ಮುಂಬೈ: ಕೆಲವು ದಶಕಗಳಿಂದ ಬಿಜೆಪಿಗೆ ಗರಿಷ್ಠ ಬೆಂಬಲ ನೀಡಿದ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. 2019ರಲ್ಲೂ ಮತದಾರರು ಬಿಜೆಪಿ ಮತ್ತು ಶಿವಸೇನೆ ಮೈತ್ರಿಯನ್ನು ಒಪ್ಪಿ ಕೊಳ್ಳುವ ಮೂಲಕ, ನಂಬಿಕೆ ಉಳಿಸಿಕೊಂಡಿದ್ದಾರೆ. ಅಚ್ಚರಿ ಯೆಂದರೆ ಎನ್‌ಡಿಎ ಮೈತ್ರಿಕೂಟಕ್ಕೆ 2014ರಲ್ಲಿ 41 ಸ್ಥಾನ ಲಭಿಸಿತ್ತು. ಈ ಬಾರಿಯೂ ಅಷ್ಟೇ ಸ್ಥಾನ ಲಭಿಸಿದೆ. ಇನ್ನೂ ವಿಶೇಷವೆಂದರೆ ಎರಡೂ ಪಕ್ಷಗಳು 2014ರಲ್ಲಿ ಗೆದ್ದಷ್ಟೇ ಸ್ಥಾನ ವನ್ನು ಈ ಬಾರಿಯೂ ಗೆದ್ದಿವೆ (ಬಿಜೆಪಿ 23, ಶಿವಸೇನೆ 18)!
ಶಿವಸೇನೆ-ಬಿಜೆಪಿ ಮೈತ್ರಿಸರ್ಕಾರ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದರೂ, ಶಿವಸೇನೆ ಕಳೆದ ಐದೂ ವರ್ಷ ವಿರೋಧ ಪಕ್ಷದಂತೆಯೇ ವರ್ತಿಸಿದೆ. ಪದೇ ಪದೇ ಬಿಜೆಪಿಯನ್ನು ಟೀಕಿಸಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತಳೆದಿದೆ, ಮೈತ್ರಿ ಧರ್ಮವನ್ನು ಉಲ್ಲಂ ಸಿದೆ ಎನ್ನುವುದು ಅದರ ಬೇಸರಕ್ಕೆ ಮೂಲ ಕಾರಣ. ಶಿವಸೇನೆ ವಿರೋಧದ ತೀವ್ರತೆಯನ್ನು ಕಂಡಾಗ ಈ ಬಾರಿ, ಅಲ್ಲಿ ಮೈತ್ರಿ ಕಡಿದುಹೋಗಬಹುದು,
ರಾಜ್ಯಸರ್ಕಾರವೂ ಉರುಳ ಬಹುದು ಎಂಬ ಲೆಕ್ಕಾಚಾರಗಳೆಲ್ಲ ಒಳಗೊಳಗೇ ಶುರು ವಾಗಿತ್ತು. ಈ ಬಾರಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಲೇ ಅಚ್ಚರಿಯೆನ್ನುವಂತೆ ಶಿವಸೇನೆ ಧೋರಣೆ ಬದಲಾಯಿತು. ಎರಡೂ ಪಕ್ಷಗಳು ಮತ್ತೆ ಒಗ್ಗಟ್ಟಾಗಿ ಕಣಕ್ಕಿಳಿದವು. ಭರ್ಜರಿ ಯಶಸ್ಸನ್ನೂ ಗಳಿಸಿದವು. ಇಡೀ ಮಹಾರಾಷ್ಟ್ರದಲ್ಲಿ ಇರುವ ಅತಿದೊಡ್ಡ ಸಮಸ್ಯೆಯೆಂದರೆ ಬರ.
ನೀರಿನ ಕೊರತೆಯಿಂದ ಜನರು ನರಳುತ್ತಿದ್ದಾರೆ. ಅದಕ್ಕೆ ಪರಿಹಾರ ಕಂಡುಹಿಡಿಯಲು ಅಲ್ಲಿನ ಸರ್ಕಾರಗಳಿಗೆ ಸಾಧ್ಯ ವಾಗಿಲ್ಲ. ಅಲ್ಲದೇ ರೈತರ ಆತ್ಮಹತ್ಯೆಯೂ ಇದೆ. ಇವೆಲ್ಲದರ ನಡುವೆ ದೇವೇಂದ್ರ ಫಡ್ನವೀಸ್ ಸರ್ಕಾರದ ಬಗ್ಗೆ ಅಲ್ಲಿ ಬಹಳ ಒಲವೇನು ಇರಲಿಲ್ಲ. ಆದರೂ ಮೋದಿ ಮೇಲಿನ ಅಭಿಮಾನದಿಂದ ಜನರು ಮೈತ್ರಿಕೂಟದ ಕೈಹಿಡಿದರು.
ಗಡ್ಕರಿ, ಸುಪ್ರಿಯಾಗೆ ಜಯ: ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಗಮನ ಸೆಳೆದಿದ್ದ ಕ್ಷೇತ್ರಗಳಲ್ಲಿ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಸ್ಪರ್ಧಿಸಿದ್ಧ ನಾಗ್ಪುರವೂ ಸೇರಿದೆ. ಇಲ್ಲಿ ನಿತಿನ್ ಶ್ರೀರಾಮ್ ಗಡ್ಕರಿ ಗೆಲುವು ಸಾಧಿಸಿದ್ದಾರೆ. ಇನ್ನೊಂದು ಕಡೆ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ, ಬಾರಾಮತಿಯಲ್ಲಿ ಗೆದ್ದಿದ್ದಾರೆ. ದಿವಂಗತ ಗೋಪಿನಾಥ್ ಮುಂಡೆ ಪುತ್ರಿ ಪ್ರೀತಮ್ ಮುಂಡೆ ಬೀಡ್ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದಾರೆ.
ಗೆದ್ದ ಪ್ರಮುಖರು
-ನಿತಿನ್ ಗಡ್ಕರಿ, ನಾಗ್ಪುರ
-ಸುಪ್ರಿಯಾ ಸುಳೆ, ಬಾರಾಮತಿ
-ಭಾವನಾ ಪುಂಡಲೀಕರಾವ್, ಯಾವತ್ಮಲ್ ವಶಿಮ್
-ಡಾ.ಶ್ರೀಕಾಂತ್ ಶಿಂಧೆ, ಕಲ್ಯಾಣ್
-ಗೋಪಾಲ್ ಶೆಟ್ಟಿ, ಮುಂಬೈ ಉತ್ತರ
ಸೋತ ಪ್ರಮುಖರು
-ದತ್ ಪ್ರಿಯಾ ಸುನೀಲ್, ಮುಂಬೈ ಕೇಂದ್ರ
-ಮಿಲಿಂದ್ ದೇವ್ರಾ, ಮುಂಬೈ ದಕ್ಷಿಣ
-ರಾಣಾ ಜಗಜಿತ್ ಸಿನ್ಹಾ, ಒಸ್ಮಾನಾಬಾದ್
-ಊರ್ಮಿಳಾ ಮಾತೋಂಡ್ಕರ್,
-ಮುಂಬೈ ಉತ್ತರ
-ಅಹಿರ್ ಹನ್ಸರಾಜ್, ಚಂದ್ರಾಪುರ
ಒಮ್ಮೆ ಫಲಿತಾಂಶ ಪ್ರಕಟವಾದ ಮೇಲೆ ನಾನು ಇವಿಎಂ ಮೇಲೆ ಗೂಬೆ ಕೂರಿಸಲು ಕೂರಿಸಲು ಹೋಗುವುದಿಲ್ಲ. ಅದನ್ನು ಗೌರವಯುತವಾಗಿ ಒಪ್ಪಿಕೊಳ್ಳುತ್ತೇನೆ. ಬಿಜೆಪಿಯ ಈ ಪರಿಯ ಯಶಸ್ಸನ್ನು ಊಹಿಸಿರಲಿಲ್ಲ.
-ಶರದ್ ಪವಾರ್ ಎನ್‌ಸಿಪಿ ನಾಯಕ
ಮೋದಿಯನ್ನು ಎದುರಿಸಲು ಯಾರಿಗೂ ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಇಡೀ ದೇಶವೇ ಒಪ್ಪಿಕೊಳ್ಳಬೇಕಿದೆ. ಗುರುವಾರದ ಫಲಿತಾಂಶ ಅದನ್ನು ಸಾಬೀತು ಮಾಡಿದೆ. ಮೋದಿಯ ಬಗ್ಗೆ ಸೃಷ್ಟಿಸಲಾಗಿದ್ದ ಸುಳ್ಳುಗಳೆಲ್ಲ ಕಳಚಿಕೊಂಡಿವೆ.
-ಸಂಜಯ್ ರಾವತ್, ಶಿವಸೇನಾ ಸಂಸದ