ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾದರೆ, ಅತ್ಯಂತ ದೊಡ್ಡ ಪಕ್ಷವಾಗಿರುವ ಬಿಜೆಪಿ ಪ್ರಜಾಪ್ರಭುತ್ವ ನೆಲೆಯಲ್ಲಿ ಹೊಸ ಸರ್ಕಾರ ರಚನೆ ಮಾಡಲಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು. ಮಹಾಲಕ್ಷ್ಮೀ ಬಡವಾಣೆಯಲ್ಲಿ ಸೋಮವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಬಿಜೆಪಿ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹಾಗೂ ಬಲಿಷ್ಠ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ.
ಈಗ ಇರುವ ಸರ್ಕಾರ ಪತನವಾದರೆ, ಖಂಡಿತವಾಗಿ ಪ್ರಜಾಪ್ರಭುತ್ವದ ನೆಲೆಯಲ್ಲೇ ಹೊಸ ಸರ್ಕಾರ ರಚನೆ ಮಾಡುತ್ತೇವೆ. ನಾವು ಯಾರನ್ನು ಕಿಡ್ನಾಪ್ ಮಾಡಿಲ್ಲ. ಮಾಡುವುದು ಇಲ್ಲ. ಕಾಂಗ್ರೆಸ್ ಶಾಸಕರೇ ಕಾಂಗ್ರೆಸ್‌ಗೆ ಬೈಯುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೆ ಯಾವ ಪಕ್ಷ ಬೇಕಾದರೂ ಸೇರುವ ಅವಕಾಶ ಇದೆ. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.
ನಮ್ಮದು ಆಪರೇಷನ್ ಸ್ವಚ್ಛ ಭಾರತ್. ಆಡಳಿತ ನಡೆಸುತ್ತಿರುವವರ ಅಂತರಿಕ ಕಚ್ಚಾಟ, ಬಿನ್ನಾಭಿಪ್ರಾಯದಿಂದ ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಇರುವ ಕಿತ್ತಾಟವನ್ನು ಬೇರೆಯವರ ಮೇಲೆ ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಯಾವುದೇ ಆಪರೇಷನ್ ಮಾಡುವುದಿಲ್ಲ ಹಾಗೂ ರಾಜ್ಯದ ಆಡಳಿತವನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನವೂ ಮಾಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಜನ ಅಧಿಕಾರ ನೀಡಿದ್ದಾರೆ. ಅದನ್ನು ಸರಿಯಾಗಿ ನಿಭಾಯಿಸಬೇಕೇ ವಿನಃ ಬಿಜೆಪಿ ಶಾಸಕರ ಹಿಂದೆ ಹೋಗುತ್ತಿರುವುದು ಏಕೇ? ಕಳ್ಳನ ಮನಸ್ಸು ಹೇಗೆ ಎಂಬುದು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲವು ನಾಯಕರು ನೀಡುವ ಹೇಳಿಕೆಯಿಂದ ತಿಳಿಯುತ್ತದೆ. ಇದಕ್ಕೆಲ್ಲ ಬಿಜೆಪಿ ಸೊಪ್ಪು ಹಾಕುವುದಿಲ್ಲ ಎಂದರು.
ಶೇ.80ರಷ್ಟು ಭಾಗದಲ್ಲಿ ಸ್ವಚ್ಛತಾ ಕಾರ್ಯ: ಸ್ವಚ್ಛತಾ ಅಭಿಯಾನದಿಂದ ದೇಶಾದ್ಯಂತ ಶೇ.80ರಷ್ಟು ಭಾಗದಲ್ಲಿ ಸ್ವಚ್ಛತಾ ಕಾರ್ಯ ವೇಗವಾಗಿ ಸಾಗುತ್ತಿದೆ. ನಗರ ಸ್ವಚ್ಛವಾದರೆ ಬಹುತೇಕ ಸಮಸ್ಯೆ ಬಗೆಹರಿಯುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾಲಕ್ಷ್ಮೀ ಬಡಾವಣೆಯ ಡಾ.ರಾಜ್‌ಕುಮಾರ್ ಸಮಾಧಿ ಸುತ್ತಲಿನ ಪ್ರದೇಶದಲ್ಲಿ ಸೋಮವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲೇಶ್ವರ, ಯಶವಂತಪುರ ಮೊದಲಾದ ಭಾಗದಲ್ಲಿ ಈಗಾಗಲೇ ಅಭಿಯಾನ ನಡೆಸಿದ್ದೇವೆ. ಮಂಗಳವಾರ ಬ್ಯಾಟರಾಯನಪುರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ.
ದೇಶಾದ್ಯಂತ ಅಕ್ಟೋಬರ್ 2ರ ವರೆಗೂ ಸ್ವಚ್ಛತಾ ಅಭಿಯಾನ ನಡೆಯಲಿದೆ ಎಂದರು. ಮಾಜಿ ಉಪ ಮೇಯರ್ ಎಸ್.ಹರೀಶ್, ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಸನ್ನ, ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್ ಮೊದಲಾದವರು ಇದ್ದರು. ಸ್ವಚ್ಛತಾ ಅಭಿಯಾನದ ನಂತರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಪೌರಕಾರ್ಮಿಕರೊಂದಿಗೆ ಕುಳಿತು ಉಪಾಹಾರ ಸೇವಿಸಿದರು.