Advertisement

ಅತೃಪ್ತರ ಮುಂದಿನ ನಡೆಗೆ ಕಾದಿದೆ ಬಿಜೆಪಿ

06:35 AM Jun 07, 2018 | Team Udayavani |

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ನಿರೀಕ್ಷೆಯಂತೆ ಎರಡೂ ಪಕ್ಷಗಳಲ್ಲಿ ಭುಗಿಲೆದ್ದಿರುವ ಅಸಮಾಧಾನ ಯಾವ ಸ್ವರೂಪ ಪಡೆಯಲಿದೆ ಎಂಬುದರ ಬಗ್ಗೆ ಕಾದು ನೋಡಲು ಪ್ರತಿಪಕ್ಷ ಬಿಜೆಪಿ ನಿರ್ಧರಿಸಿದೆ.

Advertisement

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಸಚಿವಗಿರಿ ಸಿಗದೆ ಅಸಮಾಧಾನಗೊಂಡವರು ತಾವಾಗಿಯೇ ಸಂಪರ್ಕಿಸಿದರೆ ಮಾತ್ರ ಮಾತುಕತೆ ಮುಂದುವರಿಸುವ ಲೆಕ್ಕಾಚಾರ ಬಿಜೆಪಿಯದಾಗಿದೆ.

ಆಪರೇಷನ್‌ ಕಮಲ ಕಾರ್ಯಾಚರಣೆಗೆ ಒಳಗಾಗಲಿದ್ದಾರೆ ಎಂದೇ ಹೇಳಲಾಗಿದ್ದ  ಬಿ.ಸಿ.ಪಾಟೀಲ್‌ , ಆನಂದ್‌ಸಿಂಗ್‌, ನಾಗೇಂದ್ರ, ಪ್ರತಾಪಗೌಡ ಪಾಟೀಲ್‌ ಹಾಗೂ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಪಕ್ಷೇತರ ಅಭ್ಯರ್ಥಿ ನಾಗೇಶ್‌ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದರಿಂದ ಅವರ ನಿರ್ಧಾರ ಏನು ಎಂಬುದನ್ನು ಗಮನಿಸುತ್ತಿದೆ.

ಜತೆಗೆ, ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್‌, ಎಚ್‌.ಕೆ.ಪಾಟೀಲ್‌ ಹಾಗೂ  ಈಶ್ವರ್‌ ಖಂಡ್ರೆ, ಎಂ.ವೈ.ಪಾಟೀಲ್‌, ಎಂ.ಟಿ.ಬಿ.ನಾಗರಾಜ್‌, ಸತೀಶ್‌ ಜಾರಕಿಹೊಳಿ ಅವರ ನಡೆ ಏನು ಎಂಬುದನ್ನೂ ಬಿಜೆಪಿ ಕುತೂಹಲದಿಂದ ನೋಡುತ್ತಿದೆ ಎಂದು ಹೇಳಲಾಗಿದೆ.

ಜೆಡಿಎಸ್‌ನಲ್ಲೂ ಸಚಿವಗಿರಿ ಸಿಗದೆ ಜಿ.ಕೆ.ಕೃಷ್ಣಾರೆಡ್ಡಿ, ಎಚ್‌.ವಿಶ್ವನಾಥ್‌, ಶ್ರಿನಿವಾಸಗೌಡ, ಎ.ಟಿ.ರಾಮಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ, ಸಿರಾ ಸತ್ಯನಾರಾಯಣ ಅಸಮಾಧಾನಗೊಂಡಿದ್ದರೂ ಪಕ್ಷದ ವಿರುದ್ಧ ಮಾತನಾಡುತ್ತಿಲ್ಲ. ಹೀಗಾಗಿ, ಅವರ ತೀರ್ಮಾನ ಏನಾಗಿರಬಹುದು ಎಂಬುದರ ಬಗ್ಗೆಯೂ ಬಿಜೆಪಿ ಆಪ್ತ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

Advertisement

ಜೆಡಿಎಸ್‌ನಲ್ಲಿ ಯಾರೂ ಪಕ್ಷ ಬಿಡುವ ಅಥವಾ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ,  ಒಂದೊಮ್ಮೆ ಅಸಮಾಧಾನ ಸ್ಫೋಟಗೊಂಡರೆ ಕಾಂಗ್ರೆಸ್‌ ಅತೃಪ್ತರೇ ಬಿಜೆಪಿಯತ್ತ ಬರಬಹುದು. ಆದರೆ, ಆ ರೀತಿ ಬರುವವರ ಸಂಖ್ಯೆ 20 ದಾಟಿದರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಕನಸು ಕಾಣಲು ಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌, ಎಚ್‌.ಕೆ.ಪಾಟೀಲ್‌, ಸತೀಶ್‌ ಜಾರಕಿಹೊಳಿಗೆ ಅಸಮಾಧಾವಾಗಿದ್ದರೂ ಪಕ್ಷದ ವಿರುದ್ಧ ಹೋಗುವುದು ಕಷ್ಟ. ಹೀಗಾಗಿ, ಆಪರೇಷನ್‌ ಕಮಲವೂ ಕಷ್ಟ ಎಂದೂ ಹೇಳಲಾಗುತ್ತಿದೆ.

ಒಟ್ಟಾರೆ, ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟ  ವಿಸ್ತರಣೆಯಿಂದ ಭುಗಿಲೇಳುವ ಅಸಮಾಧಾನದ ಪ್ರಮಾಣ ಹಾಗೂ ತೀವ್ರತೆ ನೋಡಿ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದೆ. ಆತುರದಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಿರುವಂತೆಯೂ ಕೇಂದ್ರದ ಬಿಜೆಪಿ ನಾಯಕರು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ಎಸ್‌. ಈಶ್ವರಪ್ಪ, ಶ್ರೀರಾಮುಲು, ಸಿ.ಎಂ.ಉದಾಸಿ ಅವರಿಗೆ ಅತೃಪ್ತರ ಬಗ್ಗೆ ಮಾಹಿತಿ ಕೆಲ ಹಾಕುವ ಜವಾಬ್ದಾರಿ 
ನೀಡಲಾಗಿದೆ ಎನ್ನಲಾಗಿದೆ. 

ಅನ್ಯಾಯದ “ಅಸ್ತ್ರ’ ಬಳಸಲು ಚಿಂತನೆ
ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅದರಲ್ಲೂ ಲಿಂಗಾಯಿತ ಸಮುದಾಯಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಕ್ಕಿಲ್ಲ. ಕುರುಬ ಸಮುದಾಯಕ್ಕೂ ನ್ಯಾಯ ಸಿಕ್ಕಿಲ್ಲ. ದಲಿತ ಸಮುದಾಯದ  ಎಡಗೈ ಪಂಗಡಕ್ಕೂ ಅವಕಾಶ ಕೊಟ್ಟಿಲ್ಲ ಎಂಬುದನ್ನೂ ಪ್ರಮುಖವಾಗಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಬಿಜೆಪಿ ಚಿಂತನೆ ನಡೆಸಿದೆ. ಸಮ್ಮಿಶ್ರ ಸರ್ಕಾರ ಬೀಳಿಸಲು ಸಾಧ್ಯವಾಗದಿದ್ದರೂ ಮುಂದಿನ ಲೋಕಸಭೆ ಚುನಾವಣೆಗೆ ಇದೇ “ಅಸ್ತ್ರ’ ಮುಂದಿಟ್ಟು ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಕಾರ್ಯಯೋಜನೆ ರೂಪಿಸಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next