ಬೆಂಗಳೂರು: ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋಗೆ ಪ್ರತಿಯಾಗಿ ಬಿಜೆಪಿಯಿಂದಲೂ ಸೋಮವಾರ ಸ್ಪೀಕರ್‌ಗೆ ಆಡಿಯೋ ಸಿಡಿಯೊಂದನ್ನು ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.
ವಿಧಾನಸಭೆಯಲ್ಲಿ ಸೋಮವಾರ ಮಧ್ಯಾಹ್ನ ನಂತರದ ಕಲಾಪದ ವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ರೇಣುಕಾಚಾರ್ಯ, 40 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವುದಕ್ಕೆ ಸಂಬಂಧಪಟ್ಟಂತೆ ನನ್ನ ಬಳಿ ಸಿಡಿ ಇದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ಮನವಿ ಮಾಡಿದರು. ಬಳಿಕ ಆ ಸಿಡಿ ಯನ್ನು ಸ್ಪೀಕರ್‌ಗೆ ರವಾನಿಸಿದರು.
ರೇಣುಕಾಚಾರ್ಯ ಸ್ಪೀಕರ್‌ಗೆ ಸಲ್ಲಿಸಿದ್ದಾರೆ ಎನ್ನಲಾದ ಆಡಿಯೋದಲ್ಲಿ ವಿಧಾನ ಪರಿಷತ್‌ಗೆ ನಾಮಕರಣ ಸಂಬಂಧ ವಿಜಯಪುರದ ವಿಜುಗೌಡ ಪಾಟೀಲ್ ಅವರೊಂದಿಗೆ ಕುಮಾರಸ್ವಾಮಿ ನಡೆಸಿದ ಸಂವಾದ ಹಾಗೂ ಹಣಕಾಸಿನ ವಿಚಾರ ಕುರಿತ ಮಾತುಕತೆ ವಿವರ ಇದೆ ಎನ್ನಲಾಗಿದೆ. ಸೋಮವಾರ ಸಂಜೆ ಸದನದಲ್ಲಿ ಬಿಡುಗಡೆ ಮಾಡಿದ ಸಿಡಿ ರಾತ್ರಿ ವೇಳೆಗೆ ವಾಟ್ಸ್‌ಆ್ಯಪ್‌ಗ್ಳಲ್ಲಿ ಹರಿದಾಡುತ್ತಿತ್ತು.
ವಿಧಾನ ಪರಿಷತ್‌ಗೆ ನಾನೊಬ್ಬನೇ ನಾಮಕರಣ ಮಾಡಲು ಸಾಧ್ಯವಿಲ್ಲ. ನಮಗೂ ನೂರಾರು ಕಷ್ಟವಿದೆ. ನಾನು ನಿಮ್ಮ ಹೆಸರು ಪ್ರಸ್ತಾಪಿಸಿದರೂ ಯಾವ ಶಾಸಕರು ಸಹಿ ಮಾಡಲು ಸಿದ್ಧರಿಲ್ಲ. ಎಲ್ಲ ಶಾಸಕರು ಒಂದೊಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ. 40 ಜನ 40 ಕೋಟಿ ರೂ. ಕೇಳುತ್ತಾರೆ.ಒಬ್ಬ ಅಭ್ಯರ್ಥಿ ಗೆಲ್ಲಲು 29 ಮತ ಬೇಕು. ಇನ್ನು 11 ಹೆಚ್ಚುವರಿ ಮತಗಳಿದ್ದು, ಅದಕ್ಕೆ 18 ಸೇರಿಸಿದರೆ ಮತ್ತೂಂದು ಸ್ಥಾನ ಪಡೆಯಬಹುದು. ಆಗ ವ್ಯಾಪಾರ ನಡೆಯುತ್ತದೆ. ವಿಜುಗೌಡ ಅವರ ಬಗ್ಗೆ ಪ್ರೀತಿ ಇದೆ ಎಂಬುದಾಗಿ ಕುಮಾರಸ್ವಾಮಿ ಮಾತನಾಡಿದ್ದಾರೆ ಎನ್ನಲಾಗಿದೆ.
ರಾಜ್ಯಸಭಾ, ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ಕೋಟಿ ರೂ. ಕೊಡಿಸಿ ಎಂದು ಶಾಸಕರು ಕೇಳುತ್ತಿದ್ದಾರೆ. ಕೇವಲ ಶಾಸಕರಷ್ಟೇ ಅಲ್ಲ 40 ತಿಂಗಳು ಸಚಿವರಾಗಿ ಕಾರ್ಯ ನಿರ್ವಹಿಸಿದವರೂ ಹಣ ಕೇಳುತ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರ ಬಳಿಯೂ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಎಲ್ಲರೂ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇದು ನನ್ನ ಹಣೆ ಬರಹ. 2016ರವರೆಗೆ ಕಾಯಿರಿ ಎಂದು ಕುಮಾರಸ್ವಾಮಿ ಚರ್ಚಿಸಿದ್ದಾರೆ ಎಂದು ಆಡಿಯೋದಲ್ಲಿದೆ ಎಂದು ಹೇಳಲಾಗಿದೆ.