Advertisement

Mangaluru: ಪಾರಂಪರಿಕ ಕಟ್ಟಡ ಫಲಕಗಳಿಗೆ ಒದಗಲಿ ಶುಭಗಳಿಗೆ!

04:34 PM Oct 16, 2024 | Team Udayavani |

ಮಹಾನಗರ: ನಗರದ 40ರಷ್ಟು ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ, ಪ್ರವಾಸಿಗರು, ಸ್ಥಳೀಯರೆಲ್ಲರಿಗೂ ಅನುಕೂಲವಾಗುವಂತೆ ಹಾಕಲಾಗಿದ್ದ ಮಾಹಿತಿ ಫಲಕಗಳು ಈಗ ಮಸುಕಾಗಿವೆ, ಹಲವು ಫಲಕಗಳು ತುಂಡಾಗಿ ಧರಾಶಾಯಿಯಾಗಿವೆ.

Advertisement

2015ರಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನ ಪ್ರದೇಶದ ವ್ಯಾಪ್ತಿಯಲ್ಲಿರುವ 100 ವರ್ಷಕ್ಕೂ ಹಿಂದಿನ ಹಳೆಯ ಹಾಗೂ ಸಾಂಸ್ಕೃತಿಕ, ಸಾಮಾಜಿಕ, ಐತಿಹಾಸಿಕ ಮಹತ್ವ ಹೊಂದಿರುವ ಕಟ್ಟಡಗಳನ್ನು ಗುರುತಿಸುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಅಂತಹ ಪ್ರಮುಖ ಸ್ಥಳಗಳಲ್ಲಿ ಮಾಹಿತಿ ಫಲಕಗಳನ್ನು ಅನಾವರಣಗೊಳಿಸಲಾಗಿತ್ತು.

ವಿ.ವಿ. ಕಾಲೇಜ್‌ ಬಳಿಯ ಫಲಕ ಹೀಗಿತ್ತು

ವಿ.ವಿ. ಕಾಲೇಜ್‌ ಫಲಕ ಈಗ ಹೀಗಿದೆ

ಕಟ್ಟಡದ ಹೆಸರು, ಅದರ ಹಿನ್ನೆಲೆ, ಐತಿಹ್ಯ, ಮಹತ್ವ, ಅದಕ್ಕೆ ಸಂಬಂಧಿಸಿದವರ ವಿವರಗಳೆಲ್ಲವನ್ನೂ ಈ ಪುಟ್ಟ ಕಾಂಕ್ರೀಟ್‌ ಫಲಕದಲ್ಲಿ ಮುದ್ರಿಸಲಾಗಿತ್ತು. ಆದರೆ 10 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಅವುಗಳೆಲ್ಲವೂ ಮಸುಕಾಗಿ, ಯಾವುದೇ ವಿವರಗಳೂ ಓದುವುದಕ್ಕೆ ಅಸಾಧ್ಯ ಎಂಬಂತಹ ಸ್ಥಿತಿ ತಲಪಿವೆ.

Advertisement

ಬಾಸೆಲ್‌ ಮಿಷನ್‌ ಶಾಲೆ

ಮಂಗಳೂರು ವಿಶ್ವವಿದ್ಯಾನಿಯ ಕಾಲೇಜು, ಹಳೆ ಜಿಲ್ಲಾಧಿಕಾರಿ ಕಚೇರಿ, ವೆನ್ಲಾಕ್‌ ಆಸ್ಪತ್ರೆ, ಲೇಡಿಗೋಷನ್‌ ಆಸ್ಪತ್ರೆ, ಸುಲ್ತಾನ್‌ ಬತ್ತೇರಿ, ಜಿಲ್ಲಾ ಕಲೆಕ್ಟರ್‌ ನಿವಾಸ, ಸೀಮಂತಿ ಬಾಯಿ ಸ್ಮಾರಕ ವಸ್ತು ಸಂಗ್ರಹಾಲಯ, ಬಿಇಎಂ ಶಾಲೆ, ಸುಲ್ತಾನ್‌ಬತ್ತೇರಿ, ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನ, ಈದ್ಗಾ ಮಸೀದಿ, ಸಂತ ಅಲೋಶಿಯಸ್‌ ಚಾಪೆಲ್‌, ರೊಸಾರಿಯೊ ಚರ್ಚ್‌ ಮುಂತಾದ ಇತಿಹಾಸ ಪ್ರಸಿದ್ಧ ಹಲವು ಕಟ್ಟಡಗಳ ಮುಂಭಾಗ ಅಳವಡಿಸಲಾಗಿತ್ತು.

ಸೈಂಟ್‌ ಪಾಲ್‌ ಚರ್ಚ್‌

40 ಪಾರಂಪರಿಕ ಕಟ್ಟಡ
1865ರಲ್ಲಿ ಪ್ರಾರಂಭ ಗೊಂಡ ಅತಿ ಹಳೆಯ ಕಾಲೇಜುಗಳಲ್ಲೊಂದಾದ ಮಂಗಳೂರು ವಿ.ವಿ. ಕಾಲೇಜು ಪಾರಂಪರಿಕ ಕಟ್ಟಡ. ಅದರ ಮುಂಭಾಗವೇ ಆವರಣಗೋಡೆಗೆ ತಾಗಿದಂತೆ ಹೋಗುವವರಿಗೆ, ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಫಲಕವನ್ನು ಅನಾವರಣಗೊಳಿಸುವ ಮೂಲಕ 2015ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಈ ಪಾರಂಪರಿಕ ಕಟ್ಟಡಗಳಿಗೆ ಫಲಕ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಸುಮಾರು 40 ಪಾರಂಪರಿಕ ಕಟ್ಟಡ/ಸ್ಥಳ/ಸ್ಮಾರಕಗಳನ್ನು ಗುರುತಿಸಲಾಗಿತ್ತು.

ಹಿಂದೆ ಗಣಪತಿ ಹೈಸ್ಕೂಲ್‌ನ ಫಲಕ ಹೀಗಿತ್ತು

ಗಣಪತಿ ಹೈಸ್ಕೂಲ್‌ ಫಲಕ ಈಗ ಹೀಗಿದೆ

ನಶಿಸಿರುವ ಫಲಕ
ಸದ್ಯ 9 ವರ್ಷಗಳೇ ಆಗಿರುವುದರಿಂದ ಈ ಫಲಕಗಳೆಲ್ಲವೂ ಪ್ರಯೋಜನರಹಿತವಾಗಿ ನಿಂತುಕೊಂಡಿವೆ. ಮಂಗಳೂರು ವಿ.ವಿ. ಕಾಲೇಜು, ಹಳೆ ಜಿಲ್ಲಾಧಿಕಾರಿ ಕಚೇರಿ, ರಥಬೀದಿಯ ಬಾಸೆಲ್‌ ಮಿಶನ್‌ ಶಾಲೆ, ಕದ್ರಿ ದೇವಸ್ಥಾನ ಸಹಿತ ಹಲವೆಡೆಗಳಲ್ಲಿ ಫಲಕದಲ್ಲಿ ಮುದ್ರಿಸಲಾಗಿದ್ದ ವಿವರಗಳೆಲ್ಲವೂ ಅಳಿಸಿ ಹೋಗಿ ಫಲಕ ಮಾತ್ರ ಇದೆ. ಇನ್ನು ಗಣಪತಿ ಹೈಸ್ಕೂಲ್‌ ಬಳಿಯ ಫಲಕ ಸ್ತಂಭಗಳಿಂದ ಕಿತ್ತು ಬಂದು ಬದಿಯಲ್ಲಿ ಬಿದ್ದುಕೊಂಡಿದೆ. 1842ರಲ್ಲಿ ನಿರ್ಮಾಣಗೊಂಡಿರುವ ಹ್ಯಾಮಿಲ್ಟನ್‌ ವೃತ್ತದ ಬಳಿಯ ಐತಿಹಾಸಿಕ ಕ್ಲಾಕ್‌ ಟವರ್‌ ಇದ್ದಂತಹ ಸೈಂಟ್‌ ಪಾಲ್‌ ಚರ್ಚಿನ ಮಾಹಿತಿ ಫಲಕ ಬಹುತೇಕ ಕಿತ್ತು ಹೋಗಿದೆ!

-ವೇಣು ವಿನೋದ್‌ ಕೆ.ಎಸ್‌.

ಚಿತ್ರ: ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next