Advertisement

ಬಿಜೆಪಿ ಭದ್ರಕೋಟೆಯಲ್ಲಿ ವಲಸಿಗರದೇ ಪ್ರಾಬಲ್ಯ

12:22 PM Mar 22, 2018 | Team Udayavani |

ಬೆಂಗಳೂರು: ವಲಸಿಗರಿಂದಲೇ ತುಂಬಿರುವ ಬಿಜೆಪಿಯ ಭದ್ರಕೋಟೆಯಾಗಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಕಳೆದ ಇಪ್ಪತ್ತೈದು ವರ್ಷಗಳಿಂದ ಕಮಲದ ತೆಕ್ಕೆಯಲ್ಲಿದ್ದು, ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಜೆಡಿಎಸ್‌ ಮತ್ತು ಕಾಂಗ್ರೆಸ್‌ನಿಂದ ಸಾಧ್ಯವಾಗಿಲ್ಲ.

Advertisement

ಕ್ಷೇತ್ರ ಪುನರ್‌ ವಿಂಗಡನೆಗೂ ಮೊದಲು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ದಾಸರಹಳ್ಳಿ 2008 ರಲ್ಲಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿ ರೂಪುಗೊಂಡಿತು. 1994 ರಿಂದ ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್‌ ಅವರ ಕೈಯಲ್ಲಿದ್ದ ಈ ಕ್ಷೇತ್ರ ಪುನರ್‌ ವಿಂಗಡನೆ ನಂತರ ಬಿಜೆಪಿಯ ಎಸ್‌. ಮುನಿರಾಜು ಅವರು ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಶೇಕಡಾ 95 ರಷ್ಟು ಹೊರಗಿನವರಿಂದಲೇ ತುಂಬಿರುವ ಕ್ಷೇತ್ರದಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ಹೊಂದಿರುವ ಪಿಣ್ಯಾ ಕೈಗಾರಿಕಾ ವಲಯದ ವ್ಯಾಪ್ತಿಯನ್ನು ಪ್ರದೇಶದಲ್ಲಿ ವ್ಯಾಪಿಸಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ  ಬಿಡಿಎಯಿಂದ ಒಪ್ಪಿಗೆ  ಪಡೆದಿರುವ ಎಚ್‌ಎಂಟಿ ಬಡವಾಣೆ ಹೊರತು ಪಡಿಸಿದರೆ ಉಳಿದೆಲ್ಲ ಕ್ಷೇತ್ರವೂ ಕಂದಾಯ ಬಡಾವಣೆಗಳೇ ಇವೆ. ಸೋಮಶೆಟ್ಟಿ ಹಳ್ಳಿ ಹಾಗೂ ಚಿಕ್ಕಬಾಣಾವರ ಗ್ರಾಪಂಗಳೂ, ಎರಡು ತಾಪಂ ಈ ಕ್ಷೇತ್ರದಲ್ಲಿದೆ. 

ಗಾರ್ಮೆಂಟ್‌ ನೌಕರರು ಈ ಕ್ಷೇತ್ರದಲ್ಲಿ ಹೆಚ್ಚು. ಹೆಗ್ಗನಹಳ್ಳಿ, ರಾಜಗೋಪಾಲ ನಗರ ಹಾಗೂ ಪಿಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಿಂದ ಬರುವ ವಾಹನಗಳು ಬೆಂಗಳೂರು ಪ್ರವೇಶಿಸಲು ದಾಸರಹಳ್ಳಿ ಕ್ಷೇತ್ರವೇ ಹೆಬ್ಟಾಗಿಲಾಗಿದ್ದು, ಎನ್‌ಎಚ್‌ 4 ರಸ್ತೆ, ಫ್ಲೈ ಓವರ್‌ ಹಾಗೂ ಮೆಟ್ರೊ ಹಾದು ಹೋಗಿದ್ದರೂ, ಚೊಕ್ಕಸಂದ್ರ ವಾರ್ಡ್‌ನಿಂದ ದಾಸರಹಳ್ಳಿ ಸರ್ಕಲ್‌ ಬಳಿ ಸಾಕಷ್ಟು ಟ್ರಾಫಿಕ್‌ ಸಮಸ್ಯೆ ಇದೆ. ಇಲ್ಲಿ ಸ್ಕೈವಾಕ್‌ ಬೇಡಿಕೆ ಹಿಂದಿನಿಂದಲೂ ಇದೆ.

ಕ್ಷೇತ್ರದಲ್ಲಿ ವಿಶಾಲವಾದ ಪಾರ್ಕ್‌ಗಳ ಕೊರತೆ ಇದೆ. ಆದರೆ, ಇರುವ ಜಾಗದಲ್ಲಿ ಹೊಸ ಪಾರ್ಕ್‌ಗಳ ನಿರ್ಮಾಣ ಮಾಡಲಾಗಿದೆ. ದಾಸರಹಳ್ಳಿ, ಕಮ್ಮಗೊಂಡನಹಳ್ಳಿ, ಬಾಗಲಗುಂಟೆ ಹಾಗೂ ಶಿವಪುರ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ನಾಗಸಂದ್ರ ಕೆರೆ ಅಭಿವೃದ್ಧಿಯಾಗಬೇಕಿದೆ. 
ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಮೇಲೆ ಕ್ಷೇತ್ರದಲ್ಲಿ ಒಳ ಚರಂಡಿ ವ್ಯವಸ್ಥೆ, ಕಾವೇರಿ ನೀರು, ರಸ್ತೆಗಳ ನಿರ್ಮಾಣ ಕಾರ್ಯ ನಡೆದಿದೆ. 

Advertisement

ನಾಲ್ಕು ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಒಕ್ಕಲಿಗರದ್ದೇ ನಿರ್ಣಾಯಕ ಪಾತ್ರ. ಜೆಡಿಎಸ್‌ನಲ್ಲಿ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್‌ನಲ್ಲಿ ಹಿಂದೆ ಸ್ಪರ್ಧೆ ಮಾಡಿದ್ದ ಇಬ್ಬರೂ ಅಭ್ಯರ್ಥಿಗಳೂ ಈ ಬಾರಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿಲ್ಲ. ವಿಶೇಷವಾಗಿ ಜೆಡಿಸ್‌ನಿಂದ ಬಂದಿರುವ ತಿಮ್ಮನಂಜಯ್ಯ ಹಾಗೂ ಯುವ ಮುಖಂಡ ಉಮೇಶ್‌ ಬೋರೇಗೌಡ ನಡುವೆ ಪೈಪೋಟಿ ಇದೆ. 

ಶಾಸಕರು ಹೇಳಿದ್ದೇನು ?
ಈ ಕ್ಷೇತ್ರದಲ್ಲಿ ಸರಿಯಾಗಿ ಯೋಜನಾಬದ್ಧ ಬಡಾವಣೆಗಳು ಇಲ್ಲದಿರುವುದರಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಕಷ್ಟು ಸಮಸ್ಯೆ ಇತ್ತು. ಆದರೂ, ಪಾರ್ಕ್‌ಗಳ ಅಭಿವೃದ್ಧಿ, ನಾಲ್ಕು ಕೆರೆಗಳ ಅಭಿವೃದ್ಧಿ ಮಾಡಿದ್ದೇವೆ. ಟ್ರಾಫಿಕ್‌ ಸಮಸ್ಯೆ ಇದೆ. ಹಂತ ಹಂತವಾಗಿ ಮಾಡಲು ಪ್ರಯತ್ನ ನಡೆಸಿದ್ದೇವೆ. ಒಳಚರಂಡಿ ಹಾಗೂ ಅಗತ್ಯವಿದ್ದಲ್ಲಿ ಫ‌ುಟ್‌ಪಾತ್‌ ವ್ಯವಸ್ಥೆ ಸರಿ ಪಡಿಸಿದ್ದೇವೆ.
-ಎಸ್‌. ಮುನಿರಾಜು, ಶಾಸಕ

ಕ್ಷೇತ್ರದಲ್ಲಿ ಬೆಸ್ಟ್‌: ಹೊಸ ಪಾರ್ಕ್‌ಗಳ ಅಭಿವೃದ್ಧಿ ಆಗಿರುವುದು. ಕೆರೆಗಳ ಪುನರುಜ್ಜೀವನಗೊಳಿಸಲಾಗಿದೆ. ಸರ್ಕಾರಿ ಶಾಲೆಗಳಿಗೆ ಹೊಸ ಕಟ್ಟಡಗಳನ್ನು ಕಟ್ಟಿಸಲಾಗಿದೆ. ಇಸ್ರೋ ಕೇಂದ್ರ ಇದ್ದು, ಮಂಗಳಯಾನದ ರಾಕೆಟ್‌ ಉಡಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು.

ಕ್ಷೇತ್ರದ ಸಮಸ್ಯೆ: ಇಕ್ಕಟ್ಟಾದ ರಸ್ತೆಗಳು, ಕಸದ ಸಮಸ್ಯೆ, ಟ್ರಾಫಿಕ್‌ ಸಮಸ್ಯೆ, ಕಳ್ಳತನ ನಿಯಂತ್ರಣಕ್ಕೆ ಬಾರದಿರುವುದು. ನೀರಿನ ಸಮಸ್ಯೆ ಸ್ವತ್ಛತೆ ಇಲ್ಲದಿರುವುದು. ಜೊತೆಗೆ ದಾಸರಹಳ್ಳಿ ಮೆಟ್ರೋಸ್ಟೇಶನ್‌ ಬಳಿ ರಸ್ತೆ ದಾಟಲು ಸ್ಕೈವಾಕ್‌ ಇಲ್ಲದೆ ಜನರು ಪರದಾಟ ನಡೆಸುವುದು.

ಆಕಾಂಕ್ಷಿಗಳು
-ಬಿಜೆಪಿ-ಎಸ್‌. ಮುನಿರಾಜು
-ಕಾಂಗ್ರೆಸ್‌-ತಿಮ್ಮನಂಜಯ್ಯ- ಉಮೇಶ್‌ ಬೋರೇಗೌಡ-ಸೌಂದರ್ಯ ಮಂಜಪ್ಪ
-ಜೆಡಿಎಸ್‌- ಆರ್‌. ಮಂಜುನಾಥ-ಘೋಷಿತ

ಕಳೆದ ಬಾರಿಯ ಫ‌ಲಿತಾಂಶ
-ಎಸ್‌. ಮುನಿರಾಜು-57562
-ಬಿ.ಎಲ್‌.ಶಂಕರ್‌-46,734
-ಅಂದಾನಪ್ಪ-43049

ಕ್ಷೇತ್ರ ಮಹಿಮೆ: ಏಷ್ಯಾದ ಅತಿ ದೊಡ್ಡ ಇಂಡಸ್ಟ್ರೀಯಲ್‌ ಹಬ್‌ ಇದಾಗಿದೆ. ಇಸ್ರೋ ಕೇಂದ್ರವೂ ಇದೇ ಕ್ಷೇತ್ರದಲ್ಲಿದ್ದು, ಗಾರ್ಮೆಂಟ್‌ ಫ್ಯಾಕ್ಟರಿಗಳು ಹೆಚ್ಚಾಗಿವೆ. ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಮೇಲೆ ಕ್ಷೇತ್ರದಲ್ಲಿ ಒಳ ಚರಂಡಿ ವ್ಯವಸ್ಥೆ, ಕಾವೇರಿ ನೀರು, ರಸ್ತೆಗಳ ನಿರ್ಮಾಣ ಕಾರ್ಯ ನಡೆದಿದೆ.

ಬೀದಿದೀಪ ಹಾಕಬೇಕು ಕ್ಷೇತ್ರದಲ್ಲಿ ಒಂದು ಪ್ಲೇಗ್ರೌಂಡ್‌ ಇಲ್ಲ. ಹಾಪ್‌ಕಾಮ್ಸ್‌ ಮಳಿಗೆ ಇಲ್ಲ. ಚೈನ್‌ ಕಳ್ಳರ ಹಾವಳಿ ಹೆಚ್ಚಿದೆ. ಕಾವೇರಿ ನೀರು ವಾರಕ್ಕೆ ಎರಡು ದಿನ ಬರುತ್ತದೆ. ಸ್ವತ್ಛತೆಗೆ ಆದ್ಯತೆ ನೀಡಿಲ್ಲ.
-ನಾಗೇಶ್‌, ಸ್ಥಳೀಯರು

ನಮ್ಮ ಏರಿಯಾದಲ್ಲಿ ಕೆರೆ ಅಭಿವೃದ್ಧಿ ಮಾಡಿ ಕೆರೆ ಸುತ್ತಲೂ ವಾಕ್‌ ಮಾಡಲು ವ್ಯವಸ್ಥೆ ಮಾಡಿದ್ದಾರೆ. ರಸ್ತೆ ಬದಿ ಬೀದಿ ದೀಪಗಳನ್ನು ಅಳವಡಿಸಿದ್ದಾರೆ. ದಾಸರಹಳ್ಳಿ ಮೆಟ್ರೋಸ್ಟೇಶನ್‌ ಬಳಿ ರಸ್ತೆ ದಾಟಲು ಒಂದು ಸ್ಕೈವಾಕ್‌ ಬೇಕಿದೆ.
-ಚಂದ್ರಮೋಹನ್‌, ಸ್ಥಳೀಯರು

ಡ್ರೈನೇಜ್‌ ವ್ಯವಸ್ಥೆ ಚೆನ್ನಾಗಿದೆ. ಕುಡಿಯುವ ನೀರಿನ ಸಮಸ್ಯೆ ಇತ್ತು ಎರಡು ತಿಂಗಳಿನಿಂದ ಕುಡಿಯುವ ನೀರು ಬರುತ್ತಿದೆ. ನಮಗೇನಾದರೂ ಸಮಸ್ಯೆ ಆದರೆ, ಶಾಸಕರಿಗೆ ಕರೆ ಮಾಡುತ್ತೇವೆ. ಸ್ಪಂದಿಸುತ್ತಾರೆ.
-ಮಾಲಿನ್‌ ಬಿ, ಗೃಹಿಣಿ

ಇತ್ತೀಚೆಗೆ ನಮ್ಮ ಏರಿಯಾದಲ್ಲಿ ರೋಡ್‌ಗೆ ಟಾರ್‌ ಹಾಕಿದ್ದಾರೆ. ಆದರೆ, ಮತ್ತೇನೋ ಕಾರಣ ಹೇಳಿ ರಸ್ತೆ ಅಗಿಯುತ್ತಾರೆ. ರಸ್ತೆಗೆ ಬೀದಿ ದೀಪ, ಡ್ರೈನೇಜ್‌ ವ್ಯವಸ್ಥೆ ಸರಿಯಾಗಿದೆ. ಶಾಸಕರು ಆಗಾಗ ಬಂದು ಕೆಲಸ ಮಾಡಿಸುತ್ತಿರುತ್ತಾರೆ.
-ಸಾಧಿಕ್‌, ಸ್ಥಳೀಯರು

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next