Advertisement

ಸದನದಲ್ಲಿ ಪ್ರತಿಧ್ವನಿಸಿದ ವೈದ್ಯರ ಮುಷ್ಕರ

07:38 AM Nov 17, 2017 | |

ಸುವರ್ಣಸೌಧ: ವೈದ್ಯರ ಮುಷ್ಕರ ಮತ್ತು ಇದರಿಂದಾಗಿ ಜನಸಾಮಾನ್ಯರಿಗೆ ಉಂಟಾಗುತ್ತಿರುವ ಸಮಸ್ಯೆಗಳು ಗುರುವಾರ ವಿಧಾನ ಮಂಡಲದ ಉಭಯ ಸದನಗಳಲ್ಲೂ ಪ್ರತಿಧ್ವನಿಸಿ, ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಮುಗಿಬಿದ್ದಿತು.

Advertisement

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ ವಿರೋಧಿಸಿ ವೈದ್ಯರು ನಡೆಸುತ್ತಿರುವ ಮುಷ್ಕರದಿಂದಾಗಿ ಸಾರ್ವಜನಿಕರು ಪ್ರಾಣ ಬಿಡುತ್ತಿದ್ದಾರೆ. ಇದಕ್ಕೆ ಸರ್ಕಾರದ ಹಠಮಾರಿ ಧೋರಣೆಯೇ ಕಾರಣ ಎಂದು ಬಿಜೆಪಿ ಶಾಸಕರು ನೇರವಾಗಿಯೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಹಿತಕ್ಕಾಗಿ ವೈದ್ಯರು ಮುಷ್ಕರ ಬಿಡಬೇಕು ಎಂದು ಅವರು ಮನವಿ ಮಾಡಿದರು. ಕೆಳಮನೆಯಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ವೈದ್ಯರ ಮುಷ್ಕರ ವಿಷಯ ಪ್ರಸ್ತಾಪಿಸಲು ಮುಂದಾದರು. ಆದರೆ ಸ್ಪೀಕರ್‌ ಇದಕ್ಕೆ ಆಸ್ಪದ ನೀಡದೆ ಶೂನ್ಯವೇಳೆಯಲ್ಲಿ ಈ ವಿಚಾರವಿದೆ ಎಂದರು. 

ಹೀಗಾಗಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಗದೀಶ್‌ ಶೆಟ್ಟರ್‌, ಸರ್ಕಾರ ಹಾಗೂ ವೈದ್ಯರ ನಡುವಿನ ಪ್ರತಿಷ್ಠೆಗೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಸರ್ಕಾರ ಹಠಮಾರಿ ಧೋರಣೆ ತಾಳುವುದು ಸರಿಯಲ್ಲ. ಸಾರಿಗೆ ಸಿಬ್ಬಂದಿ, ವಕೀಲರು ಪ್ರತಿಭಟನೆ ನಡೆಸಿದಾಗ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುತ್ತದೆ. ಆದರೆ, ನಾಲ್ಕು ದಿನಗಳಿಂದ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, 25 ಜನ ಸಾವಿಗೀಡಾಗಿದ್ದಾರೆ. ಜನರ ಜೀವ ಉಳಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿಯ ಸಿ.ಟಿ.ರವಿ, ವಿಶ್ವೇಶ್ವರ ಹೆ‌ಗಡೆ ಇದಕ್ಕೆ ಧ್ವನಿಗೂಡಿಸಿದರು.

ಮೇಲ್ಮನೆಯಲ್ಲೂ ಪ್ರಸ್ತಾಪ: ಅತ್ತ, ಮೇಲ್ಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ವಿಷಯ ಪ್ರಸ್ತಾಪಿಸಿ, ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ನಡುವೆ ಹೊಂದಾಣಿಕೆ ಇಲ್ಲದಿರುವುದೇ ಸಮಸ್ಯೆಗೆ ಕಾರಣ ಎಂದು ಆರೋಪಿಸಿದರು. ಪ್ರತಿಪಕ್ಷಗಳ ಮುಖಂಡರು, ವೈದ್ಯಪ್ರತಿನಿಧಿಗಳನ್ನು ಸೇರಿಸಿ ಸಭೆ ಕರೆಯಿರಿ ಎಂದು ಮುಖ್ಯ ಮಂತ್ರಿಯವರಿಗೆ ಹೇಳಿ 4 ದಿನ ಆದರೂ ಸಭೆ ಕರೆದಿಲ್ಲ. ಇದರಲ್ಲಿ ಸರ್ಕಾರದ ಬೇಜವಾ ಬ್ದಾರಿ ಎದ್ದು ಕಾಣುತ್ತದೆ ಎಂದು ಹರಿಹಾಯ್ದರು.

ಬಿಜೆಪಿ ಸದಸ್ಯರ ಪ್ರತಿಭಟನೆ: ಬೆಳಗ್ಗೆ ಕಲಾಪ  ಆರಂಭಕ್ಕೆ ಮುನ್ನ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸುವರ್ಣಸೌಧದ ಪಶ್ಚಿಮ ದ್ವಾರದ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಾರ್ವಜನಿಕರ ಜೀವನದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಮೆರವಣಿಗೆಯಲ್ಲೇ ಸದನಕ್ಕೆ ಆಗಮಿಸಿದರು.

Advertisement

“ನನಗೇನೂ ಪ್ರತಿಷ್ಠೆ ಇಲ್ಲ, ತಪ್ಪು ಮಾಡಿಲ್ಲ’
ಪ್ರತಿಪಕ್ಷ ಸದಸ್ಯರ ಟೀಕೆಗಳ ಹಿನ್ನೆಲೆಯಲ್ಲಿ ಉಭಯ ಸದನಗಳಲ್ಲಿ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ರಮೇಶ್‌ಕುಮಾರ್‌, “ನನ 
ಗೇನೂ ಪ್ರತಿಷ್ಠೆ ಇಲ್ಲ, ನಾನೇನು ಮಹಾರಾಜನ ವಂಶದವನೂ ಅಲ್ಲ. ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ವ್ಯಕ್ತಿ. ಸದನಕ್ಕೆ ಇನ್ನೂ ವಿಧೇಯಕವೇ ಬಂದಿಲ್ಲ. ಆದರೂ ದೊಡ್ಡ ತಪ್ಪು ಮಾಡಲಾಗುತ್ತಿದೆ ಎಂದು ಗುಲ್ಲೆಬ್ಬಿ ಸಲಾಗುತ್ತಿದೆ. ವೈದ್ಯರು ಮಾಡುತ್ತಿರುವುದು ಸರಿ, ನಾವು ಮಾಡುತ್ತಿರುವುದು ತಪ್ಪು ಎಂಬಂತೆ ಬಿಂಬಿತವಾಗುತ್ತಿದೆ’ ಎಂದು ತಿದ್ದು ಪಡಿ ವಿಧೇಯಕ ಸಮರ್ಥನೆ ಮಾಡಿಕೊಳ್ಳಲು ಮುಂದಾದರು. ಆದರೆ, ಸಚಿವರ ಉತ್ತರದಿಂದ ಸಮಾ ಧಾನ ಗೊಳ್ಳದ ಪ್ರತಿಪಕ್ಷ ಬಿಜೆಪಿ ಸದಸ್ಯರು
ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು. ಪರಿಷತ್ತಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ವಾಗ್ವಾದದಿಂದಾಗಿ ಗದ್ದಲ-ಕೋಲಾಹಲ ಉಂಟಾಗಿ ಸದನ ಮುಂದೂಡುವಂತಾಯಿತು. 

ಜೆಡಿಎಸ್‌ ಮೌನ
ವಿವಾದಿತ ವಿಧೇಯಕ ಹಾಗೂ ವೈದ್ಯರ ಮುಷ್ಕರದ ಬಗ್ಗೆ ಉಭಯ ಸದನಗಳಲ್ಲಿ ಪ್ರಸ್ತಾಪಗೊಂಡು ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದರೆ ಮತ್ತೂಂದು ಪ್ರತಿಪಕ್ಷ ಜೆಡಿಎಸ್‌ ಸದಸ್ಯರು ಮೌನವಾಗಿದ್ದು ಅಚ್ಚರಿ ಮೂಡಿಸಿತು. ವಿಧಾನಸಭೆಯಲ್ಲಾಗಲಿ ಅಥವಾ
ವಿಧಾನ ಪರಿಷತ್‌ನಲ್ಲಾಗಲಿ ಪಕ್ಷದ ಯಾವೊಬ್ಬ ಸದಸ್ಯರೂ ತುಟಿ ಪಿಟಿಕ್‌ ಅನ್ನಲಿಲ್ಲ.

ಸದನಕ್ಕೆ ಬಾರದ ಕುಮಾರಸ್ವಾಮಿ
ವಿಧಾನಸಭೆ ಅಧಿವೇಶನ ಪ್ರಾರಂಭವಾಗಿ ನಾಲ್ಕು ದಿನ ಕಳೆದರೂ ಬುಧವಾರ ಕೆಲಹೊತ್ತು ಸದನದಲ್ಲಿ ಪ್ರತ್ಯಕ್ಷವಾಗಿದ್ದು ಬಿಟ್ಟರೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕಲಾಪದತ್ತ ತಲೆ ಹಾಕಲಿಲ್ಲ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಪ್ರಾರಂಭವಾಗಿದ್ದು, ಜತೆಗೆ ಗುರುವಾರ ವೈದ್ಯರ ಮುಷ್ಕರ, ಮೌಡ್ಯ ನಿಷೇಧ ವಿಧೇಯಕ, ಕಂಬಳಕ್ಕೆ ಕಾನೂನು ಮಾನ್ಯತೆ ನೀಡುವ ಉದ್ದೇಶದ ವಿಧೇಯಕ ಸೇರಿ ಮಹತ್ವದ ವಿಚಾರಗಳು ಸದನದಲ್ಲಿ ಪ್ರಸ್ತಾಪವಾದವು. ಆದರೆ, ಕುಮಾರಸ್ವಾಮಿ ಹಾಜರಿರಲಿಲ್ಲ. ಮಂಗಳವಾರ ಬೆಳಗಾವಿಯಲ್ಲಿ ಜೆಡಿಎಸ್‌ ಸಮಾವೇಶ ಇತ್ತು. ಗುರುವಾರ ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಇತ್ತು. ಹೀಗಾಗಿ, ಕುಮಾರಸ್ವಾಮಿ ಸದನಕ್ಕೆ ಬರಲಿಲ್ಲ ಎಂದು ಜೆಡಿಎಸ್‌ ಶಾಸಕರು ಸಮಜಾಯಿಷಿ ನೀಡಿದರು.

ಸರ್ಕಾರ ಮತ್ತು ಮುಷ್ಕರ ನಿರತ ವೈದ್ಯರು ಸಾರ್ವಜನಿಕ ಹಿತದೃಷ್ಟಿಯಿಂದ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿ ಕೊಳ್ಳಬೇಕು. ಮುಷ್ಕರದಿಂದ ಗಂಭೀರ ಸಮಸ್ಯೆ ಉಂಟಾಗಿದ್ದು, ಸಾಮಾನ್ಯ ಜನರಿಗೆ ಇದರಿಂದ ತೊಂದರೆಯಾಗುತ್ತಿದೆ. ಸರ್ಕಾರ ಆದಷ್ಟು ಬೇಗ ವೈದ್ಯರ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
 ●ಕೆ.ಬಿ.ಕೋಳಿವಾಡ, ಸ್ಪೀಕರ್‌

ನಿಮಗೆ (ವೈದ್ಯರಿಗೆ) ಜವಾಬ್ದಾರಿ ಇಲ್ಲವೇ? ಜನ ಸಾಯುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ. ದಯವಿಟ್ಟು ಮುಷ್ಕರ ಕೈಬಿಟ್ಟು ಜನರ ಸೇವೆಗೆ ಬನ್ನಿ ಎಂದು ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ.
 ●ಕೆ.ಎಸ್‌. ಈಶ್ವರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next