ಮೈಸೂರು: “ಬಿಜೆಪಿ ಅವರಿಗೆ ನನ್ನನ್ನು ಕಂಡರೆ ಭಯ. ಹೀಗಾಗಿ ನನ್ನ ವಿರುದ್ಧ ಮಾತನಾಡುತ್ತಾರೆ. ಆದರೆ ನನ್ನನ್ನು ಟಾರ್ಗೆಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತನ್ನನ್ನು ಸೋಲಿಸಲು ಬಿಜೆಪಿ ಶತಾಯಗತಾಯ ಹವಣಿಸುತ್ತಿದೆ. ಹೀಗಾಗಿ ತನ್ನ ರಾಜಕೀಯ ವಿರೋಧಿಗಳೆಲ್ಲಾ ಒಗ್ಗಟ್ಟಾಗಲು ಮುಂದಾಗಿದ್ದಾರೆ. ಈ ಕಾರಣದಿಂದ ಪದೇ ಪದೇ ತನ್ನ ವಿರುದ್ಧ ಮಾತನಾಡುತ್ತಿದ್ದು, ಯಾರಿಂದಲೂ ತನ್ನನ್ನು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ.
ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಹತ್ತಾರು ಎಫ್ಐಆರ್‌ಗಳಿವೆ. ಅವರೇ ಮೊದಲು ಜೈಲಿಗೆ ಹೋಗಬೇಕು. ಜತೆಗೆ ಕೇಂದ್ರದ 20 ಸಚಿವರು, ಸಂಸದರ ವಿರುದ್ಧ ದೂರುಗಳಿವೆ. ಹೀಗಿರುವಾಗ ನಮ್ಮ ರಾಜೀನಾಮೆ ಕೇಳಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು, ನಾವು ಎಂದಿಗೂ ರಾಜೀನಾಮೆ ಕೇಳಿಲ್ಲ, ನಾವು ಅವರಷ್ಟು ಕೀಳುಮಟ್ಟಕ್ಕೆ ಇಳಿದಿಲ್ಲ ಎಂದು ಕಿಡಿಕಾರಿದರು.
ಬೀದರ್-ಕಲಬುರಗಿ ರೈಲು ಯೋಜನೆ ಪ್ರಗತಿ ಕಂಡಿದ್ದು ಯುಪಿ ಸರ್ಕಾರದ ಅವಧಿಯಲ್ಲಿ ಹೊರತು ಬಿಜೆಪಿ ಆಡಳಿತಾವಧಿಯಲ್ಲಿ ಅಲ್ಲ. ರೈಲ್ವೆ ಯೋಜನೆ ಕಾರ್ಯಗತವಾಗಲು ಮಲ್ಲಿಕಾರ್ಜುನ ಖರ್ಗೆ ಅವರ ಪಾತ್ರ ಪ್ರಮುಖವಾಗಿದ್ದು, ಅವರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ನಾಯಕರಿಗೆ ಆರೋಪ ಮಾಡುವುದು ಬಿಟ್ಟರೆ ಬೇರೇನು ಬರುವುದಿಲ್ಲ.
ಮಿಷನ್-150 ಎನ್ನುತ್ತಿದ್ದ ಅವರು ಇದೀಗ ಮಿಷನ್-50ಗೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವರಷ್ಟು ಹೊಲಸು ರಾಜಕಾರಣ ಮಾಡುವವರು ದೇಶದಲ್ಲಿ ಯಾರೂ ಇಲ್ಲ ಎಂದು ಗುಜರಾತ್ ಶಾಸಕರನ್ನು ಕರೆತಂದು ಡಿಕೆಶಿ ಮೋಜು ಮಸ್ತಿ ಮಾಡಿದ್ದಾರೆಂಬ ಪ್ರಧಾನಿ ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.
ಬಿಜೆಪಿಗೆ ರಾಜೀನಾಮೆ ನೀಡಿರುವ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕಾಂಗ್ರೆಸ್ ತತ್ವ-ಸಿದ್ಧಾಂತಗಳನ್ನು ನಂಬಿ ಬಂದರೆ ಸ್ವಾಗತಿಸುತ್ತೇವೆ. ಆದರೆ, ಅವರಿಗೆ ಸ್ಥಾನಮಾನದ ಭರವಸೆ ನೀಡಲು ಅವರೊಂದಿಗೆ ಚರ್ಚಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.