ಬೆಳಗಾವಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಮೃತ ದೇಹ ಶನಿವಾರ ತುಂಡು ತುಂಡುಗಳಾಗಿ ಕತ್ತರಿಸಿದ ಸ್ಥಿತಿಯಲ್ಲಿ ಕೊಳವೆಬಾವಿಯಲ್ಲಿ ಪತ್ತೆಯಾಗಿದ್ದು ಭಕ್ತರು ಮತ್ತು ಜನತೆ ವಿಚಾರ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ದೇಹದ ಭಾಗಗಳನ್ನು ಹೊರತೆಗೆದಿದ್ದಾರೆ.
ಮುನಿಗಳ ಹತ್ಯೆಯ ಬಳಿಕ ಮೃತದೇಹವನ್ನು ತುಂಡು ಮಾಡಿ ಬಟ್ಟೆಯಲ್ಲಿ ಕಟ್ಟಿ ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಹೊಲದಲ್ಲಿರುವ 30 ಅಡಿ ಆಳದ ಕೊಳವೆಬಾವಿಗೆ ಹಾಕಲಾಗಿತ್ತು. ವಾಸನೆ ಬಾರದಂತೆ ಕೊಳವೆಬಾವಿಯನ್ನು ಮಣ್ಣು ಹಾಕಿ ಮುಚ್ಚಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುನಿಗಳ ಆಪ್ತ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಜೈನಮುನಿ ಜತೆ ಉತ್ತಮ ಸಂಬಂಧ ಹೊಂದಿದ್ದ ವ್ಯಕ್ತಿ 6 ಲಕ್ಷ ರೂ. ಪಡೆದುಕೊಂಡಿದ್ದ. ಅದನ್ನು ಮುನಿಗಳು ವಾಪಸ್ ಕೇಳಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಶ್ರಮದಲ್ಲಿಯೇ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹದ ತುಂಡುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಶನಿವಾರ ಬೆಳಗ್ಗೆ ಕೊಳವೆಬಾವಿ ಬಳಿ ಕಾರ್ಯಾಚರಣೆ ಆರಂಭಿಸಲಾಯಿತು. 500ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ರಾಯಬಾಗ- ಮುಗಳಖೋಡ ಮಾರ್ಗವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಜೆಸಿಬಿ, ಬೋರ್‌ವೆಲ್ ಮೆಷಿನ್ ಹಾಗೂ ಕೆಮರಾ ಸಹಾಯದಿಂದ ಮೃತದೇಹವನ್ನುಮೇಲೆತ್ತಲಾಯಿತು.
ಜು.6ರಂದು ಜೈನಮುನಿ ನಾಪತ್ತೆಯಾಗಿದ್ದು, ಜು.7ರಂದು ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದ ತನಿಖೆಗಿಳಿದ ಪೊಲೀಸರು . ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ. ಮೃತದೇಹ ನದಿಯಲ್ಲಿ ಎಸೆದಿರುವುದಾಗಿ, ಮತ್ತೂಮ್ಮೆ ಕೊಳವೆಬಾವಿಯಲ್ಲಿ ಎಸೆದಿದ್ದೇವೆ ಎಂದು ಗೊಂದಲದ ಹೇಳಿಕೆ ನೀಡಿದ್ದಾನೆ. ತೀವ್ರ ವಿಚಾರಣೆ ಬಳಿಕ ಕೊಳವೆ ಬಾವಿಯಲ್ಲಿ ಮೃತದೇಹ ಎಸೆದಿರುವುದು ಖಚಿತವಾಗಿದೆ.
ಹಿರೇಕೋಡಿ ನಂದಿ ಪರ್ವತದಲ್ಲಿ ಸುಮಾರು 15 ವರ್ಷಗಳಿಂದ ನೆಲೆಸಿದ್ದ ಜೈನಮುನಿಗಳನ್ನು ಹಣದ ವಿಚಾರಕ್ಕಾಗಿಯೇ ಹತ್ಯೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ತನಿಖೆ ಮುಗಿದ ಬಳಿಕವಷ್ಟೇ ಕೊಲೆಯ ನಿಖರ ಕಾರಣದ ಬಗ್ಗೆ ತಿಳಿದು ಬರಲಿದೆ ಎಂದು ಎಸ್‌ಪಿ ಡಾ| ಸಂಜೀವ ಪಾಟೀಲ್ ತಿಳಿಸಿದ್ದಾರೆ.