Advertisement

ರಾಹುಲ್‌ ಟ್ವೀಟ್‌ಗೆ ಸಿಡಿದೆದ್ದ ಬಿಜೆಪಿ

12:30 AM Mar 15, 2019 | |

ಹೊಸದಿಲ್ಲಿ/ಬೀಜಿಂಗ್‌: ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಜೈಶ್‌ ಉಗ್ರಗಾಮಿ ಮಸೂದ್‌ ಅಜರ್‌ನ ಸೇರ್ಪಡೆ ತಡೆಗೆ ಚೀನ ತಡೆಯೊಡ್ಡಿದ್ದೇ ಒಂದು ವಿವಾದಿತ ವಿಚಾರ. ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, “ದುರ್ಬಲ ಪ್ರಧಾನಿ ಮೋದಿ ಚೀನ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ಗೆ ಹೆದರುತ್ತಿದ್ದಾರೆ’ ಎಂದು ಟ್ವೀಟ್‌ ಮಾಡಿರುವುದು ಕೋಲಾಹಲ ಎಬ್ಬಿಸಿದೆ. ಮೊದಲ ಪ್ರಧಾನಿ ನೆಹರೂ ಅವರಿಂದಾಗಿಯೇ ಭಾರತಕ್ಕೆ ನೀಡಲಾಗಿದ್ದ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವ ತಪ್ಪಿತು ಎಂದು ಸಚಿವ ಜೇಟ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ಹೆದರಿದ್ದಾರೆ. ಹೀಗಾಗಿಯೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಉಗ್ರ ಪಟ್ಟಿಗೆ ಮಸೂದ್‌ ಅಜರ್‌ ಸೇರ್ಪಡೆಗೆ ಚೀನ ತಡೆಯೊಡ್ಡಿದ್ದರೂ ಪ್ರಧಾನಿ ಮೌನವಾಗಿದ್ದಾರೆ ಎಂದು ರಾಹುಲ್‌ ಬರೆದುಕೊಂಡಿದ್ದಾರೆ. 

Advertisement

“ದುರ್ಬಲ ಮೋದಿ ಕ್ಸಿಗೆ ಹೆದರುತ್ತಿದ್ದಾರೆ. ಭಾರತದ ವಿರುದ್ಧವಾಗಿ ಚೀನ ನಡೆದುಕೊಂಡರೂ ಮೋದಿಯವರು ಮಾತನಾಡಿಲ್ಲ. ನಮೋ ಅವರ ಚೀನ ರಾಜತಾಂತ್ರಿಕತೆಯೇನೆಂದರೆ, 1. ಗುಜರಾತ್‌ನಲ್ಲಿ ಕ್ಸಿ ಜತೆ ಭೇಟಿ 2. ದಿಲ್ಲಿಯಲ್ಲಿ ಅವರ ಜತೆ ಅಪ್ಪುಗೆ 3. ಚೀನದಲ್ಲಿ ಕ್ಸಿ ಅವರಿಗೆ ವಂದನೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಟ್ವೀಟ್‌ ಮಾಡಿದ್ದರು. 

ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಮತ್ತು ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್‌ ಸಮರ್ಥವಾಗಿಯೇ ಉತ್ತರಿಸಿದ್ದಾರೆ. ಸರಣಿ ಟ್ವೀಟ್‌ ಮಾಡಿದ ಜೇಟ್ಲಿ ಹಾಲಿ ಬಿಕ್ಕಟ್ಟಿಗೆ ಕಾಂಗ್ರೆಸ್‌ ಅಧ್ಯಕ್ಷರ ಅಜ್ಜ ನೆಹರೂ ಕಾರಣ. ಭಾರತಕ್ಕೆ ಕೊಡಲಾಗಿದ್ದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವವನ್ನು ಚೀನಕ್ಕೆ ನೀಡಿದವರು ಯಾರು? ಹೀಗಾಗಿ ಮೊದಲ ಪಾಪ ಮಾಡಿದವರು ಯಾರೆಂಬುದನ್ನು ಕಾಂಗ್ರೆಸ್‌ ಅಧ್ಯಕ್ಷರು ತಿಳಿಸುವರೇ ಎಂದು ಪ್ರಶ್ನಿಸಿದ್ದಾರೆ. ಕಾಶ್ಮೀರ, ಚೀನ ಸಮಸ್ಯೆಗೆ ಮೂಲ ಕಾರಣರೂ ಅವರೇ ಎಂದು ಬರೆದುಕೊಂಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಶಂಕರ ಪ್ರಸಾದ್‌, “ಚೀನದ ನಿರ್ಧಾರದಿಂದ ದೇಶ ದುಃಖದಲ್ಲಿರುವಾಗ ರಾಹುಲ್‌ ಗಾಂಧಿಯವರೇಕೆ ಸಂತೋಷದ ಮೂಡ್‌ನ‌ಲ್ಲಿದ್ದಾರೆ. ಚೀನದ ನಿರ್ಧಾರದ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷರೇಕೆ ಪ್ರತಿಕ್ರಿಯೇ ನೀಡಿಲ್ಲ?’ ಎಂದು ಪ್ರಶ್ನೆ ಮಾಡಿದ್ದಾರೆ. ರಾಹುಲ್‌ ಹೇಳಿಕೆಯಿಂದ ಅವರು ಮಸೂದ್‌ ಅಜರ್‌ ಜತೆಗೆ ಸಮೀಪ್ಯ ಹೊಂದಿರುವಂತೆ ಭಾಸವಾಗುತ್ತಿದೆ ಎಂದು ಟೀಕಿಸಿದ್ದಾರೆ. ಚೀನ ಸಮರ್ಥನೆ: ಉಗ್ರ ಪಟ್ಟಿಗೆ ಸೇರ್ಪಡೆ ವಿಚಾರಕ್ಕೆ ತಡೆಯೊಡ್ಡಿದ ನಿರ್ಧಾರಕ್ಕೆ ಚೀನ ಗುರುವಾರ ಮತ್ತೂಮ್ಮೆ ಸಮರ್ಥನೆ ನೀಡಿದೆ. ಇದರಿಂದ ದೀರ್ಘ‌ ಕಾಲಿಕ ಪರಿಹಾರ ಕಂಡುಕೊಳ್ಳಲು ಸಹಾಯಕವಾಗು ತ್ತದೆ ಎಂದಿದೆ. ಸಮಿತಿಯ ನಿರ್ಧಾರಕ್ಕನುಗುಣವಾಗಿಯೇ  ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್‌. 

ಚೀನ ಉತ್ಪನ್ನ ಬಹಿಷ್ಕರಿಸಿ
ಜೈಶ್‌ ಉಗ್ರ ಮಸೂದ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆಗೊಳಿಸಲು ಚೀನ ಅಡ್ಡಗಾಲು ಹಾಕಿದ್ದಕ್ಕೆ ಭಾರತದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಭಾರತ ದಲ್ಲಿ ಚೀನದ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬಂಥ ಆಗ್ರಹಗಳು ಕೇಳಿಬಂದಿವೆ. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲೂ “ಚೀನ ಉತ್ಪನ್ನ ಬಹಿಷ್ಕರಿಸಿ’ ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ. ಪಾಕಿಸ್ಥಾನಕ್ಕೆ ಬೆಂಬಲ ನೀಡುತ್ತಿರುವ ಚೀನಗೆ ತಕ್ಕ ಪಾಠ ಕಲಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಇದೇ ವೇಳೆ, ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿ, 1950ರಲ್ಲಿ ಯುಎನ್‌ಎಸ್‌ಸಿ ಸ್ಥಾನವನ್ನು ಚೀನಗೆ ಬಿಟ್ಟು ಕೊಟ್ಟಿದ್ದಕ್ಕೆ ಭಾರತ ಬೆಲೆ ತೆರಬೇಕಾಗಿದೆ. 1999 ರಲ್ಲಿ ಅಜರ್‌ನನ್ನು ಬಿಡುಗಡೆ ಮಾಡಿದ್ದೂ ಈಗ ಶಾಪವಾಗಿ ಪರಿಣಮಿಸಿದೆ ಎಂದು ಬರೆದಿದ್ದಾರೆ.

Advertisement

ಕೈಗೆ ಮುಜುಗರ ತಂದ ಶೀಲಾ
‘ಭಯೋತ್ಪಾದಕರ ನಿರ್ಮೂಲನೆ ವಿಚಾರಕ್ಕೆ ಬಂದರೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಹಾಲಿ ಪ್ರಧಾನಿ ಮೋದಿಯವರಷ್ಟು ಕಠಿನವಾಗಿರಲಿಲ್ಲ’ ಎಂದು ಹೇಳುವ ಮೂಲಕ ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದಾರೆ. ನ್ಯೂಸ್‌18ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಮುಂಬಯಿ ದಾಳಿ ನಂತರ ಯುಪಿಎ ಸರಕಾರ ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳ ಲಿಲ್ಲ ಎಂಬ ಆರೋಪ ಕೇಳಿಬರುತ್ತಿವೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಶೀಲಾ, ‘ಬಹುಶಃ ಅಂದಿನ ಪ್ರಧಾನಿ ಸಿಂಗ್‌ ಅವರು ಮೋದಿಯವರಷ್ಟು ಬಲಿಷ್ಠವಾಗಿರಲಿಕ್ಕಿಲ್ಲ’ ಎಂದು ಹೇಳಿದ್ದಾರೆ. ಜತೆಗೆ, ಮೋದಿ ಅವರೂ ರಾಜಕೀಯ ಉದ್ದೇಶದಿಂದ ಪಾಕ್‌ ವಿರುದ್ಧ ಕ್ರಮ ಕೈಗೊಂಡಿರಲೂಬಹುದು ಎಂದೂ ಅಭಿಪ್ರಾಯಪಟ್ಟಿದ್ದಾರೆ. ಶೀಲಾ ಹೇಳಿಕೆ ರಾಜಕೀಯವಾಗಿ ಸಂಚಲನ ಸೃಷ್ಟಿಸಿದೆ. ಬಲಿಷ್ಠ ಹಾಗೂ ಸ್ಥಿರ ಸರಕಾರ ನೀಡಲು ಮೋದಿಯವರಿಂದ ಮಾತ್ರ ಸಾಧ್ಯ ಎಂಬ ಬಿಜೆಪಿ ಹೇಳಿಕೆಗೂ ಇದರಿಂದ ಪುಷ್ಟಿ ಸಿಕ್ಕಿದಂತಾಗಿದೆ.

ಮಹಾಘಟಬಂಧನ ಸೋಲಬಾರದು
ಎಸ್‌ಪಿ, ಬಿಎಸ್‌ಪಿ ಹಾಗೂ ಆರ್‌ಎಲ್‌ಡಿ ಮಾಡಿಕೊಂಡಿರುವ ಘಟಬಂಧನವು ಸೋಲಬಾರದು ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ ಕೇವಲ 2 ಸೀಟ್‌ಗಳನ್ನು ನೀಡಿದ್ದರಿಂದ ಸ್ವತಂತ್ರವಾಗಿ ಸ್ಪರ್ಧಿಸಲು ಕಾಂಗ್ರೆಸ್‌ ನಿರ್ಧರಿಸಿತು. ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷ ಇಂಥದ್ದನ್ನು ಸಹಿಸದು. ಹೀಗಾಗಿಯೇ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ. ಆದರೆ ಅಭ್ಯರ್ಥಿ ಕಣಕ್ಕಿಳಿಸುವಲ್ಲಿಯೂ ನಾವು ಪರಸ್ಪರ ಸಹಕಾರ ನೀಡಿದ್ದೇವೆ. ಬಿಜೆಪಿಯನ್ನು ಸೋಲಿಸುವ ಸೂತ್ರದೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದನ್ನು ನೋಡಬಹುದು. ನಾವು ಮಹಾಘಟಬಂಧನಕ್ಕೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ.

ಬಿಹಾರ: ಕಾಂಗ್ರೆಸ್‌ 11, ಆರ್‌ಜೆಡಿ 20ರಲ್ಲಿ ಸ್ಪರ್ಧೆ
ಆರ್‌ಜೆಡಿ-ಕಾಂಗ್ರೆಸ್‌ ಮೈತ್ರಿ ಮುರಿದುಬೀಳಲಿದೆ ಎಂಬ ವದಂತಿಗೆ ತೆರೆಬಿದ್ದಿದ್ದು, ಎರಡೂ ಪಕ್ಷಗಳು ಗುರುವಾರ ಸೀಟು ಹಂಚಿಕೆ ಅಂತಿಮಗೊಳಿಸಿವೆ. ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 11ರಲ್ಲಿ ಸ್ಪರ್ಧಿಸಲಿದ್ದು, ಆರ್‌ಜೆಡಿ 20ರಲ್ಲಿ ಸ್ಪರ್ಧಿಸಲಿವೆ. ಉಳಿದ ಕ್ಷೇತ್ರಗಳನ್ನು ಜಿತನ್‌ ರಾಂ ಮಾಂಜಿ, ಉಪೇಂದ್ರ ಕುಶ್ವಾಹಾ, ಅರ್ಜುನ್‌ ರಾಯ್‌ ಮತ್ತು ಶರದ್‌ ಯಾದವ್‌ ನೇತೃತ್ವದ ಸಣ್ಣ ಪಕ್ಷಗಳಿಗೆ ಬಿಟ್ಟುಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ. ರವಿವಾರ ಈ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ.

ಸೆಹ್ವಾಗ್‌ ಸ್ಪರ್ಧಿಸಲ್ಲ
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ಅವರು ಬಿಜೆಪಿ ನೀಡಿದ್ದ ಟಿಕೆಟ್‌ ಆಫ‌ರ್‌ ಅನ್ನು ತಿರಸ್ಕರಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಾಗದು ಎಂದು ಅವರು ತಿಳಿಸಿರುವುದಾಗಿ ಬಿಜೆಪಿ ದಿಲ್ಲಿ ಘಟಕದ ನಾಯಕರೊಬ್ಬರು ತಿಳಿಸಿದ್ದಾರೆ. ಸೆಹ್ವಾಗ್‌ಗೆ ಪಶ್ಚಿಮ ದಿಲ್ಲಿ ಕ್ಷೇತ್ರದ ಟಿಕೆಟ್‌ ನೀಡಲು ಬಿಜೆಪಿ ಮುಂದಾಗಿತ್ತು. ಇದೇ ವೇಳೆ, ಮತ್ತೂಬ್ಬ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರು ಈ ಬಾರಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದೂ ಅವರು ಹೇಳಿದ್ದಾರೆ.

ಅನ್ನದಾತರು ಬೊಬ್ಬಿಟ್ಟರೂ ಮೋದಿಗೆ ಕೇಳಿಸಲ್ಲ
“ಪ್ರಧಾನಿ ನರೇಂದ್ರ ಮೋದಿಯವರಿಗೆ ರೈತರು, ಮೀನುಗಾರರು, ಸಣ್ಣ ವ್ಯಾಪಾರಿಗಳ ಧ್ವನಿಯೇ ಕೇಳಿಸುವುದಿಲ್ಲ. ಆದರೆ, ಉದ್ಯಮಿಗಳಾದ ಅನಿಲ್‌ ಅಂಬಾನಿ, ನೀರವ್‌ ಮೋದಿಯಂಥವರು ಪಿಸುಗುಟ್ಟಿದರೂ ಸಾಕು, ಅವರಿಗೆ ಮೋದಿ ಧ್ವನಿಯಾಗುತ್ತಾರೆ.’ ಹೀಗೆಂದು ಆರೋಪಿಸಿದ್ದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ. ಕೇರಳದಲ್ಲಿ ಗುರುವಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ರಾಹುಲ್‌, ತ್ರಿಶೂರ್‌ನಲ್ಲಿ ಮೀನು ಗಾರರೊಂದಿಗೆ ಸಂವಾದ ನಡೆಸಿದರು. ಈಗಿನ ಸರಕಾರದಲ್ಲಿ, ಅನಿಲ್‌ ಅಂಬಾನಿ, ನೀರವ್‌ನಂಥ ವರಿಗೆ ಹೆಚ್ಚಿನ ಆದ್ಯತೆ. ಅವರು ಪಿಸುಧ್ವನಿಯಲ್ಲಿ ಏನೇ ಹೇಳಿದರೂ ಪ್ರಧಾನಿ ಮೋದಿ 10 ಸೆಕೆಂಡುಗಳಲ್ಲಿ ಮಾಡಿ ಮುಗಿಸುತ್ತಾರೆ. ಆದರೆ, ಅನ್ನದಾತರು, ಮೀನುಗಾರರು, ಸಣ್ಣ ವ್ಯಾಪಾರಿಗಳು ಎಷ್ಟೇ ಕೂಗಿಕೊಂಡರೂ ಮೋದಿಗೆ ಕಿವಿಯೇ ಕೇಳಿಸುವುದಿಲ್ಲ ಎಂದು ರಾಹುಲ್‌ ಹೇಳಿದರು. ಚುನಾವಣೆಯಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಸ್ಥಾಪಿಸುತ್ತೇವೆ. ನಾವು ಪ್ರಧಾನಿ ಮೋದಿಯವರಂತೆ ಸುಳ್ಳು ಆಶ್ವಾಸನೆಗಳನ್ನು ನೀಡುವುದಿಲ್ಲ ಎಂದೂ ರಾಹುಲ್‌ ವಾಗ್ಧಾನ ಮಾಡಿದರು.
ಕಲ್ಲಿಕೋಟೆಯಲ್ಲಿ ಜನ ಮಹಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌, “ಕಾಂಗ್ರೆಸ್‌ ಪಕ್ಷವು ಎಲ್ಲರನ್ನೂ ಆಲಿಸುತ್ತದೆ ಹಾಗೂ ಯಾರ ಮೇಲೂ ಏನನ್ನೂ ಹೇರುವುದಿಲ್ಲ. ಆದರೆ, ಮೋದಿ ಅವರು ತಮ್ಮ ಮನ್‌ ಕಿ ಬಾತ್‌ ಹೇಳುತ್ತಾರೆಯೇ ವಿನಾ ಜನರ ಮನದ ಮಾತನ್ನು ಆಲಿಸುವುದಿಲ್ಲ’ ಎಂದರು.

ಕಾರ್ಯಕರ್ತರ ಮನೆಗೆ ಭೇಟಿ: ಇತ್ತೀಚೆಗೆ ಸಿಪಿಎಂ ಕಾರ್ಯಕರ್ತರಿಂದ ಹತ್ಯೆಗೀಡಾಗಿದ್ದಾರೆ ಎನ್ನಲಾದ ಯುವ ಕಾಂಗ್ರೆಸ್‌ನ ಮೂವರು ಕಾರ್ಯಕರ್ತರ ಮನೆಗೂ ರಾಹುಲ್‌ ಭೇಟಿ ನೀಡಿ, ಸಾಂತ್ವನ ಹೇಳಿ ದ್ದಾರೆ. ಕೃಪೇಶ್‌, ಶರತ್‌ ಲಾಲ್‌ ಹಾಗೂ ಸುಹೈಬ್‌ ಕುಟುಂಬ ಸದಸ್ಯರ ಜತೆ ಮಾತುಕತೆ ನಡೆಸಿದ್ದಾರೆ.

ಇಂದು ಉ.ಪ್ರ.ದಲ್ಲಿ ಪ್ರಿಯಾಂಕಾ ಪ್ರಚಾರ
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಶುಕ್ರವಾರ ಉ.ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪಕ್ಷದ ಪರ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿ ದ್ದಾರೆ. ಅಲ್ಲದೆ, ನದಿ ಮಾರ್ಗದಲ್ಲಿ ಸಂಚರಿಸಿ ಪ್ರಧಾನಿ ಮೋದಿಯವರ ಕ್ಷೇತ್ರ ವಾರಾಣಸಿಗೆ ತೆರಳಲಿ ದ್ದಾರೆ. ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಹುಟ್ಟೂರಿನಿಂದಲೇ ಪ್ರಚಾರ ಆರಂಭಿಸು ವುದು ಅವರ ಉದ್ದೇಶವಾಗಿದೆ ಎಂದು ಹಿರಿಯ ನಾಯಕ ರಾಜ್‌ಬಬ್ಬರ್‌ ಹೇಳಿದ್ದಾರೆ. ಅಲ್ಲದೆ, ಕಳೆದ 30 ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿರುವ ನದಿ ಪಾತ್ರದ ಜನರನ್ನು ಸಂಪರ್ಕಿಸುವ ಸಲುವಾಗಿ ಪ್ರಿಯಾಂಕಾ ನದಿ ಮಾರ್ಗದಲ್ಲಿ ಸಂಚರಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.

“ಸಹೋದರಿಯರೇ’ ಎಂದು ಭಾಷಣ ಆರಂಭಿಸಿದ್ದಕ್ಕೆ ಮೆಚ್ಚುಗೆ
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಇತ್ತೀಚೆಗೆ ಗುಜರಾತ್‌ನಲ್ಲಿ ನಡೆಸಿದ ರ್ಯಾಲಿ ಅವರು ಸಕ್ರಿಯ ರಾಜಕಾರಣ ಪ್ರವೇಶಿಸಿದ ಬಳಿಕ ನಡೆಸಿದ ಪ್ರಥಮ ರ್ಯಾಲಿ ಆಗುವುದರ ಜೊತೆಗೆ ಹಲವು ಪ್ರಥಮಗಳನ್ನು ದಾಖಲಿಸಿದೆ. ಪ್ರಿಯಾಂಕಾ ಅಂದು ಎಂದಿನ ರೂಢಿಯಂತೆ “ಭಾಯಿಯೋ ಔರ್‌ ಬೆಹೆನೋ'(ಸಹೋದರರೇ, ಸಹೋದರಿಯರೇ) ಎಂದು ಭಾಷಣ ಆರಂಭಿಸದೆ, “ಬೆಹೆನೋ, ಭಾಯಿಯೋ’ (ಸಹೋದರಿಯರೇ, ಸಹೋದರರೇ) ಎಂದು ಆರಂಭಿಸಿದ್ದರು. ಈ ರೀತಿ ಮಹಿಳೆಯರನ್ನು ಮೊದಲಿಗೆ ಸಂಬೋಧಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, “ಇದನ್ನು ಯಾರೂ ಗಮನಿಸಿರಲಿಕ್ಕಿಲ್ಲ ಎಂದೇ ಭಾವಿಸಿದ್ದೆ’ ಎಂದು ಟ್ವೀಟ್‌ ಮಾಡಿದ್ದಾರೆ. 

ಸುಪ್ರೀಂ ಮೊರೆ ಹೋದ ವಿಪಕ್ಷಗಳು
ಮತ ದೃಢೀಕರಣ ಯಂತ್ರ(ವಿವಿಪ್ಯಾಟ್‌)ದ ಶೇ.50ರಷ್ಟು ಸ್ಲಿಪ್‌ಗ್ಳನ್ನು ಇವಿಎಂನಲ್ಲಿರುವ ಮತಗಳೊಂದಿಗೆ ಹೋಲಿಕೆ ಮಾಡಬೇಕು ಎಂದು ಕೋರಿ 21 ವಿಪಕ್ಷಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. ಶುಕ್ರವಾರ ಈ ಅರ್ಜಿಯನ್ನು ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಅರ್ಜಿದಾರರ ಪೈಕಿ ಕಾಂಗ್ರೆಸ್‌, ಟಿಡಿಪಿ, ಎನ್‌ಸಿಪಿ, ಆಪ್‌, ಎಡಪಕ್ಷಗಳು, ಎಸ್‌ಪಿ, ಬಿಎಸ್‌ಪಿ ಕೂಡ ಸೇರಿವೆ.

ಎನ್‌ಸಿಪಿ ಮೊದಲ ಪಟ್ಟಿ ಬಿಡುಗಡೆ
ಶರದ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ(ಎನ್‌ಸಿಪಿ) ಗುರುವಾರ 12 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪಕ್ಷದ ಭದ್ರಕೋಟೆಯಾದ ಬಾರಾಮತಿಯಿಂದ ಹಿರಿಯ ನಾಯಕಿ ಸುಪ್ರಿಯಾ ಸುಳೆ ಅವರನ್ನು ಕಣಕ್ಕಿಳಿಸಲಾ ಗಿದೆ. ಮೊಹಮ್ಮದ್‌ ಫೈಜಲ್‌, ಧನಂಜಯ್‌, ಉದಯನ್‌ರಾಜೆ, ಆನಂದ್‌ ಪರಾಂಜಪೆ ಮತ್ತಿತರರಿಗೂ ಟಿಕೆಟ್‌ ನೀಡಲಾಗಿದೆ.

“ಮೋದಿ ಹೇ ತೋ ಮುಮ್ಕಿನ್‌ ಹೈ’
ಈ ಚುನಾವಣೆಯಲ್ಲಿ “ಮೋದಿ ಹೇ ತೋ ಮುಮ್ಕಿನ್‌ ಹೈ’ ಎಂಬ ಉದ್ಘೋಷವನ್ನು ಬಿಜೆಪಿ ಬಳಸಿಕೊಳ್ಳಲಿದೆ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಅವರು ಕಳೆದ 5 ವರ್ಷಗಳಲ್ಲಿ ದಿನದ 24 ಗಂಟೆಯೂ ಕೆಲಸ ಮಾಡುವ ಮೂಲಕ “ಮೋದಿಯಿದ್ದರೆ ಎಲ್ಲವೂ ಸಾಧ್ಯ’ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಇದನ್ನು ಜಗತ್ತಿನಾ ದ್ಯಂತದ ಭಾರತೀಯರೂ ಮೆಚ್ಚಿದ್ದಾರೆ. ಹೀಗಾಗಿ, ಚುನಾವಣೆಯಲ್ಲಿ ಇದೇ ಸ್ಲೋಗನ್‌ ಬಳಸಲು ನಿರ್ಧರಿಸಿದ್ದೇವೆ ಎಂದು ಜೇಟ್ಲಿ ತಿಳಿಸಿದ್ದಾರೆ.

ಮೊದಲ ಚುನಾವಣೆಯ ಚಿತ್ತ
ಬ್ರಿಟಿಷರ ತೆಕ್ಕೆಯಲ್ಲಿದ್ದ ಭಾರತವು ಸ್ವಾತಂತ್ರ್ಯಗೊಂಡ ಬಳಿಕ ಹಲವು ಏಳು ಬೀಳುಗಳನ್ನು ಕಂಡಿದೆ. ಬಡ ರಾಷ್ಟ್ರವೆಂಬ ಹಣೆಪಟ್ಟಿಯಿಂದ ವಿಶ್ವದ ಅತಿದೊಡ್ಡ ಆರ್ಥಿಕತೆಯೆಂಬ ಖ್ಯಾತಿವರೆಗೆ ಬೆಳೆದುಬಂದಿದೆ. 1950 ಜನವರಿ 26ರಂದು ಗಣರಾಜ್ಯವೆಂದು ಘೋಷಿಸಲ್ಪಟ್ಟ ಭಾರತ ದಲ್ಲಿ ಮೊದಲ ಚುನಾವಣೆ ನಡೆದಿದ್ದು 1951ರ ಅಕ್ಟೋಬರ್‌ 25ರಿಂದ 1952ರ ಫೆಬ್ರವರಿ 21ರವರೆಗೆ. ಆಗ ಲೋಕಸಭೆಯ 489 ಸೀಟು ಗಳಿಗಾಗಿ 1,849 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಶೇ. 45.7ರಷ್ಟು ಮತದಾನ ದಾಖಲಾಗಿತ್ತು. ಅಂದಿನ ಸಾರ್ವತ್ರಿಕ ಚುನಾವಣೆ ವೇಳೆ, ಮತದಾರರು ಹಕ್ಕು ಚಲಾಯಿಸಿದ ಅಪರೂಪದ ಚಿತ್ರವಿದು.

Advertisement

Udayavani is now on Telegram. Click here to join our channel and stay updated with the latest news.

Next