Advertisement

ಪರ್ಯಾಯ ಸರ್ಕಾರಕ್ಕಿಂತ ಮಧ್ಯಂತರ ಚುನಾವಣೆಯೇ ಬಿಜೆಪಿ ಚಿಂತನೆಯಾಗಿತ್ತು

10:45 PM Jul 23, 2019 | Team Udayavani |

ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರ ಪತನವಾದರೆ ಪರ್ಯಾಯ ಸರ್ಕಾರ ರಚನೆಗಿಂತ ಮಧ್ಯಂತರ ಚುನಾವಣೆ ಎದುರಿಸುವುದು ಬಿಜೆಪಿ ವರಿಷ್ಠರ ಚಿಂತನೆಯಾಗಿತ್ತು. ಆದರೆ, ಬಿಜೆಪಿ ಶಾಸಕರು ಚುನಾವಣೆ ಎದುರಿಸುವ ಮನಸ್ಥಿತಿಯಲ್ಲಿಲ್ಲದ ಕಾರಣ 224 ಕ್ಷೇತ್ರಗಳ ಚುನಾವಣೆಗಿಂತ 20-25 ಕ್ಷೇತ್ರದ ಉಪಚುನಾವಣೆಯೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು.

Advertisement

ಬಿಜೆಪಿ 105 ಶಾಸಕ ಬಲ ಹೊಂದಿದ್ದು, ಸರಳ ಬಹುಮತಕ್ಕೆ 8 ಶಾಸಕರ ಕೊರತೆ ಇದೆ. ಪಕ್ಷೇತರ ಇಬ್ಬರು ಶಾಸಕರನ್ನು ಸೆಳೆದರೆ ಆರು ಶಾಸಕರ ಬೆಂಬಲವಷ್ಟೇ ಅಗತ್ಯವಿತ್ತು. ಹಾಗಾಗಿ, ಸಾರ್ವತ್ರಿಕ ಚುನಾವಣೆಗಿಂತ ಉಪಚುನಾವಣೆಯೇ ಸೂಕ್ತ ಎಂಬ ನಿಲುವನ್ನು ಬಿಜೆಪಿ ವರಿಷ್ಠರು ಕೈಗೊಂಡರು. ಆ ಬಳಿಕವಷ್ಟೇ ಆಡಳಿತ ಪಕ್ಷಗಳ ಶಾಸಕರ ರಾಜೀನಾಮೆ ಸರಣಿ ಶುರುವಾಯಿತು ಎಂದು ಮೂಲಗಳು ಹೇಳಿವೆ.

ಕಳೆದ 2018ರ ರಾಜ್ಯ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ 104 ಶಾಸಕರು ಆಯ್ಕೆಯಾದರೂ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಬಿಜೆಪಿಗೆ ಇರಲಿಲ್ಲ. ಹಾಗಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫ‌ಲರಾದರು. ನಂತರ ಮೈತ್ರಿ ಸರ್ಕಾರ ರಚನೆಯಾಯಿತು. ನಂತರ ಮೈತ್ರಿ ಪಕ್ಷಗಳ ನಾಯಕರಲ್ಲಿ ಒಳಜಗಳ, ಭಿನ್ನಾಭಿಪ್ರಾಯ, ಒಡಕಿನ ಮಾತು ಕೇಳಿ ಬರಲಾರಂಭಿಸಿದಂತೆ ಬಿಜೆಪಿಯಲ್ಲೂ ಸರ್ಕಾರ ರಚನೆಯ ಆಸೆಗೆ ಜೀವ ಬಂದಿತ್ತು.

ಮಧ್ಯಂತರ ಚುನಾವಣೆಗೆ ಒಲವಿತ್ತು: ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಬಿಜೆಪಿ ಪರವಾದ ಅಲೆ ಸೃಷ್ಟಿಯಾದಂತೆ ಕಾಣಲಾರಂಭಿಸಿತ್ತು. ಸತತ ಎರಡನೇ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಸುಸ್ಥಿರ ಸರ್ಕಾರ ರಚಿಸಿದರೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ರಚನೆಗೆ ಪ್ರಯತ್ನ ನಡೆಯುವ ಸುಳಿವು ಸಿಕ್ಕಿತ್ತು. ಒಂದೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ, ರಾಜ್ಯದಲ್ಲೂ ಬಿಜೆಪಿ ಹೆಚ್ಚು ಸ್ಥಾನ ಪಡೆದರೆ ಮೈತ್ರಿ ಪಕ್ಷಗಳಲ್ಲಿ ಭಿನ್ನಮತ ಮೂಡುವುದು ಸಹಜವಾಗಿತ್ತು. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಪರ್ಯಾಯ ಸರ್ಕಾರ ರಚನೆಗಿಂತ ಮಧ್ಯಂತರ ಚುನಾವಣೆಗೆ ಹೋಗಿ ಐದು ವರ್ಷಗಳ ಸುಸ್ಥಿರ ಸರ್ಕಾರ ರಚಿಸುವುದು ವರಿಷ್ಠರ ಇರಾದೆಯಾಗಿತ್ತು.

ಮಾನಸಿಕವಾಗಿ ಸಿದ್ಧವಾಗದ ಬಿಜೆಪಿ: ಆದರೆ, ಬಿಜೆಪಿಯ ಬಹುತೇಕ ಶಾಸಕರು ಮಧ್ಯಂತರ ಚುನಾವಣೆಗೆ ಹೋಗಲು ಮಾನಸಿಕವಾಗಿ ಸಿದ್ಧರಾಗಿರಲಿಲ್ಲ. ಐದು ವರ್ಷಕ್ಕೆ ಜನ ಆಯ್ಕೆ ಮಾಡಿರುವಾಗ ಕೇವಲ 13 ತಿಂಗಳಷ್ಟೇ ಮುಗಿದಿರುವಾಗ ಚುನಾವಣೆಗೆ ಹೋಗುವುದು ಸರಿಯಲ್ಲ. ಜತೆಗೆ ಅಷ್ಟೂ ಮಂದಿ ಮತ್ತೆ ಗೆದ್ದು ಬರುವ ವಿಶ್ವಾಸವಿಲ್ಲದಿದ್ದುದು ಶಾಸಕರ ಹಿಂಜರಿಕೆಗೆ ಕಾರಣವಾಗಿತ್ತು. ಹಾಗಾಗಿ ಮೈತ್ರಿ ಸರ್ಕಾರದ ಸಂಖ್ಯಾಬಲ ಕಳೆದುಕೊಂಡರೆ, ಪರ್ಯಾಯ ಸರ್ಕಾರ ರಚಿಸಿದರೆ ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ಕಮಲ ಸರ್ಕಾರ ಅರಳಿದಂತಾಗಲಿದೆ ಎಂಬ ಸಮಜಾಯಿಷಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

ಉಪಚುನಾವಣೆಯೇ ಸೂಕ್ತ: ಒಂದೊಮ್ಮೆ ಮೈತ್ರಿ ಸರ್ಕಾರ ಪತನವಾಗಬೇಕಾದರೆ ಸಂಖ್ಯಾಬಲ ಇಳಿಕೆಯಾಗಬೇಕು. ಆಡಳಿತ ಪಕ್ಷಗಳ 10ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿದರಷ್ಟೇ ಸಂಖ್ಯಾಬಲ ಇಳಿಕೆಯಾಗಲಿದೆ. ಹೀಗಾಗಿ, ಮಧ್ಯಂತರ ಚುನಾವಣೆ ಘೋಷಣೆಯಾಗಿ 224 ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸುವುದಕ್ಕಿಂತ ಆಯ್ದ ಕ್ಷೇತ್ರಗಳಿಗೆ ಉಪಚುನಾವಣೆಗೆ ಸಜ್ಜಾಗುವುದೇ ಸೂಕ್ತ ಎಂಬ ಬಗ್ಗೆ ಚರ್ಚೆಯಾಯಿತು. ಆ ನಂತರವಷ್ಟೇ ಇತರ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಿತು ಎಂದು ಹೇಳಿವೆ.

ಹಿಂದೆಯೇ ಮುನ್ಸೂಚನೆ!: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನ ಬಾಕಿಯಿದ್ದಾಗ ರಾಜ್ಯ ಬಿಜೆಪಿಯ ಸಂಘಟನಾ ವಿಭಾಗದ ಉನ್ನತ ನಾಯಕರೊಬ್ಬರು ಅನೌಪಚಾರಿಕವಾಗಿ ಚರ್ಚಿಸುವಾಗ ಲೋಕಸಭಾ ಚುನಾವಣೆ ಫ‌ಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುವ ಮುನ್ಸೂಚನೆ ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಮತ್ತೂಮ್ಮೆ ಸರ್ಕಾರ ರಚಿಸಿದರೆ ರಾಜ್ಯ ಸೇರಿದಂತೆ ದೇಶದಲ್ಲೂ ಸಾಕಷ್ಟು ಬದಲಾವಣೆಗಳಾಗಲಿವೆ.

ರಾಜ್ಯದಲ್ಲೂ ಹೆಚ್ಚು ಲೋಕಸಭಾ ಸ್ಥಾನ ಗೆದ್ದರೆ ಮೈತ್ರಿ ಸರ್ಕಾರವೂ ಅಸ್ಥಿರವಾಗುವ ಸಾಧ್ಯತೆ ಇದೆ. 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದರೆ ಮೈತ್ರಿ ಪಕ್ಷಗಳಿಗೆ ಜನಾದೇಶವಿಲ್ಲ ಎಂಬುದು ಸಾಬೀತಾಗುತ್ತದೆ. ಆಗ ಆಡಳಿತ ಪಕ್ಷಗಳ ಸಾಕಷ್ಟು ಶಾಸಕರು ಅತೃಪ್ತಿಯಿಂದ ಹೊರ ಬರುವ ಸಾಧ್ಯತೆ ಇದ್ದು, ಸಹಜವಾಗಿಯೇ ಮೈತ್ರಿ ಸರ್ಕಾರದ ಸಂಖ್ಯಾಬಲ ಇಳಿಕೆಯಾಗಲಿದೆ. ಕಾದು ನೋಡೋಣ ಎಂದು ಸೂಚ್ಯವಾಗಿ ತಿಳಿಸಿದ್ದರು.

* ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next