Advertisement

ನಾಡಿದ್ದು ಬಿಜೆಪಿ ಪದಾಧಿಕಾರಿಗಳ ಸಭೆ

06:00 AM Jan 16, 2018 | |

ಬೆಂಗಳೂರು: ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಮುಗಿಯುತ್ತಿದ್ದಂತೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ನವಶಕ್ತಿ ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಈ ಕುರಿತು ಚರ್ಚಿಸಲು ಗುರುವಾರ (ಜ.18) ಪಕ್ಷದ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆ ಕರೆಯಲಾಗಿದೆ.

Advertisement

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಮತ್ತು ಚುನಾವಣಾ ಉಸ್ತುವಾರಿ ಪ್ರಕಾಶ್  ಜಾವಡೇಕರ್‌ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದ್ದು, ನವಶಕ್ತಿ ಸಮಾವೇಶದ ಮೂಲಕ ಪಕ್ಷವನ್ನು ಯಾವ ರೀತಿ ಮೇಲಕ್ಕೆತ್ತಬೇಕು ಮತ್ತು ಕಾರ್ಯಕರ್ತರನ್ನು ಸಿದ್ಧಗೊಳಿಸಬೇಕು ಮತ್ತಿತರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.

ಪರಿವರ್ತನಾ ಯಾತ್ರೆ ಮುಗಿದ ವಿಧಾನಸಭಾ ಕ್ಷೇತ್ರಗಳಲ್ಲಿ ಫೆ.15ರೊಳಗೆ ನವಶಕ್ತಿ ಸಮಾವೇಶಗಳನ್ನು ನಡೆಸಲು ಈ
ಹಿಂದೆ ತೀರ್ಮಾನಿಸಲಾಗಿತ್ತು. ಅದರಂತೆ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 210 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಕ್ಕೆ ದಿನಾಂಕಗಳನ್ನೂ ನಿರ್ಧರಿಸಲಾಗಿತ್ತು. ಆದರೆ, ಕಳೆದ ಡಿ.31ರಂದು ಬೆಂಗಳೂರಿಗೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ನವಶಕ್ತಿ ಸಮಾವೇಶ ಎಂಬುದು ಪಕ್ಷದ ಮತ್ತೂಂದು ಸಮಾವೇಶ ಎನ್ನುವಂತಾಗಬಾರದು. ಅಲ್ಲಿ ಪಕ್ಷದ ಹೊಸ ಶಕ್ತಿಯ ಪ್ರದರ್ಶನವಾಗಬೇಕು. ಅರ್ಥಾತ್‌ ಪಕ್ಷಕ್ಕೆ ಸೇರಿರುವ ಹೊಸಬರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಆ ರೀತಿಯ ಸಮಾವೇಶವಾಗ ಬೇಕಾದರೆ ಬೂತ್‌ ಕಮಿಟಿಗಳು ಪೂರ್ಣ ಪ್ರಮಾಣ ದಲ್ಲಿ ರಚನೆಯಾಗಿ ಅವರ ಮೂಲಕ ಹೊಸ ಸದಸ್ಯರ ನೋಂದಣಿಯಾಗಬೇಕು ಎಂದು ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಪರಿವರ್ತನಾ ಯಾತ್ರೆ ಮುಗಿದ ಬಳಿಕ ವಿಧಾನಸಭಾ ಕ್ಷೇತ್ರಗಳಲ್ಲಿ ನವಶಕ್ತಿ ಸಮಾವೇಶಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಸಿದ್ಧತೆ ಸಲುವಾಗಿ ಬೂತ್‌ ಕಮಿಟಿಗಳ ರಚನೆ, ಹೊಸ ಸದಸ್ಯರ ನೋಂದಣಿ ಮುಂತಾದ ವಿಚಾರಗಳ ಬಗ್ಗೆ ಪಕ್ಷದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳೊಂದಿಗೆ ಮುರಳೀಧರ ರಾವ್‌ ಮತ್ತು ಪ್ರಕಾಶ್‌ ಜಾವಡೇಕರ್‌ ಪರಿಶೀಲಿಸಲಿದ್ದಾರೆ. ಇದರ ಜತೆಗೆ ಸಮಾವೇಶಗಳನ್ನು ಯಾವ ರೀತಿ ಆಯೋಜಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ.

ಬೂತ್‌ ಕಮಿಟಿಗಳ ಪರಾಮರ್ಶೆ: ಗುರುವಾರದ ಸಭೆಯಲ್ಲಿ ಬೂತ್‌ ಕಮಿಟಿಗಳ ಪರಾಮರ್ಶೆಯೂ ನಡೆಯಲಿದೆ. ರಾಜ್ಯಾದ್ಯಂತ ಇರುವ ಸುಮಾರು 57 ಸಾವಿರ ಬೂತ್‌ಗಳಲ್ಲಿ 52 ಸಾವಿರ ಬೂತ್‌ ಕಮಿಟಿಗಳು ಮಾತ್ರ ರಚನೆಯಾಗಿವೆ. ಸುಮಾರು 4 ಸಾವಿರ ಬೂತ್‌ ಕಮಿಟಿಗಳು ಇನ್ನೂ ರಚನೆಯಾಗಬೇಕಿದೆ. ಸುಮಾರು 10 ಸಾವಿರ ಬೂತ್‌ಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ, ಮಹಿಳೆಯರನ್ನೊಳಗೊಂಡ ಪೂರ್ಣ ಪ್ರಮಾಣದ ಬೂತ್‌ ಕಮಿಟಿಗಳು ಅಸ್ತಿತ್ವಕ್ಕೆ ಬರಬೇಕಾಗಿದೆ ಎಂಬುದು ಅಮಿತ್‌ ಶಾ ಡಿ.31ರಂದು ನಡೆಸಿದ ಸಭೆ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜ.15ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸುವಂತೆ ಅವರು ತಾಕೀತು ಮಾಡಿದ್ದರು. ಹೀಗಾಗಿ ಬೂತ್‌ ಕಮಿಟಿಗಳ 
ಬಗ್ಗೆಯೂ ಮುರಳೀಧರರಾವ್‌ ಮತ್ತು ಜಾವಡೇಕರ್‌ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

Advertisement

ಯಾತ್ರೆ ಸಮಾರೋಪದ ಬಗ್ಗೆ ಸಮಾಲೋಚನೆ
ಇದೇ ಸಂದರ್ಭದಲ್ಲಿ ಫೆ.4ರಂದು ಬೆಂಗಳೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಸಿದ್ಧತೆಗಳ ಕುರಿತಂತೆ ಬೆಂಗಳೂರು ನಗರ ಮತ್ತು ಮಹಾನಗರದ ಶಾಸಕರು, ಬಿಬಿಎಂಪಿ ಸದಸ್ಯರು ಹಾಗೂ ಪಕ್ಷದ
ಪದಾಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಯಾತ್ರೆಯ ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಈ ಕಾರ್ಯಕ್ರಮವನ್ನು ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಚಾರ ಕಾರ್ಯದ ಉದ್ಘಾಟನಾ ಸಭೆಯಾಗಿ
ಪರಿಗಣಿಸಲು ಬಿಜೆಪಿ ತೀರ್ಮಾನಿಸಿದೆ. ಹೀಗಾಗಿ ಅದಕ್ಕೆ ಪೂರಕ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next