Advertisement

ಬಿಜೆಪಿ ಪರಿವರ್ತನಾ ರ್ಯಾಲಿ ವೇಳೆ ಗಲಾಟೆ

08:26 AM Nov 04, 2017 | |

ತುಮಕೂರು: ಬಿಜೆಪಿಯ “ಪರಿವರ್ತನಾ ರ್ಯಾಲಿ’ ಶುಕ್ರವಾರ ತುಮಕೂರು ಜಿಲ್ಲೆಯನ್ನು ಪ್ರವೇಶಿಸಿದ್ದು, ತುರುವೇಕೆರೆ ತಾಲೂಕಿನ ಬಾಣಸಂದ್ರದಲ್ಲಿ ಪರಿವರ್ತನಾ ಯಾತ್ರೆಯ ರಥಕ್ಕೆ ಕಲ್ಲು ತೂರಲಾಗಿದೆ. ಇದರಿಂದಾಗಿ ರಥದ ಗಾಜು ಒಡೆದಿದ್ದು, ಸ್ಥಳದಲ್ಲಿ ಕೆಲ ಕಾಲ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿತ್ತು. 

Advertisement

ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಕಲ್ಪತರು ನಾಡಿನ ಶ್ರೀ ಕ್ಷೇತ್ರ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ 2ನೇ ದಿನದ ರ್ಯಾಲಿ ಆರಂಭಿಸಲಾಯಿತು. ನಂತರ, ತುರುವೇಕೆರೆ, ಚಿಕ್ಕನಾಯಕಹಳ್ಳಿ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಿರಂಗ ಸಭೆ ನಡೆಸಿದ ಬಿಜೆಪಿ ನಾಯಕರು, ಕಾಂಗ್ರೆಸ್‌ ಸರ್ಕಾರದ ವಿರುದ್ದ ಹರಿಹಾಯ್ದರು.

ರಥಕ್ಕೆ ಕಲ್ಲು: ಬಿಜೆಪಿಯಿಂದ ಏರ್ಪಡಿಸಿದ್ದ ಪರಿವರ್ತನಾ ಯಾತ್ರೆಯ ರಥಕ್ಕೆ ಬಿಜೆಪಿ ಅತೃಪ್ತ ಕಾರ್ಯಕರ್ತರೇ ಕಲ್ಲು ಹೊಡೆದದ್ದು ವಿಪರ್ಯಾಸ. ತುರುವೇಕೆರೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಚಿಕ್ಕನಾಯಕನಹಳ್ಳಿಗೆ ತೆರಳುವಾಗ ಬಾಣಸಂದ್ರದಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡ ಡಾ.ಚೌದರಿ ನಾಗೇಶ್‌ ನೇತೃತ್ವದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಅವರ ಕಾರು ತಡೆದರು. ಕಾರಿಗೆ ಅಡ್ಡವಾಗಿ ರಸ್ತೆಯಲ್ಲಿ ಮಲಗಿದರು. ಆದರೂ ಕಾರು ನಿಲ್ಲಿಸದೆ, ಕಾರ್ಯಕರ್ತರೊಂದಿಗೆ ಮಾತನಾಡದೆ ಬಿಎಸ್‌ವೈ ತೆರಳಿದ ಹಿನ್ನೆಲೆಯಲ್ಲಿ ಅತೃಪ್ತಗೊಂಡ ಬಿಜೆಪಿ ಕಾರ್ಯಕರ್ತರು ಮತ್ತು ಕೆಲ ಜೆಡಿಎಸ್‌ ಕಾರ್ಯಕರ್ತರು ಪರಿವರ್ತನಾ ಯಾತ್ರೆಯ ರಥಕ್ಕೆ ಕಲ್ಲು ತೂರಿದರು. ಇದರಿಂದ ರಥದ ಗಾಜು ಒಡೆಯಿತು. ಆದರೂ ಅತೃಪ್ತ ಬಿಜೆಪಿ ಕಾರ್ಯಕರ್ತರ ಆಕ್ರೋಶ ಕಡಿಮೆ ಆಗಿರಲ್ಲಿಲ್ಲ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿ, ರಥ ಮುಂದುವರಿಯಲು ಅನುವು ಮಾಡಿದರು. ಕೇಂದ್ರ ಸಚಿವ ಸದಾನಂದ ಗೌಡ, ಈಶ್ವರಪ್ಪ, ಜಗದೀಶ ಶೆಟ್ಟರ್‌, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಪಟ್ಟಣಕ್ಕೆ ಆಗಮಿಸಿದ ಪರಿವರ್ತನಾ ರ್ಯಾಲಿಯ ರಥವನ್ನು ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಪರಮೇಶ್ವರ್‌ ಸೋಲಲು ಕಾರಣರಾರು?
ತುರುವೇಕೆರೆಯ ಬಯಲು ರಂಗಮಂದಿರದ ಆವರಣದಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಸಾಮರಸ್ಯದಿಂದ ಬಾಳುತ್ತಿದ್ದ ರಾಜ್ಯದ ಜನತೆಯ ಮಧ್ಯೆ ಧರ್ಮ, ಜಾತಿಗಳ ವಿಷ ಬೀಜ ಬಿತ್ತಿ, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಹಿಂದು-ಮುಸ್ಲಿಮರನ್ನು ಬೇರ್ಪಡಿಸಿ ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ಹಗಲು ದರೋಡೆ ಮಾಡುತ್ತಿರುವ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಲು ರಾಜ್ಯದ ಜನ ತೀರ್ಮಾನಿಸಿದ್ದಾರೆಂದು ಕಿಡಿ ಕಾರಿದರು. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಒಂದಾಗಿ ರಾಜ್ಯ ಪ್ರವಾಸ ಮಾಡುವಂತೆ ಸವಾಲು ಹಾಕಿದರು. ಕಳೆದ ಬಾರಿ ಜಿ.ಪರಮೇಶ್ವರ್‌ ಸೋಲಲು ಕಾರಣ ಯಾರು ಎಂಬುದು ಪರಮೇಶ್ವರ್‌ ಅವರಿಗೆ ಗೊತ್ತಿದೆ ಎಂದು ಕುಟುಕಿದರು.

ಸಿದ್ದರಾಮಯ್ಯ ತಮ್ಮ ಮಗನ ವಿರುದ್ಧ ಇರುವ ಪ್ರಕರಣಗಳನ್ನು ಪ್ರಭಾವ ಬಳಸಿ ಖುಲಾಸೆ ಮಾಡಿಸಿಕೊಂಡಿರ
ಬಹುದು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗಾಗಿ ಈ ಎಲ್ಲಾ ಪ್ರಕರಣಗಳ ನೈಜ ತನಿಖೆ ಮಾಡಿಸಿ ಅವರನ್ನು ಜೈಲಿಗಟ್ಟುತ್ತೇನೆ. ಸರ್ಕಾರದಲ್ಲಿ ನಡೆದಿರುವ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆ.

 ●ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next