ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿಯೂ ಬಿರುಸಿನ ಪ್ರಚಾರ ನಡೆಸುತ್ತಿದೆ. ಆದರೆ ಯೋಜಿತ ರೀತಿಯಲ್ಲಿ ನಾಯಕರ ಪ್ರವಾಸ ವೇಳಾಪಟ್ಟಿ ರೂಪಿಸದ ಕಾರಣ ಉಸ್ತುವಾರಿಯಾಗಿ ನಿಯೋಜನೆಗೊಂಡಿರುವ ನಾಯಕರೇ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಲಿದ್ದಾರೆ.
ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ, ಕೆ. ಆರ್.ನಗರದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೊಂದೆಡೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಂಡ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಮತದಾನಕ್ಕೆ 10 ದಿನವಷ್ಟೇ ಬಾಕಿ ಉಳಿದಿರುವುದರಿಂದ ಎಲ್ಲ ವರ್ಗದ ಮತದಾರರನ್ನು ಸೆಳೆಯಲು ಕಮಲ ಪಕ್ಷ ಕಸರತ್ತು ನಡೆಸುತ್ತಿದೆ. ಆದರೆ ಐದು ಕ್ಷೇತ್ರಗಳಲ್ಲಿ ಪ್ರತಿದಿನವೂ ಪಕ್ಷದ ಅಭ್ಯರ್ಥಿ ಪರ ಬಿರುಸಿನ ಪ್ರಚಾರಕ್ಕೆ ಪೂರಕವಾಗಿ ಸಿದಟಛಿತೆ ಮಾಡಿಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ಯಾವ ನಾಯಕರು ಯಾವ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲದಿರುವುದು ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟಾದರೂ ಒಗ್ಗಟ್ಟು ಪ್ರದರ್ಶಿಸುತ್ತಾ ಸಂಘಟಿತವಾಗಿ ಪ್ರಚಾರ ನಡೆಸಿ ಮತದಾರರನ್ನು ಸೆಳೆಯಲು ಪ್ರಯತ್ನ ನಡೆಸಿದೆ.