Advertisement

ಹಿಂದುತ್ವದ ಅಜೆಂಡಾಗೆ ಮೊರೆ ಹೋದ ಬಿಜೆಪಿ

08:48 AM Dec 05, 2017 | Team Udayavani |

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಹಗರಣ, ದುರಾಡಳಿತದ ಅಸ್ತ್ರಗಳನ್ನು ಸಮರ್ಥವಾಗಿ ಬಳಸುವಲ್ಲಿ ವಿಫ‌ಲಗೊಂಡ ಬಿಜೆಪಿ ಇದೀಗ ವಿಧಾನಸಭೆ ಚುನಾವಣೆಗೆ ಹಿಂದುತ್ವ ಅಜೆಂಡಾವನ್ನು ಆದ್ಯತೆಯಾಗಿ ಪರಿಗಣಿಸಲು ಮುಂದಾಗಿದೆ.

Advertisement

ಅದರ ಪರಿಣಾಮ ಟಿಪ್ಪು ಜಯಂತಿ ವಿವಾದ, ಬಳಿಕ ದತ್ತ ಜಯಂತಿ ವಿಷಯವನ್ನು ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ಹಿಂದುತ್ವದ ಸಮರ ಸಾರಲು ಹೊರಟಿದ್ದ ಬಿಜೆಪಿಗೆ ಇದೀಗ ಹೆಚ್ಚುವರಿಯಾಗಿ ಹನುಮ ಜಯಂತಿಯೂ ಸಿಕ್ಕಿದಂತಾಗಿದೆ. ಇಂತಹ ವಿಚಾರಗಳನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಆಕ್ರಮಣಕಾರಿಯಾಗಿ ಮುಂದುವರಿಯಲು ಬಿಜೆಪಿ ನಿರ್ಧರಿಸಿದೆ. ಉತ್ತರದ ರಾಜ್ಯಗಳಲ್ಲಿ ಹಿಂದುತ್ವದ ಪ್ರತಿಪಾದನೆಗೆ ಸಿಕ್ಕಿರುವ ಯಶಸ್ಸೂ ಕೂಡ ಬಿಜೆಪಿಯ ಈ ನಿರ್ಧಾರಕ್ಕೆ ಕಾರಣವಾಗಿದೆ, ಕರ್ನಾಟಕದಲ್ಲಿ ಸರ್ಕಾರದ ಭ್ರಷ್ಟಾಚಾರ, ಹಗರಣ, ದುರಾಡಳಿತದ ವಿರುದ್ಧ ಜನರನ್ನು ಆಡಳಿತ ಪಕ್ಷದ ವಿರುದ್ಧ ಎತ್ತಿಕಟ್ಟುವುದು ಚುನಾವಣೆಯ ಯಶಸ್ವಿ ತಂತ್ರ ಎಂಬುದು ಈ ಹಿಂದೆ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಗೆ ಈ 3 ಅಂಶಗಳನ್ನೇ ಪ್ರಮುಖವಾಗಿ ಪ್ರಸ್ತಾಪಿಸಲು ತೀರ್ಮಾನಿಸಿ ಅದರಂತೆ ಮುಂದುವರಿದಿತ್ತು. ಆದರೆ, ಇದನ್ನು ಸಮರ್ಪಕವಾಗಿ ಪ್ರತಿಪಾದಿಸುವಲ್ಲಿ
ಮತ್ತು ಆರೋಪಗಳಿಗೆ ದಾಖಲೆಗಳನ್ನು ಒದಗಿಸುವಲ್ಲಿ ಪಕ್ಷ ವಿಫ‌ಲವಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ದಿನಕ್ಕೊಂದು ಹಗರಣಗಳನ್ನು ಬಯಲಿಗೆಳೆಯುವುದಾಗಿ ಹೇಳಿಕೆ ನೀಡಿ ಅದು ಸಾಧ್ಯವಾಗದೆ ಮುಜುಗರಕ್ಕೆ ಈಡಾಗಿದೆ.

ಈ ಹಿನ್ನೆಲೆಯಲ್ಲಿ ಹಗರಣ, ದುರಾಡಳಿತ ಮುಂತಾದ ವಿಚಾರಗಳನ್ನು ಸ್ವಲ್ಪ ಬದಿಗೆ ಸರಿಸಿ ಹಿಂದುತ್ವ ಅಜೆಂಡಾಕ್ಕೆ ಆದ್ಯತೆ ನೀಡಲು ಪಕ್ಷ ತೀರ್ಮಾನಿಸಿದೆ. ಇತ್ತೀಚೆಗೆ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿದ್ದಕ್ಕೆ ವ್ಯಕ್ತವಾದ ಜನಬೆಂಬಲ, ಟಿಪ್ಪು ಜಯಂತಿ ನೆಪದಲ್ಲಿ ಕೊಡಗು ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆಗೆ ಅವಕಾಶ ನೀಡದ ಸರ್ಕಾರದ ಕ್ರಮಕ್ಕೆ ರಾಜ್ಯಾದ್ಯಂತ ವ್ಯಕ್ತವಾದ
ಆಕ್ರೋಶದಿಂದಾಗಿ ರಾಜ್ಯದ ಜನರೂ ಹಿಂದುತ್ವ ಪ್ರತಿಪಾದನೆಗೆ ಬೆಂಬಲಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅದರಲ್ಲೂ
ಬಿಜೆಪಿಯ ಭದ್ರ ನೆಲೆಯಾಗಿರುವ ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಹಲವೆಡೆ ಹಿಂದುತ್ವಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ.

ಅಮಿತ್‌ ಶಾ ಗ್ರೀನ್‌ ಸಿಗ್ನಲ್‌: ಈ ಕಾರಣದಿಂದಾಗಿ ರಾಜ್ಯ ಸರ್ಕಾರದ ವಿರುದ್ಧ ಇದುವರೆಗೆ ಬಳಸುತ್ತಿದ್ದ ಅಸ್ತ್ರಗಳನ್ನು ಬದಿಗಿಟ್ಟು ಹಿಂದುತ್ವ ಅಜೆಂಡಾವನ್ನು ಪ್ರಧಾನವಾಗಿ ತೆಗೆದುಕೊಳ್ಳುವ ಕುರಿತು ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಗಮನಕ್ಕೆ ತರಲಾಗಿದೆ. ಭ್ರಷ್ಟಾಚಾರ, ಹಗರಣ, ದುರಾಡಳಿತದ ಅಸ್ತ್ರಗಳನ್ನು ಸಮರ್ಥವಾಗಿ ಬಳಸುವಲ್ಲಿ ರಾಜ್ಯ ಘಟಕ ವಿಫ‌ಲವಾದ
ಕಾರಣ ಶಾ ಅವರೂ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ಎಲ್ಲರನ್ನೊಳಗೊಂಡ ಹಿಂದುತ್ವ
ಈ ಮಧ್ಯೆ ಹಿಂದೂಗಳಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟವರು ಎಂದು ಹೇಳಲಾಗುತ್ತಿರುವ ದಲಿತರು ಸೇರಿದಂತೆ ಹಿಂದೂ ಧರ್ಮದಲ್ಲಿರುವ ಎಲ್ಲಾ ಜಾತಿಗಳನ್ನೊಳಗೊಂಡ ಹಿಂದುತ್ವ ಪ್ರತಿಪಾದನೆಗೆ ಬಿಜೆಪಿ ಮುಂದಾಗಿದೆ. ಮೌಡ್ಯ ಪ್ರತಿಬಂಧಕ ವಿಧೇಯಕದ ಮೂಲಕ ರಾಜ್ಯ ಸರ್ಕಾರ ಹಿಂದೂಗಳ ಎಲ್ಲಾ ಜಾತಿಗಳ ಆಚರಣೆಗಳಿಗೆ ಅಡ್ಡಿಪಡಿಸುತ್ತಿದೆ. ಅದರಲ್ಲೂ ದಲಿತ ಸಮುದಾಯದ ಕೆಲವು ಆಚರಣೆಗಳಿಗೆ ನಿಷೇಧ ಹೇರಿದೆ. ಆದರೆ, ಅಲ್ಪಸಂಖ್ಯಾತರ ಯಾವುದೇ ಆಚರಣೆಗಳಿಗೆ ನಿರ್ಬಂಧ ವಿಧಿಸುತ್ತಿಲ್ಲ ಎಂಬ ಬಗ್ಗೆ ಪ್ರಚಾರ ಮಾಡಿ ದಲಿತರನ್ನು ಪಕ್ಷಕ್ಕೆ ಸೆಳೆದುಕೊಂಡು ಜನರನ್ನು ಸೆಳೆಯಲು ನಿರ್ಧರಿಸಿದೆ.

Advertisement

ಹಿಂದುತ್ವ ಎಂದರೆ ಅದು ರಾಷ್ಟ್ರೀಯತೆಯ ಪ್ರತಿಪಾದನೆ. ಹಿಂದೂ ಎಂಬುದು ದೇಶದ ಜನರ ಜೀವನ ಧರ್ಮವೇ ಹೊರತು ಜಾತಿಗಳಿಗೆ ಸೀಮಿತವಾದ ಧರ್ಮವಲ್ಲ. ಜಾತ್ಯತೀತತೆ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುವವರಿಂದಲೇ ಇಂದು ಧರ್ಮದ
ಹೆಸರಿನಲ್ಲಿ ಜನರನ್ನು ಪರಸ್ಪರ ಎತ್ತಿಕಟ್ಟುವ ಕೆಲಸ ಆಗುತ್ತಿದೆ. ಅದರ ಬದಲಾಗಿ ದೇಶದ ಜೀವನ ಧರ್ಮವಾದ ಹಿಂದುತ್ವವನ್ನು
ಪ್ರತಿಪಾದಿಸಿದರೆ ಅದು ರಾಷ್ಟ್ರೀಯವಾದವಾಗುತ್ತದೆ. ಈ ರಾಷ್ಟ್ರೀಯವಾದವೇ ಬಿಜೆಪಿ ಅಜೆಂಡಾ.

 ●ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next