Advertisement

“ಕಾಜಾಣ’ಕಟ್ಟಡಕ್ಕಾಗಿ ಮುಸುಕಿನ ಗುದ್ದಾಟ

06:28 AM Feb 20, 2019 | Team Udayavani |

ಬೆಂಗಳೂರು: ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಕಾಜಾಣ ಕಟ್ಟಡಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ನಾಟಕ ಶಾಲೆ (ದಕ್ಷಿಣ ಭಾರತ)ಬೆಂಗಳೂರು ಕೇಂದ್ರದ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

Advertisement

ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸೇರಿರುವ ಕಾಜಾಣ ಕಟ್ಟಡವನ್ನು ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಆಡಳಿತಾಧಿಕಾರಿಗಳು ಬಳಕೆ ಮಾಡಿಕೊಂಡಿದ್ದು, ಅದನ್ನು ಮರಳಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ್ದಾಗಿದೆ. 

ಪ್ರಾಧಿಕಾರ ಪ್ರಸ್ತುತ ಸಾಲಿನ ಹೊಸ ಯೋಜನೆ “ಬೇಸಿಗೆ ಶಾಲೆ’ಗೆ ಮಾರ್ಚ್‌ನಲ್ಲಿ ಚಾಲನೆ ನೀಡಲು ತಯಾರಿ ನಡೆಸಿದ್ದು, ಜಾಗದ ಕೊರತೆ ಎದುರಾಗಿದೆ. ಬೇಸಿಗೆ ಶಾಲೆಯನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಭಾಷಾಂತರದ ಬಗ್ಗೆ ತಿಳಿಸಿಕೊಡುವ ಯೋಜನೆ ಇದಾಗಿದ್ದು ಶಿಬಿರಾರ್ಥಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸುವ ಆಲೋಚನೆ ಹೊಂದಿದೆ.

ವಸತಿ ವ್ಯವಸ್ಥೆಯನ್ನು ಬೇರೆ ಕಡೆಗೆ ಕಲ್ಪಿಸುವುದರಿಂದ ಸಾಕಷ್ಟು ಹಣ ವ್ಯಯವಾಗಲಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ರಾಷ್ಟ್ರೀಯ ನಾಟಕ ಶಾಲೆ ಬಳಕೆ ಮಾಡಿಕೊಂಡಿರುವ ಕಾಜಾಣ ಕಟ್ಟಡವನ್ನು ಮರಳಿ ಕೊಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಾಧಿಕಾರ ಈಗಾಗಲೇ ಪತ್ರ ಮುಖೇನ ಮನವಿ ಮಾಡಿದೆ.

ಕಾಜಾಣ ಯಾರಿಗೆ ಸೇರಬೇಕು?: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಹಿಂದೆ ಪ್ರಾಧಿಕಾರಕ್ಕಾಗಿಯೇ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ “ಕಾಜಾಣ’ ಮತ್ತು “ವಿಶ್ವಚೇತನ’ಎಂಬ ಎರಡು ಕಟ್ಟಡಗಳನ್ನು ನಿರ್ಮಿಸಿತ್ತು. ವಿಶ್ವಚೇತನದಲ್ಲಿ ಪ್ರಾಧಿಕಾರದ ಅಧ್ಯಕ್ಷರ ಕಚೇರಿ ಮತ್ತು ರಿಜಿಸ್ಟ್ರಾರ್‌ ಕಡತ ಹಾಗೂ ದಾಖಲೆ ಇಡಲು ಅವಕಾಶ ಕಲ್ಪಿಸಲಾಗಿದೆ.

Advertisement

ಹಾಗೆಯೇ ಕಾಜಾಣ ಕಟ್ಟಡದಲ್ಲಿ ಭೋಜನ ಶಾಲೆ ಮತ್ತು ತರಬೇತಿ ಮತ್ತು ಶಿಬಿರಾರ್ಥಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ರಾಷ್ಟ್ರೀಯ ನಾಟಕ ಶಾಲೆಯ ದಕ್ಷಿಣ ಭಾರತದ ಕೇಂದ್ರ ಬೆಂಗಳೂರಿಗೆ ಘೋಷಣೆಯಾದ ವೇಳೆ ರಾಜ್ಯ ಸರ್ಕಾರ ಕಲಾಗ್ರಾಮದಲ್ಲಿಯೇ ಎನ್‌ಎಸ್‌ಡಿಗೆ ಎರಡೂವರೆ ಎಕರೆ ಜಮೀನು ಜತೆಗೆ ತಾತ್ಕಾಲಿಕ ಬಳಕೆಗಾಗಿ ಕಾಜಾಣ ಕಟ್ಟಡ ನೀಡಿತ್ತು.

ಒಂಟೆ, ಅರಸನ ಕಥೆಯಾಯ್ತು: ಪ್ರಾಧಿಕಾರದ ಪರಿಸ್ಥಿತಿ ಈಗ ಒಂಟೆ ಮತ್ತು ಅರಸನ ಕಥೆಯಂತಾಗಿದೆ. ಒಂಟೆಯ ಆಸರೆಗಾಗಿ ಅರಸ ಜಾಗ ನೀಡಿದರೆ ಮುಂದೆ ಆ ಜಾಗವನ್ನು ಒಂಟೆ ನನ್ನದು ಎಂದು ಹೇಳುತ್ತಿತ್ತು. ನಮ್ಮ ಪರಿಸ್ಥಿತಿ ಅದೇ ಆಗಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ದೂರಿದ್ದಾರೆ. ನಾಟಕ ಶಾಲೆ ಈಗಾಗಲೇ ಕಲಾಗ್ರಾಮದ ಆವರಣದಲ್ಲಿ ತನ್ನದೇ ಆದ ಕಟ್ಟಡ ನಿರ್ಮಾಣ ಮಾಡಿದ್ದು ಅದನ್ನು ಬಳಕೆ ಮಾಡಿಕೊಂಡು ನಮ್ಮ ಕಟ್ಟಡವನ್ನು ನಮಗೆ ಬಿಟ್ಟುಕೊಡಲಿ ಎನ್ನುತ್ತಾರೆ.

ಯಾರನ್ನೂ ದೂರಲಾರೆ: ನಾನು ಈ ವಿಚಾರದಲ್ಲಿ  ಯಾರನ್ನೂ ದೂಷಿಸುವುದಿಲ್ಲ. ಕಲಾಗ್ರಾಮದಲ್ಲಿ ಹಲವು ಕಟ್ಟಡಗಳು ಬಳಕೆಯಾಗದೇ ಹಾಗೆಯೇ ಇವೆ. ಅಂತಹ ಕಟ್ಟಡಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಬಳಕೆ ಮಾಡಿಕೊಳ್ಳಲು ನೀಡಿ, ನಮ್ಮ ಕಟ್ಟಡವನ್ನು ನಮಗೆ ಮರಳಿಸಲಿ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಮರುಳಸಿದ್ದಪ್ಪ ಒತ್ತಾಯಿಸಿದ್ದಾರೆ.

ಕಾಜಾಣ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸೇರಿದ್ದಾಗಿದೆ. ಎನ್‌ಎಸ್‌ಡಿ ಕೂಡ ಸ್ವಂತ ಕಟ್ಟಡ ನಿರ್ಮಾಣ ಮಾಡಿದ್ದು, ಮಾರ್ಚ್‌ನಲ್ಲಿ ಕಾಜಾಣ ಕಟ್ಟಡವನ್ನು ಪ್ರಾಧಿಕಾರಕ್ಕೆ ಮರಳಿ ನೀಡಲಾಗುವುದು.
-ಬಸವಲಿಂಗಯ್ಯ, ನಿರ್ದೇಶಕ ರಾಷ್ಟ್ರೀಯ ನಾಟಕ ಶಾಲೆ

ಘಟನೆ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಆದರೆ ಸದ್ಯದಲ್ಲೇ ಕಲಾಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಾಗುವುದು.
-ಕೆ.ಎಂ.ಜಾನಕಿ, ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

* ದೇವೇಶ ಸೂರಗುಪ್ಪ   

Advertisement

Udayavani is now on Telegram. Click here to join our channel and stay updated with the latest news.

Next