Advertisement

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

01:12 PM Apr 25, 2024 | Team Udayavani |

ಭಾರತೀಯ ಪರಂಪರೆಯಲ್ಲಿ ವೇದ ಉಪನಿಷತ್ತುಗಳ ಕಾಲದಿಂದಲೂ ಬರಹಕ್ಕೆ, ಪುಸ್ತಕಕ್ಕೆ ಅದರದೇ ಆದಂತಹ ಮಹತ್ವವಾದ ಸ್ಥಾನವಿದೆ. ಪುಸ್ತಕಗಳನ್ನು ದೇವರೆಂದೇ ಪೂಜಿಸುವ ಕಾಲವದು. ಗುರುಕುಲದಲ್ಲಿ ಋಷಿಮುನಿಗಳು ಬೋಧಿಸುವ ಪಾಠ ಪ್ರವಚನಗಳು ಅಂದಿನ ಮಕ್ಕಳಿಗೆ ಜೀವನದ ಮಾರ್ಗವಾಗಿತ್ತು.

Advertisement

ಆದರೆ ಕಾಲ ಬದಲಾದಂತೆ ಆಧುನಿಕತೆ ಹೆಚ್ಚಿದಂತೆ ಎಲ್ಲದರಲ್ಲೂ ಬದಲಾವಣೆ ಆಗುತ್ತಲೇ ಇದೆ. ಅಂದು ಪುಸ್ತಕವನ್ನು ಓದಲು ಹಂಬಲಿಸುವವರ ಸಂಖ್ಯೆ ಹೆಚ್ಚಿತ್ತು. ಇಂದು ಸಾವಿರಾರು ಪುಸ್ತಕಗಳ ದೊಡ್ಡ ಗ್ರಂಥಾಲಯವಿದ್ದರೂ ಅದರಲ್ಲಿ ಓದುಗರ ಸಂಖ್ಯೆ ಅತಿ ವಿರವಾಗಿದೆ.

ಅಷ್ಟೇ ಅಲ್ಲ. ನಾವೆಲ್ಲ ಚಿಕ್ಕವರಿದ್ದಾಗ ಪರೀಕ್ಷೆಗೆ ಪುಸ್ತಕವನ್ನು ನೋಡಿ ಅದರಲ್ಲಿರುವ ವಿಷಯವನ್ನು ಹೆಚ್ಚಾಗಿ ಓದಿ ತಿಳಿದುಕೊಳ್ಳುತ್ತಿದ್ದೇವು. ಮೊಬೈಲ್‌ ಇಲ್ಲದ ಆ ಕಾಲದಲ್ಲಿ ಪುಸ್ತಕವೊಂದೇ ಜ್ಞಾನ ನೀಡುವ ಮೂಲವಾಗಿತ್ತು. ಆದರೆ ಈಗ ಹಾಗಿಲ್ಲ.

ಪರೀಕ್ಷೆಗೆ ಓದಲು, ಪಾಸಾಗಲು ಪುಸ್ತಕವೇ ಬೇಕೆಂದಿಲ್ಲ. ಮೊಬೈಲಲ್ಲಿ ತೆಗೆಯುವ ಸ್ಕ್ರೀನ್‌ ಶಾರ್ಟ್‌ ಗಳೇ ಪುಸ್ತಕಗಳಾಗಿ ಮಾರ್ಪಟ್ಟಿದೆ. ಅದರಲ್ಲಿ ಸಿಗುವ ವಿಷಯಗಳು ಪುಸ್ತಕದಷ್ಟೂ ಆಳವಾದ ಮಾಹಿತಿಯನ್ನು ಕೊಡದಿದ್ದರೂ ಸಹ ಇಂದಿನ ಮಕ್ಕಳಿಗೆ ಸ್ಕ್ರೀನ್‌ ಶಾರ್ಟ್‌ಗಳೇ ಅತಿ ಮುಖ್ಯವಾಗಿದೆ. ಅದೇ ಅವರ ಓದಿನ ಮೂಲವಾಗಿದೆ.

ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವಾಗ ಆಗುವ ಸಂತೋಷ, ಒಂದೊಂದು ಪುಟಗಳನ್ನು ತೆಗೆಯುವಾಗ ಆಗುವ ಅನುಭವಕ್ಕೂ ಒಂದೊಂದು ಸ್ಕ್ರೀನ್‌ ಶಾರ್ಟ್‌ ಗಳನ್ನು ಸರಿಸುವಾಗ ಆಗುವ ಅನುಭವಕ್ಕೂ ಎಷ್ಟೊಂದು ವ್ಯತ್ಯಾಸವಿದೆಯಲ್ಲ? ಮೊಬೈಲ್‌ ನಲ್ಲಿಯೂ ಸಹ ಓದಿಗೇನು ಕೊರತೆಯೆನಿಲ್ಲ ಆದರೂ ಪುಸ್ತಕದಲ್ಲಿ ಓದುವಷ್ಟು ನೆಮ್ಮದಿ ಈ ಮೊಬೈಲ್‌ ಓದಿನಲ್ಲಿ ಸಿಗಲು ಸಾಧ್ಯವಿಲ್ಲ.

Advertisement

ಶಾಲಾ ಹಂತದಲ್ಲಿ ಮಕ್ಕಳು ಪಟ್ಟಿ ಪುಸ್ತಕಗಳಲ್ಲಿ ಹೆಚ್ಚಾಗಿ ಬರೆಯುತ್ತಿದ್ದರು. ಅನಂತರದ ಹಂತದಲ್ಲಿ ಅವರು ಮೊಬೈಲ್‌ಗ‌ಳಲ್ಲಿಯೇ ಹೆಚ್ಚಾಗಿ ತಮ್ಮ ಓದಿನ ವಿಷಯಕ್ಕಾಗಿ ಹುಡುಕಾಟ ನಡೆಸುತ್ತಾರೆ. ಕೈಯಲ್ಲಿರುವ ಮೊಬೈಲೇ ತಮ್ಮ ಪರೀಕ್ಷೆಗೆ ಬೇಕಾಗುವಂತಹ ಅಗತ್ಯ ವಿಷಯವನ್ನು ತಿಳಿಸುವಾಗ ಮತ್ತೆ ಹೋಗಿ ಪುಸ್ತಕವನ್ನು ಅರಿಸುತ್ತಾ ಅದರಲ್ಲಿ ವಿಷಯಗಳನ್ನು ಹುಡುಕಿ ಜ್ಞಾನಾರ್ಜನೆಯನ್ನು ಮಾಡಿಕೊಳ್ಳುವುದು ಕೆಲವು ವಿದ್ಯಾರ್ಥಿಗಳಿಗೆ ಕಷ್ಟದ ಕೆಲಸವೇ ಸರಿ.

ಆದರೆ ಇಂಥವರ ಮಧ್ಯದಲ್ಲಿಯೂ ಪುಸ್ತಕವನ್ನು ಓದುವುದು ತಮ್ಮ ನಿರಂತರ ಹವ್ಯಾಸವಾಗಿ ಮಾಡಿಕೊಂಡಿರುವಂತಹ ಅದೆಷ್ಟೊ ವಿದ್ಯಾರ್ಥಿಗಳು ಸಹ ಇದ್ದಾರೆ. ಎಷ್ಟೇಯಾದರೂ ಮನೆಯಲ್ಲಿ ನೀಡುವ ಸಂಸ್ಕೃತಿಯಿಂದಲೇ ನಮ್ಮ ಜೀವನ ರೂಪುಗೊಳ್ಳುತ್ತಾ ಹೋಗುತ್ತದೆ.

ಎಳೆಯವರಿದ್ದಾಗಲೇ ಅವರಿಗೆ ಕಥೆ, ಕವನ ಸಾಹಿತ್ಯ, ಬರವಣಿಗೆ ಎಲ್ಲದರಲ್ಲಿಯೂ ಆಸಕ್ತಿ ಬರುವಂತೆ ಮಾಡುವುದು ಪೋಷಕರ ಕೈಯಲ್ಲಿದೆ. ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ತಿಕ್ಕಿ ತೀಡಿ ಒಳ್ಳೆಯ ರೂಪವನ್ನು ಕೊಡುವ ಶಕ್ತಿ ಇರುವುದು ತಂದೆ, ತಾಯಿಗೆ ಹಾಗೂ ಶಿಕ್ಷಕರಿಗೆ.

ಆದರೆ ಅವರ ಮಾತಿಗೂ ಬೆಲೆಕೊಡದಂತೆ ನಡೆದುಕೊಂಡು ಮನಬಂದಂತೆ ಇರುವ ಮಕ್ಕಳು ಎಂದಿಗೂ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ಪಡೆದರು ಉಪಯೋಗಕ್ಕೆ ಬಾರದೆ ಹೋಗುವುದು ನಿಶ್ಚಿತ.

ನಾವು ಕಲಿಯುವ ಪ್ರತಿಯೊಂದು ಪಾಠ ನಮ್ಮ ಮುಂದಿನ ಜೀವನಕ್ಕೆ ಮಾರ್ಗವಾಗಿರಬೇಕು. ಹೀಗೆ ಉತ್ತಮ ದಾರಿಗೆ ಕೊಂಡೊಯ್ಯುವ ಪ್ರಯತ್ನವನ್ನು ಪುಸ್ತಕ ಮಾಡುತ್ತದೆ. ಅವಕಾಶದ ನೂರಾರು ದಾರಿಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಹೀಗಾಗಿ ಯಾವಾಗಲು ಸಾಧ್ಯವಾದಷ್ಟು ಸರಿಯಾದ, ಆಳವಾದ ಜ್ಞಾನವನ್ನು ಪಡೆಯಲು ಪುಸ್ತಕವನ್ನು ಓದುವ, ಪುಟ ತೆಗೆಯುವ ಮೂಲಕ ನಮ್ಮ ಜ್ಞಾನಾರ್ಜನೆಯನ್ನು ಮಾಡಿಕೊಳ್ಳೋಣ.

-ಭಾವನಾ ಪ್ರಭಾಕರ್‌

ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next