ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳ ಆರೋಪ, ಆಕ್ಷೇಪಗಳನ್ನು ಎದುರಿಸುವ ಜತೆಗೆ ಯಶಸ್ವಿಯಾಗಿ ಕಲಾಪ ನಡೆಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯತಂತ್ರ ಹೆಣೆಯುತ್ತಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ಆರೋಪ, ಅಭಿವೃದ್ಧಿ ಕಾರ್ಯ- ಅನುದಾನ ಹಂಚಿಕೆಯಲ್ಲಿ ತಾರತಮ್ಯ, ವರ್ಗಾವಣೆ, ನಾನಾ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿರುವ ಹಿನ್ನೆಲೆಯಲ್ಲಿ ಕೇಳಿ ಬಂದಿರುವ ದ್ವೇಷ ರಾಜಕಾರಣ ಆರೋಪ, ಸರ್ಕಾರದ ಕಾರ್ಯ ನಿರ್ವಹಣೆ ಬಗ್ಗೆ ಕೇಳಿಬಂದಿರುವ ಅಪಸ್ವರಗಳ ಬಗ್ಗೆ ಪ್ರತಿಪಕ್ಷಗಳು ಮುಗಿಬೀಳುವ ನಿರೀಕ್ಷೆಯಿದೆ.
ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಹಿರಿಯ ನಾಯಕರು ಸಜ್ಜಾಗುತ್ತಿದ್ದಾರೆ. ಜೆಡಿಎಸ್‌ನ ಕೆಲ ಶಾಸಕರ ಅತೃಪ್ತಿ, ಕಾಂಗ್ರೆಸ್ ನಾಯಕರ ಒಳಜಗಳವನ್ನೇ ಪ್ರಸ್ತಾಪಿಸಿ ಪ್ರತಿಪಕ್ಷಗಳ ದನಿ ಅಡಗಿಸಲು ಚಿಂತಿಸಿದ್ದು, ಈ ಸಂಬಂಧ ಬುಧವಾರ ನಡೆಯುವ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ. ನೆರೆ ಪರಿಹಾರ ಸೇರಿ ನಾನಾ ವಿಚಾರಗಳಿಗೆ ಸಂಬಂಧಪಟ್ಟಂತೆ ಆಡಳಿತಾರೂಢ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಮುಂದಾಗಿದ್ದರೆ, ಪ್ರತಿಪಕ್ಷಗಳ ದಿಟ್ಟ ಪ್ರತ್ಯುತ್ತರ ನೀಡಿ ಪ್ರಸಕ್ತ ಸಾಲಿನ ಆಯವ್ಯಯಕ್ಕೆ ಅನುಮೋದನೆ ಪಡೆಯುವ ಲೆಕ್ಕಾಚಾರದಲ್ಲಿ ಸರ್ಕಾರವಿದೆ.
ಆಕ್ಷೇಪ ನಿರೀಕ್ಷೆ: ರಾಜ್ಯದ ನೆರೆ ಪ್ರದೇಶದಲ್ಲಿ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆದಿಲ್ಲ. ಕೇಂದ್ರ ಸರ್ಕಾರ ನೆರೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದ್ದು, ಮಧ್ಯಂತರವಾಗಿ ಬಿಡುಗಡೆ ಮಾಡಿರುವ ಪರಿಹಾರ ಕೂಡ ಕಡಿಮೆ .ಜತೆಗೆ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ. ಹಿಂದಿನ ಸರ್ಕಾರದ ಕೆಲ ಯೋಜನೆ ತಡೆಹಿಡಿಯುವ ಮೂಲಕ ದ್ವೇಷ ರಾಜಕಾರಣ ನಡೆಸಲಾಗುತ್ತಿದೆ.
ರಾಜ್ಯದ ಖಜಾನೆ ಖಾಲಿಯಾಗಿದೆ. ಕೆಲ ಪ್ರಭಾವಿಗಳು ಹಾಗೂ ಅವರ ಸಂಬಂಧಿಗಳು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಿದ್ದ ಅನುದಾನ ಕಡಿತಗೊಳಿಸಿ ಅದನ್ನು ಬಿಜೆಪಿ ಶಾಸಕರು ಹಾಗೂ ಅನರ್ಹತೆಗೊಂಡ ಶಾಸಕರಿಗೆ ನೀಡಿರುವುದನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿ ಬೀಳಬಹುದು ಎಂಬ ನಿರೀಕ್ಷೆಯಿದೆ.
ತಕ್ಕ ಪ್ರತ್ಯುತ್ತರಕ್ಕೆ ಸಿದ್ಧತೆ: ಇದಕ್ಕೆ ಪ್ರತ್ಯುತ್ತರ ನೀಡಲು ಹಿರಿಯ ನಾಯಕರು ಸಿದ್ಧತೆ ನಡೆಸಿದ್ದಾರೆ. ರಾಜ್ಯ ಸರ್ಕಾರ 3,100 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 1,200 ಕೋಟಿ ರೂ. ನೀಡಿದ್ದು, ನೆರೆ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಹಿಂದೆಲ್ಲಾ ಮನೆ ಸಂಪೂರ್ಣ ನಾಶವಾದರೆ 92,000 ರೂ. ಗರಿಷ್ಠ ಪರಿಹಾರ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಿಸಿರುವುದನನು ಸಮರ್ಥಿಸಿಕೊಳ್ಳುವುದು. ಸಚಿವರು ಇಲಾಖಾವಾರು ತಮ್ಮ ಜವಾಬ್ದಾರಿ ನಿರ್ವಹಣೆ ಬಗ್ಗೆ ಸಮರ್ಥನೆ ನೀಡುವುದು. ಹಣಕಾಸು ಅಕ್ರಮ ಆರೋಪ ಪ್ರಕರಣದ ಬಗ್ಗೆ ಇ.ಡಿ. ತನಿಖೆ ನಡೆಸುತ್ತಿದ್ದು, ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಚಿಂತನೆ ನಡೆಸಿದ್ದಾರೆ.
ಶಾಸಕಾಂಗ ಸಭೆಯಲ್ಲಿ ಚರ್ಚೆ: ಅಧಿವೇಶನಕ್ಕೆ ಪೂರ್ವಭಾವಿಯಾಗಿ ಬುಧವಾರ ಶಾಸಕಾಂಗ ಸಭೆ ಕರೆಯಲಾಗಿದೆ. ಪ್ರತಿಪಕ್ಷಗಳ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ನೀಡುವುದು, ಕೇಂದ್ರ ಸರ್ಕಾರದ ನಡೆ ಸಮರ್ಥಿಸಿಕೊಳ್ಳುವುದು, ನೆರೆ ಪರಿಹಾರ ಕಾರ್ಯದಲ್ಲಿ ರಾಜ್ಯ ಸರ್ಕಾರ ವಿಫಲವಾಗಿಲ್ಲ ಎಂದು ಬಲವಾಗಿ ಪ್ರತಿಪಾದಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ವಿಧಾನಮಂಡಲ ಅಧಿವೇಶನಕ್ಕೆ ಸರ್ಕಾರ ಸಿದ್ಧವಾಗಿದೆ. ಪ್ರತಿಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಭಟನೆ, ಪ್ರತಿರೋಧ ತೋರಬಹುದು. ನಾವು ಪ್ರತಿಪಕ್ಷಗಳನ್ನು ಸಮಾಧಾನಪಡಿಸುವುದಿಲ್ಲ. ಸಂತ್ರಸ್ತರು, ಜನರನ್ನು ಸಮಾಧಾನಪಡಿಸಿರುವ ತೃಪ್ತಿ ಇದೆ. ಪ್ರತಿಪಕ್ಷಗಳೊಂದಿಗೆ ಎಲ್ಲ ವಿಚಾರಗಳ ಕುರಿತ ಚರ್ಚೆಗೆ ಸರ್ಕಾರ ಸಿದ್ಧವಿದೆ.
-ಎನ್.ರವಿಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ
* ಎಂ. ಕೀರ್ತಿಪ್ರಸಾದ್