Advertisement
ಕುಂದಗೋಳ ಕ್ಷೇತ್ರವನ್ನು ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡೂ ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿವೆ. ಗೆಲುವನ್ನು ತಮ್ಮದಾಗಿಸಿಕೊಳ್ಳಲು ಸಣ್ಣ, ಸಣ್ಣ ಯತ್ನವನ್ನೂ ಕೈ ಚೆಲ್ಲದೆ, ಎದುರಾಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದಾರೆ. ಎರಡೂ ಕಡೆಯವರು ಅನುಕಂಪದ ದಾಳ ಉರುಳಿಸುತ್ತಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ. ಇಷ್ಟೆಲ್ಲದರ ನಡುವೆಯೂ ಬಿಜೆಪಿಗೆ ಎಲ್ಲೋ ಒಂದು ಸಣ್ಣ ಆತಂಕ ಕಾಡತೊಡಗಿದೆ.
Related Articles
Advertisement
2013ರಲ್ಲಿ ಬಿಜೆಪಿಯ ಇಬ್ಭಾಗದಿಂದಾಗಿ ಬಿಜೆಪಿ-ಕೆಜೆಪಿ ನಡುವಿನ ಸೆಣಸಾಟ ಕಾಂಗ್ರೆಸ್‌ಗೆ ಮತ್ತೆ ಗೆಲುವು ತಂದುಕೊಟ್ಟಿತ್ತು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 52,690 ಮತಗಳನ್ನು ಪಡೆದಿತ್ತು. ಕೆಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರ 31,618 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ 23,641 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸುಮಾರು 21,072 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ.ಎಸ್.ಶಿವಳ್ಳಿ 64,871 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಎಸ್.ಐ.ಚಿಕ್ಕನಗೌಡ್ರ 64,237 ಮತಗಳನ್ನು ಪಡೆದು ಕೇವಲ 634 ಮತಗಳ ಅಂತರದಿಂದ ಸೋಲು ಕಂಡಿದ್ದರು. ಈ ಸಮರದಲ್ಲಿ ಬಿಜೆಪಿಗೆ ಎದುರಾಳಿ ನಡೆಸಿದ ಸೆಣಸಾಟದ ಸಾಮರ್ಥ್ಯ ಎಷ್ಟು, ಪಕ್ಷದೊಳಗಿನ ಒಳಹೊಡೆತದ ಪೆಟ್ಟಿನ ನೋವು ಎಷ್ಟು ಎಂಬುದು ಬಿಜೆಪಿಯವರ ಮನದಲ್ಲಿ ಈಗಲೂ ಸುಳಿದಾಡುತ್ತಿದೆ.
ಮನಸ್ಸುಗಳು ಒಡೆದಿವೆ: ಕುಂದಗೋಳ ಕ್ಷೇತ್ರದಲ್ಲಿ ಇಬ್ಬರು ಮುಖಂಡರ ನಡುವಿನ ಹಲವು ವರ್ಷಗಳ ಆಂತರಿಕ ತಿಕ್ಕಾಟ ತಳಮಟ್ಟದ ಕಾರ್ಯಕರ್ತರ ಹಂತದವರೆಗೂ ತನ್ನದೇ ಪರಿಣಾಮ ಬೀರಿದೆ. ಗ್ರಾಮ ಮಟ್ಟದಲ್ಲಿ ಮನಸ್ಸುಗಳು ಸುಲಭವಾಗಿ ಒಂದಾಗಲಾರದಷ್ಟು ದೂರವಾಗಿವೆ. ನಮ್ಮ ನಾಯಕರಿಗೆ ಅವರಿಂದ ಅನ್ಯಾಯವಾಗಿದೆ ಎಂದು ಇವರು, ಇವರಿಂದ ಅನ್ಯಾಯವಾಗಿದೆ ಎಂದು ಅವರು, ಹೀಗೆ ಎರಡೂ ಕಡೆಯ ಕಾರ್ಯಕರ್ತರು ನಮಗೆ ಅನ್ಯಾಯವಾಗಿದೆ,
ಸಹಿಸಿಕೊಳ್ಳುವುದು ಹೇಗೆ ಎಂಬ ಆಕ್ರೋಶವನ್ನು ಆಂತರಿಕವಾಗಿ ಹೊರ ಹಾಕುತ್ತಿದ್ದಾರೆ. ಇದು ಗುಪ್ತಗಾಮಿನಿಯಾಗಿ ಕ್ಷೇತ್ರದಾದ್ಯಂತ ಸುಳಿದಾಡುತ್ತಿದೆ. ಇಬ್ಬರು ಮುಖಂಡರು ಭಿನ್ನಮತ ಮರೆತಿದ್ದೇವೆ, ನಾವಿಬ್ಬರೂ ಒಂದಾಗಿದ್ದೇವೆ, ನಮ್ಮಲ್ಲಿ ಯಾವುದೇ ತಿಕ್ಕಾಟವಿಲ್ಲ ಎಂದು ಕೈ ಕೈ ಹಿಡಿದು ಕ್ಷೇತ್ರದಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಆದರೆ, ತಳಮಟ್ಟದ ಕಾರ್ಯಕರ್ತರ ಮನಸ್ಸು ಒಂದಾಗಿದೆಯೇ, ಪಕ್ಷದ ಅಭ್ಯರ್ಥಿ ಪರವಾಗಿ ಬದ್ಧವಾಗಿ ಕಾರ್ಯ ನಿರ್ವಹಿಸುವ ಕೆಲಸ ಆಗುತ್ತಿದೆಯೇ? ಈ ಕುರಿತ ಗ್ಯಾರಂಟಿ ಇನ್ನೂ ಮೂಡುತ್ತಿಲ್ಲ.
ಖಡಕ್ ಎಚ್ಚರಿಕೆ ನೀಡಿದ ನಾಯಕರು: ಪಕ್ಷದೊಳಗಿನ ಆಂತರಿಕ ತಿಕ್ಕಾಟ ಬೇರುಮಟ್ಟಕ್ಕಿಳಿದಿದ್ದು ಈಗಲೂ ಅದು ತನ್ನದೇ ನಿಲುವಿನಿಂದ ಹೊರಬಂದಿಲ್ಲ ಎಂಬ ಸತ್ಯ ಅರಿತೇ ಬಿಜೆಪಿಯ ವಿವಿಧ ನಾಯಕರು ಹಾಗೂ ಮುಖಂಡರು ಪಕ್ಷದ ಕಾರ್ಯಕರ್ತರಿಗೆ ಹಿಂದಿನ ತಿಕ್ಕಾಟ, ಸಿಟ್ಟುಗಳನ್ನು ಬದಿಗಿರಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕುಂದಗೋಳ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಸೆಣಸಲು, ವಿರೋಧ ಪಕ್ಷವಾಗಿ ಸರ್ಕಾರವನ್ನು ಮಣಿಸಲೇಬೇಕೆಂಬ ಛಲದೊಂದಿಗೆ ತನ್ನ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಂಘಟಿತ ಧ್ವನಿಯನ್ನು ಬಿಜೆಪಿ ಮೊಳಗಿಸಬೇಕಾಗಿದೆ. ಆದರೆ, ಈಗಲೂ ಬಿಜೆಪಿಯಲ್ಲಿ ಸಂಘಟಿತ ಧ್ವನಿಯ ಕೊಂಚ ಕೊರತೆ, ಕೆಲವೊಂದು ನಾಯಕರು, ಮುಖಂಡರ ಗೈರು ಹಾಗೂ ಕೆಲವು ನಾಯಕರು ಸಕ್ರಿಯತೆ ತೋರದಿರುವುದು ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನಿಸುತ್ತಿದೆ.
* ಅಮರೇಗೌಡ ಗೋನವಾರ