Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಹೈಜಾಕ್ ಮಾಡಿ, ಕಾಂಗ್ರೆಸ್ ಮುಖಂಡರಾಗಿದ್ದ ಶಂಕರ್ ಸಿಂಗ್ ವಘೇಲಾ ಮೊದಲಾದವರನ್ನು ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಇಷ್ಟಾದರೂ ಅವರಿಗೆ ನಿರೀಕ್ಷಿತ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
Related Articles
Advertisement
ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ. ಅದನ್ನು ಸರಿಸಮಾನ ಭಾವದಿಂದ ಸ್ವೀಕರಿಸುವುದು ಜನ ಪ್ರತಿನಿಧಿಗಳ ರಾಜಧರ್ಮವಾಗಬೇಕು ಎಂದು ಅಭಿಪ್ರಾಯಪಟ್ಟರು.
ಫಲಿತಾಂಶ ಪ್ರಭಾವ ಬೀರದು: “ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಕರ್ನಾಟಕದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗುಜರಾತನಲ್ಲಿ ಪಕ್ಷದ ಸಂಘಟನೆ ಸಮರ್ಪಕವಾಗಿರಲಿಲ್ಲ ಮತ್ತು ಸ್ಥಳೀಯ ನಾಯಕರ ಕೊರತೆಯೂ ಇತ್ತು. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು, ಪ್ರತಿ ಬೂತ್ ಮಟ್ಟದಲ್ಲೂ ನಾಯಕರು, ಕಾರ್ಯಕರ್ತರು ಇದ್ದಾರೆ.
ಹೀಗಾಗಿ ರಾಜ್ಯ ಸರ್ಕಾರದ ಜನಪರ ಯೋಜನೆ ಹಾಗೂ ಅಭಿವೃದ್ಧಿಯ ಆಧಾರದಲ್ಲಿ ಮುಂದಿನ ಚುನಾವಣೆ ಎದುರಿಸಲಿದ್ದೇವೆ. ಬಿಜೆಪಿಗರ ಅಸೂಯೆ, ಕೆಟ್ಟಪದ ಬಳಕೆ, ಬೆಂಕಿ ಹಚ್ಚುವ ಕೆಲಸ ತಡೆಯುವುದೇ ನಮಗೆ ದೊಡ್ಡ ಸವಾಲಾಗಿದೆ. ಮುಂದಿನ ತಿಂಗಳಿಂದ ರಾಹುಲ್‌ಗಾಂಧಿಯವರ ರಾಜ್ಯಪ್ರವಾಸ ಆರಂಭವಾಗಲಿದೆ. ಚುನಾವಣಾ ಸಿದ್ಧತೆ ಸಂಬಂಧ ದೆಹಲಿಯಲ್ಲಿ ಈಗಾಗಲೇ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದೇವೆ,’ ಎಂದು ದಿನೇಶ್ ಗುಂಡೂರಾವ್ ಹೇಳಿದರು.
22 ವರ್ಷಗಳ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಬಿಜೆಪಿಗೆ ಗೆಲುವು ಸಂದಿದೆ. ಹೊಸ ನಾಯಕತ್ವಕ್ಕೆ ಮಣೆಹಾಕಿದ ಪರಿಣಾಮ ಕಾಂಗ್ರೆಸ್ ಕೂಡ ಹೆಚ್ಚು ಸ್ಥಾನ ಗೆದ್ದಿದೆ. ಯುವಜನರ ಮತ ವಿಭಜನೆಯಾದ ಕಾರಣ ಬಿಜೆಪಿ ಒಂದಷ್ಟು ಸ್ಥಾನ ಕಳೆದುಕೊಂಡಿದೆ. ಕೇಂದ್ರ ಸರ್ಕಾರದ ಮೇಲೆ ಜನ ಈಗಲೂ ನಂಬಿಕೆ ಇರಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿರುವ ಈ ಫಲಿತಾಂಶ, ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಎಚ್ಚರಿಕೆ ಗಂಟೆಯಾಗಿದೆ.-ಹರಿಶ್ಚಂದ್ರ ಮವೂರು, ಬೆಂಗಳೂರು ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಆಡಳಿತಾದಲ್ಲಿದ್ದರೂ ಸ್ಪಷ್ಟ ಬಹುಮತ ಪಡೆಯಲು ಬಿಜೆಪಿ ಪ್ರಯಾಸಪಟ್ಟಿದೆ. ಇದರರ್ಥ, ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸಿದೆ. ನೋಟ್ ಬ್ಯಾನ್ ಹಾಗೂ ಜಿಎಸ್‌ಟಿ ಜಾರಿಯ ಬಿಸಿ ಬಿಜೆಪಿಗೆ ತಟ್ಟಿದೆ. ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳುವುದು ಕಷ್ಟ. ಮೇ ತಿಂಗಳ ತನಕ ಈ ಫಲಿತಾಂಶದ ಎಫೆಕ್ಟ್ ಉಳಿದುಕೊಳ್ಳಲಿದೆ ಎಂದು ಖಚಿತವಾಗಿ ಹೇಳಲಾಗದು.
-ಶಂಕರ ಎನ್. ಕೆಂಚನೂರ, ಬೆಂಗಳೂರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವಳಿ ಕುಗ್ಗುತ್ತಿದೆ. ಕೇಂದ್ರ ಸರ್ಕಾರ ಅಭಿವೃದ್ಧಿಗೆ ಹೆಚ್ಚೇನೂ ಒತ್ತು ನೀಡಿಲ್ಲ. ಹೀಗಿದ್ದರೂ ಬಿಜೆಪಿ ಗೆಲುವು ಸಾಧಿಸಿಸಿರುವುದೇ ಅಚ್ಚರಿ. ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲೇಬೇಕು ಎಂಬ ಹಠದಲ್ಲಿ ಚುನಾವಣೆ ಆಯೋಗದ ಮೂಲಕ ಮತಯಂತ್ರಗಳ ದುರ್ಬಳಕೆ ಮಾಡಿಕೊಂಡಿದೆ. ಈ ಬಾರಿ ಅನುಮಾನ ಬಾರದಂತೆ ಸ್ಪಷ್ಟಬಹುಮತಕ್ಕೆ ಬೇಕಾದಷ್ಟೇ ಸೀಟುಗಳನ್ನು ಗೆದ್ದಿದೆ. ಇವಿಎಂ ತಿರಸ್ಕರಿಸದಿದ್ದರೆ ರಾಜ್ಯದಲ್ಲೂ ಬಿಜೆಪಿ ಗೆಲ್ಲಲಿದೆ.
-ನರಸಿಂಹಮೂರ್ತಿ, ಯಲಹಂಕ ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಮುನ್ಸೂಚನೆಯಾದರೆ, ಪಕ್ಷದ ಬಲವರ್ಧನೆಗೆ ಮತ್ತಷ್ಟು ಒತ್ತು ನೀಡುವ ಸಂಬಂಧ ಕಾಂಗ್ರೆಸ್ ಮುಖಂಡರಿಗೆ ದಾರಿದೀಪವಾಗಿದೆ. ಎರಡೂ ರಾಜ್ಯಗಳಲ್ಲಿ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲದೇ ಇರುವುದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವರ್ಚಸ್ಸು ಕುಗ್ಗಿರುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದ ಚುನವಾಣೆಗೆ ಈ ಫಲಿತಾಂಶ ತಳುಕು ಹಾಕುವುದು ಸರಿಯಲ್ಲ.
-ಮಹೇಶ್ ಪಾವಗಡ, ಬೆಂಗಳೂರು ಕೇಂದ್ರ ಸರ್ಕಾರ ಮೂರೂವರೆ ವರ್ಷಗಳ ಆಡಳಿತಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿರಿಸಿಕೊಂಡು ಗುಜರಾತ್ ಜನ ಮತ್ತೆ ಬಿಜೆಪಿಗೆ ಬಹುಮತ ನೀಡಿದ್ದಾರೆ. ಕಾಂಗ್ರೆಸ್ ಈ ಬಾರಿ ಸೀಟು ಹೆಚ್ಚಿಸಿಕೊಂಡಿರಬಹುದಷ್ಟೇ. ಆದರೆ ಬಹುಮತ ಗಳಿಸಲು ವಿಫಲವಾಗಿದೆ. ಇದರರ್ಥ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಬೇಕು ಎಂದಲ್ಲವೇ? ಮುಂದೆ ನಡೆಯಲಿರುವ ರಾಜ್ಯ ಚುನಾವಣೆಯ ಮೇಲೂ ಈ ಫಲಿತಾಂಶ ಪರಿಣಾಮ ಬೀರಲಿದೆ.
-ಎಲ್. ಮಂಜುನಾಥ್, ದೊಡ್ಡಬಳ್ಳಾಪುರ ಕೇಂದ್ರ ಸರ್ಕಾರದ ನೋಟು ಅಮಾನ್ಯ, ಜಿಎಸ್‌ಟಿ ಜಾರಿ ನಿರ್ಧಾರಗಳ ಪರಿಣಾಮ ಗುಜರಾತ್ ಫಲಿತಾಂಶದಲ್ಲಿ ಪ್ರತಿಫಲಿಸುತ್ತಿದೆ. ಇಲ್ಲಿ ಬಿಜೆಪಿ ಪ್ರಯಾಸ ಪಟ್ಟು ಗೆಲುವು ದಾಖಲಿಸಿದ್ದು, ಈ ಬಾರಿ ಕಡಿಮೆ ಸೀಟುಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಈಗೀಗ ಚೈತನ್ಯ ಕಂಡುಕೊಳ್ಳುತ್ತಿದೆ ಎಂದು ಹೇಳಬಹುದು. ರಾಜ್ಯ ಚುನಾವಣೆಯ ಮೇಲೆ ಗುಜರಾತ್ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ. ಮೋದಿ-ಅಮಿತ್ ಶಾ ಮ್ಯಾಜಿಕ್ ರಾಜ್ಯದಲ್ಲಿ ನಡೆಯಲು ಸಾಧ್ಯವೇ ಇಲ್ಲ.
-ದಾಕ್ಷಾಯಿಣಿ, ನ್ಯಾಯವಾದಿ ಗುಜರಾತ್ ಗೆಲುವಿಗೆ ಪಕ್ಷಕ್ಕಿಂತ, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಕಾರಣ. ಕೇಂದ್ರ ಹಾಗೂ ಗುಜರಾತ್ ಸರ್ಕಾರಗಳ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಜನರ ಮುಂದಿಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಆದರೂ ಈ ಬಾರಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿರುವುದು ಜನ ಬದಲಾವಣೆ ಬಯಸುತ್ತಿದ್ದಾರೆ ಎಂಬುದರ ಪರೋಕ್ಷ ಎಚ್ಚರಿಕೆ ಎಂದು ಬಿಜೆಪಿ ಭಾವಿಸಬೇಕು. ರಾಜ್ಯದಲ್ಲೂ ಪಕ್ಷ ಬಲರ್ಧನೆಗೆ ಕಾಂಗ್ರೆಸ್ ಒತ್ತು ನೀಡಲು ಇದು ಸಕಾಲ.
-ನವ್ಯಶ್ರೀ, ಸಾಫ್ಟ್ವೇರ್ ಉದ್ಯೋಗಿ ಕೇಂದ್ರಸರ್ಕಾರ ನೋಟ್ ಬ್ಯಾನ್ ಮಾಡಿದ್ದರಿಂದ ಸಾಕಷ್ಟು ಕಪ್ಪುಹಣ ಹೊರಗೆ ಬಂದಿದೆ. ಇದೇ ರೀತಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆಗಳನ್ನು ಗುಜರಾತ್ ಜನ ಮೆಚ್ಚಿಕೊಂಡು, ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ನಿರೀಕ್ಷಿಸಿದಷ್ಟು ಸ್ಥಾನ ಗೆಲ್ಲದಿರಬಹುದು ಆದರೆ ಗೆಲವಿಗೆ ಅಗತ್ಯವಾದ ಮ್ಯಾಜಿಕ್ ನಂಬರ್ ಇದೆಯಲ್ಲಾ. ಈಗಲೂ ಪ್ರಧಾನಿ ಮೋದಿ ಹಾಗೂ ಬಿಜೆಪಿ ಮೇಲೆ ಜನ ಭರವಸೆ ಹೊಂದಿದ್ದಾರೆ.
-ಐಶ್ವರ್ಯ ಸೇನ್, ಮಿಸ್ ಈಕ್ವೀಟ್ ಇಂಡಿಯಾ 2017