Advertisement

ಬಿಜೆಪಿ ದೇಶದ ವೈವಿಧ್ಯವನ್ನು ಹಾಳುಗೆಡಹುತ್ತಿದೆ: ಸತೀಶ್ಚಂದ್ರನ್‌

12:50 AM Jan 30, 2019 | Team Udayavani |

ಮಂಜೇಶ್ವರ: ಭಾತೃತ್ವ, ವೈವಿಧ್ಯಕ್ಕೆ ಹೆಸರಾದ ಭಾರತ ದೇಶದಲ್ಲಿ ಅಲ್ಪಸಂಖ್ಯಾಕರ ವಿರುದ್ಧ ನಿರಂತರ ದಬ್ಟಾಳಿಕೆ, ಆಕ್ರಮಣಗಳು ಎಗ್ಗಿಲ್ಲದೆ ಸಾಗಿವೆೆ. ದೇಶವನ್ನಾಳುತ್ತಿರುವ ಬಿಜೆಪಿ ಮೈತ್ರಿಕೂಟವು ದೇಶದ ವಿವಿಧತೆಯನ್ನು ಹಾಳುಗೆಡಹುತ್ತಿದೆ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಕೆ.ಪಿ. ಸತೀಶ್ಚಂದ್ರನ್‌ ಆರೋಪಿಸಿದರು.
ಸಿಪಿಎಂ ಜಿಲ್ಲಾ ಸಮಿತಿ ಜಿಲ್ಲೆಯಾದ್ಯಂತ ಹಮ್ಮಿಕೊಂಡ ಮೂರು ದಿನಗಳ ಜನ ಜಾಗೃತಿ ಯಾತ್ರೆಯನ್ನು ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಗೋ ರಾಜಕೀಯ, ದೇಶವನ್ನು ಧರ್ಮದ ಆಧಾರದಲ್ಲಿ ಒಡೆದು ಆಳುವ ನೀತಿ ಬಿಜೆಪಿ ಪಕ್ಷದ್ದಾಗಿದೆ. ಕೋಮು ರಾಜಕೀಯದ ಮೂಲಕ ಧ್ರುವೀಕರಣ ಮಾಡುವ ಕುತಂತ್ರವು ಹೆಚ್ಚು ಕಾಲ ಬಾಳದು ಎಂದು ಅವರು ಹೇಳಿದರು. ಈ ಹಿಂದೆ 21 ರಾಜ್ಯಗಳಲ್ಲಿ ತಮ್ಮದೇ ಸರಕಾರವೆಂದು ಬೀಗುತ್ತಿದ್ದ ಪಕ್ಷವು ಕಳೆದ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಸೋತಿದೆ ಎಂದರು. ತ್ರಿಪುರ ಎಂಬ ಪುಟ್ಟ ರಾಜ್ಯದಲ್ಲಿ ಸಿಪಿಎಂ ಪಕ್ಷಕ್ಕೆ ಸೋಲಾಗಿರಬಹುದು. ಆದರೆ ಆ ಸೋಲು ಸೋಲಲ್ಲ ಬದಲಾಗಿ ಕಾಂಗ್ರೆಸ್‌-ಬಿಜೆಪಿ ಜತೆಗೂಡಿ ಮಾಡಿರುವ ಷಡ್ಯಂತ್ರವಾಗಿದೆ ಎಂದರು. 

ಯೋಗಿ ಆದಿತ್ಯನಾಥ್‌ ಆಳುತ್ತಿರುವ ಉತ್ತರ ಪ್ರದೇಶದಲ್ಲೂ ರಾಜಕೀಯ ವಸ್ತುಸ್ಥಿತಿ ಬದಲಾಗುತ್ತಿದೆ. ಈ ಹಿಂದೆ ಬಿಜೆಪಿ ತನ್ನ ತೋಳ್ಬಲ, ಧನ ಬಲದ ಮೂಲಕ ಸಾಧಿಸಿದ ಜಯ ಪರಾಜಯವಾಗಲಿದೆ ಎಂದರು.

ಜಿಲ್ಲೆಯಲ್ಲಿ  ಎಡರಂಗವನ್ನು ಮಣಿಸಲು ಕಾಂಗ್ರೆಸ್‌, ಲೀಗ್‌ ಸಹಿತ ಬಿಜೆಪಿ ಪಕ್ಷ ನಿರಂತರ ಶ್ರಮಿಸುತ್ತಿದೆ. ಆದರೆ ಅದು ಅಸಾಧ್ಯ ಎಂದರು.

ಫೆ. 16ರಂದು ಪಾಲಿಟ್‌ ಬ್ಯೂರೋ ಸದಸ್ಯ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸಾರಥ್ಯದಲ್ಲಿ ಉಪ್ಪಳದಿಂದ ಲೋಕಸಭಾ ಚುನಾವಣಾ ಪ್ರಚಾರ ಜಾಥಾ ಆರಂಭವಾಗಲಿದೆ ಎಂದರು. 

Advertisement

ಮಾಜಿ ಶಾಸಕ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸಿ.ಎಚ್‌. ಕುಞಂಬು ಮಾತನಾಡಿ ಮೂರು ದಿನಗಳ ಕಾಲ ಮುನ್ನಡೆಯುವ ಯಾತ್ರೆಯುದ್ದಕ್ಕೂ ರಾಜ್ಯ ಸರಕಾರದ ಸಾಧನೆ ಮತ್ತು ಪಕ್ಷದ ಸದುದ್ದೇಶವನ್ನು ಜನಸಾಮಾನ್ಯರಿಗೆ ತಿಳಿಸಲಾಗುವುದು ಎಂದರು. 

ಶಬರಿಮಲೆ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸ್ತ್ರೀ ವಿರೋಧಿ ಧೋರಣೆಯನ್ನು ಎತ್ತಿ ಹಿಡಿದಿದೆ.  ಶಬರಿಮಲೆಗೆ ಸ್ತ್ರೀ ಪ್ರವೇಶದ ವಿಚಾರವು ಸಿಪಿಎಂ ಪಕ್ಷದ ಧೋರಣೆಯಲ್ಲ ಅದು ದೇಶದ ಸವೋಚ್ಚ ನ್ಯಾಯಾಲಯದ ತೀರ್ಪಾಗಿದೆ ಎಂದರು.

ಸಿಪಿಎಂ ರಾಜ್ಯ ಸಮಿತಿ ಸದಸ್ಯ ಕೆ.ಪಿ. ಸತೀಶ್ಚಂದ್ರನ್‌ ಯಾತ್ರಾ ನಾಯಕ ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್‌ ಮಾಸ್ತರ್‌ ಅವರಿಗೆ ಧ್ವಜವನ್ನು ಹಸ್ತಾಂತರಿಸಿ ಯಾತ್ರೆಗೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಪಕ್ಷ ನೇತಾರ ಕೆ.ಆರ್‌. ಜಯಾನಂದ, ರಘುದೇವನ್‌ ಮಾಸ್ತರ್‌, ಎಂ. ಶಂಕರ ರೈ ಮಾಸ್ತರ್‌, ಮಾಜಿ ಶಾಸಕ ಕುಂಞರಾಮನ್‌, ಅಬ್ದುಲ್‌ ರಜಾಕ್‌ ಚಿಪ್ಪಾರು, ಮುಹಮ್ಮದ್‌ ಹನೀಫ್‌ ಮೊದಲಾದವರು ಇದ್ದರು.

ರಾಜ್ಯ ಸರಕಾರದಿಂದ ಸಮಗ್ರ ಅಭಿವೃದ್ಧಿ
ರಾಜ್ಯ ಸರಕಾರವು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದೆ. ಜಿಲ್ಲೆಯ ಮಲೆನಾಡು ಹೆದ್ದಾರಿ ಸಹಿತ  ವಿವಿಧ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಒಟ್ಟು 600 ಕೋಟಿ ರೂ. ಮೀಸಲಿಟ್ಟಿದೆ. ಮಲೆನಾಡು ಹೆದ್ದಾರಿ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದ್ದು ಕಾಮಗಾರಿ ಯಥೋಚಿತವಾಗಿ ಮುಂದುವರಿದಿದೆ ಎಂದರು. ರಾಜ್ಯ ಸರಕಾರದ ಮೂಲಕ ನೀಡಲ್ಪಡುವ ವೃದ್ಧಾಪ್ಯ ಸಹಿತ ಫಲಾನುಭವಿಗಳ ಪಿಂಚಣಿಯನ್ನು ಹೆಚ್ಚಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ಪಡೆಯುತ್ತಿದ್ದಾರೆ. ಆದರೆ ಕೇಂದ್ರದ ನರೇಂದ್ರ ಮೋದಿ 15 ಲಕ್ಷ ರೂ. ಗಳ ಬ್ಯಾಂಕ್‌ ಖಾತೆಗೆ ಬೀಳುವ ಹಣದ ಭರವಸೆ ಎಷ್ಟು ಮಂದಿಗೆ ದೊರಕಿ ಈಡೇರಿದೆ ಎಂದು ಪ್ರಶ್ನಿಸಿದರು. ಕಣ್ಣೂರು ವಿಮಾನ ನಿಲ್ದಾಣವು ಕಾಸರಗೋಡು ಜಿಲ್ಲೆಯ ಪೂರಕ ಅಭಿವೃದ್ಧಿಗೂ ರಹದಾರಿಯಾಗಿದೆ ಎಂದು ಸತೀಶ್ಚಂದ್ರನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next