Advertisement

15 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಾಗಿದೆ: ಬಿಎಸ್‌ವೈ

10:51 PM Nov 29, 2019 | Team Udayavani |

ರಾಣಿಬೆನ್ನೂರು/ಹಾವೇರಿ: ಉಪಚುನಾವಣೆ ನಡೆಯುತ್ತಿರುವ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗಿದೆ. ಎಷ್ಟು ಅಂತರದಲ್ಲಿ ಗೆಲ್ಲಬೇಕು ಎಂಬುವುದಕ್ಕೆ ಮಾತ್ರ ಈಗ ಪೈಪೋಟಿ ಮಾಡುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಹಾವೇರಿಯಲ್ಲಿ ಹೆಲಿಪ್ಯಾಡ್‌ನ‌ಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

Advertisement

ಉಪ ಚುನಾವಣೆಯಲ್ಲಿ ನಾವು ಎಲ್ಲ 15 ಸ್ಥಾನಗಳನ್ನು ಗೆಲ್ಲುತ್ತೇವೆ. ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲ್ಲ. ಬಿಜೆಪಿ ಸರ್ಕಾರಕ್ಕೆ ಬಹುಮತ ಬರದಿದ್ದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಮಾಡುತ್ತವೆ ಎಂಬುವುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಮಗೆ ಬಹುಮತ ಬಂದೇ ಬರುತ್ತದೆ. ಜೆಡಿಎಸ್‌ ಬೆಂಬಲ ಪಡೆಯುವ ವಿಚಾರವೇ ಇಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ.

ಬಿಜೆಪಿಗೆ ಬರುತ್ತೇನೆ ಎಂದು ಬಹಳಷ್ಟು ಜನ ಹೇಳಿದ್ದಾರೆ. ಆದರೆ, ನಮಗೆ ಅದರ ಅಗತ್ಯವೇ ಇಲ್ಲ. ನಮಗೆ ಬಹುಮತವಿದೆ ಎಂದು ಹೇಳಿದ್ದೇವೆ. ಹೊಸದಾಗಿ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಮುಂದಿನ ಮೂರೂವರೆ ವರ್ಷ ಬಿಜೆಪಿ ಸರ್ಕಾರ ಇರಬೇಕು ಎಂಬುದು ಜನರ ಅಪೇಕ್ಷೆ ಇದೆ. ಮೂರುವರೆ ವರ್ಷದಲ್ಲಿ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯ ಮಾಡಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು.

ಕಾಂಗ್ರೆಸ್‌ನಿಂದ ಶಂಕರ್‌ಗೆ ದ್ರೋಹ: ಬಳಿಕ, ರಾಣಿಬೆನ್ನೂರು ತಾಲೂಕಿನ ತುಮ್ಮಿನಕಟ್ಟಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಮುಂದೆ ಕುರುಬ ಸಮಾಜದ ನಾಲ್ಕು ಜನ ನಮ್ಮ ಸಂಪುಟದಲ್ಲಿ ಸಚಿವರಾಗುವ ಸಂಭವವಿದೆ. ನೀವು ಶಂಕರ್‌ ಅವರನ್ನು ಆರಿಸಿ ಕಳಿಸಿದಿರಿ. ಆದರೆ, ಸ್ಪೀಕರ್‌ ರಮೇಶಕುಮಾರ್‌ ಶಂಕರ್‌ಗೆ ದ್ರೋಹ ಮಾಡಿದರು. ಆ ಸ್ಪೀಕರ್‌ ದೊಡ್ಡ ಮನುಷ್ಯ. ಅದು ನಿಮಗೆಲ್ಲ ಗೊತ್ತಿದೆ. ಪ್ರಜಾಪ್ರಭುತ್ವದಲ್ಲಿ ನೀವು ಮಾಲೀಕರು. ಈ ಚುನಾವಣೆ ಮೂಲಕ ಮತದಾರರು ಪ್ರತೀಕಾರ ತೀರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next