Advertisement

ಮೆರವಣಿಗೆಗೆ ಆನೆ ಬಳಸಲು ಅವಕಾಶ ಕೋರಿದ ಮಂಡಳಿ

11:48 AM Sep 15, 2017 | Team Udayavani |

ಬೆಂಗಳೂರು: ದಸರಾ ಹಬ್ಬದ ಉತ್ಸವದ ಮೆರವಣಿಗೆಯಲ್ಲಿ ಎರಡು ಆನೆಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಆನೇಕಲ್‌ನ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಆಡಳಿತ ಮಂಡಳಿ ಹೈಕೋರ್ಟ್‌ ಮೆಟ್ಟಿಲೇರಿದೆ.

Advertisement

ಈ ವರ್ಷದ ದಸರಾ ಹಬ್ಬದ ಆಚರಣೆಯಲ್ಲಿ ಸೆ.30ರಂದು ಆನೇಕಲ್‌ನಲ್ಲಿ ದೇವರ ಮೆರವಣಿಗೆ ಉತ್ಸವ ನಡೆಸಲಾಗುತ್ತಿದೆ. ಈ ದೇವರ ಉತ್ಸವದ ಮೆರವಣಿಗೆಯಲ್ಲಿ ಎರಡು ಆನೆಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಹೀಗಾಗಿ ಸೆ.27ರಂದು ಕೇರಳದಿಂದ ಪಳಗಿದ ಆನೆಗಳನ್ನು ಮಾವುತರ ಸಮೇತ ಕರೆತಂದು, ಅಕ್ಟೋಬರ್‌ 3ರಂದು ವಾಪಾಸ್‌ ಕಳುಹಿಸಿಕೊಡಲಾಗುತ್ತದೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಆನೆಗಳ ಬಳಕೆ ವೇಳೆ ಮುಂಜಾಗ್ರತಾ ಸುರಕ್ಷತಾ ಕ್ರಮಗಳನ್ನು ಹಾಗೂ ಆನೆಗಳ ಆರೋಗ್ಯದ ಆರೈಕೆಗೆ ಒತ್ತು ನೀಡಲಿದ್ದೇವೆ. ಹೀಗಾಗಿ ಆನೆಗಳ ಬಳಕೆಗೆ ಅವಕಾಶ ಕಲ್ಪಿಸುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. 

ಈ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌ ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಆನೆ ಸೇರಿದಂತೆ ಇನ್ನಿತರೆ ವನ್ಯ ಜೀವಿಗಳ ಬಳಕೆ ಸಂಬಂಧ ರೂಪಿಸಿರುವ ಮಾರ್ಗಸೂಚಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ. ಅರ್ಜಿದಾರರ ಮನವಿಯ ಬಗ್ಗೆ ಮುಂದಿನ ಒಂದು ವಾರದೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಸರ್ಕಾರದ ವಾದವೇನು? 
ಆನೆಗಳನ್ನು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಬಂಧವಿದೆ. ಆನೆಗಳನ್ನು ಬಳಸಲು ಹಲವು ಕ್ರಮಗಳಿವೆ. ಆನೆಗಳನ್ನು ಬಳಸುವ ಮುನ್ನ ಪೂರ್ವ ತರಬೇತಿ ನೀಡಬೇಕಾಗುತ್ತದೆ. ಒಮ್ಮೊಮ್ಮೆ ಆನೆಗಳು ಜನರ ಗುಂಪಿನಿಂದ ಬೆದರಿದಾಗ ನಿಯಂತ್ರಿಸುವುದು ಕಷ್ಟ. ಇದೇ ಮಾದರಿಯ ಮನವಿಯನ್ನು ಈ ಹಿಂದೆ ಹೈಕೋರ್ಟ್‌ ನಿರಾಕರಿಸಿದೆ ಎಂಬ ಇನ್ನಿತರೆ ಅಂಶಗಳುಳ್ಳ ಆಕ್ಷೇಪಣೆಯನ್ನು ನ್ಯಾಯಪೀಠಕ್ಕೆ  ಸರ್ಕಾರದ ಪರ ವಕೀಲರು ಸಲ್ಲಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next