Advertisement

ಇಂದು ಮಹತ್ವದ ಬಿಜೆಪಿ ಕೋರ್‌ ಕಮಿಟಿ ಸಭೆ

03:45 AM Feb 13, 2017 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ವಿಳಂಬವಾಗುತ್ತಿರುವುದರಿಂದ ಮತ್ತೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ತಲೆದೋರುತ್ತಿರುವ ಬೆನ್ನಲ್ಲೇ ಮಹತ್ವದ ಕೋರ್‌ ಕಮಿಟಿ ಸಭೆ ಸೋಮವಾರ ಸಂಜೆ ನಡೆಯಲಿದ್ದು, ಹಲವು ಕುತೂಹಲಗಳಿಗೆ ತೆರೆ ಎಳೆಯಲಿದೆ.

Advertisement

ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ರಾಜ್ಯಾದ್ಯಂತ ಬಿಜೆಪಿ ಹಿಂದುಳಿದ ವರ್ಗಗಳ (ಓಬಿಸಿ) ಮೋರ್ಚಾ ಸಮಾವೇಶಗಳನ್ನು
ನಡೆಸುವುದು, ಶೀಘ್ರದಲ್ಲೇ ಎದುರಾಗಲಿರುವ ಎರಡು ಉಪಚುನಾವಣೆ ಮತ್ತು ಮುಂದಿನ ವರ್ಷ ಬರಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಪೂರ್ವಸಿದ್ಧತೆ ಕುರಿತಂತೆ ಈ ಸಭೆ ನಡೆಯುತ್ತಿದೆಯಾದರೂ ಪದಾಧಿಕಾರಿಗಳ ಪಟ್ಟಿ ಬದಲಾವಣೆ ವಿಚಾರವೇ ಪ್ರಾಮುಖ್ಯತೆ ಪಡೆದಿದೆ. ಈ ಹಿಂದೆ ಎಂಟು ಜಿಲ್ಲೆಗಳ ಪದಾಧಿಕಾರಿಗಳ ಪಟ್ಟಿ ಬದಲಾವಣೆ
ಮಾಡಬೇಕು ಎಂಬ ಬೇಡಿಕೆ ಇದ್ದರೂ ಇದೀಗ ಆ ಸಂಖ್ಯೆ ಆರಕ್ಕೆ ಕುಸಿದಿದೆ. ಪ್ರಸ್ತುತ ಬಳ್ಳಾರಿ, ಚಾಮರಾಜನಗರ, ಮೈಸೂರು ನಗರ, ಹಾಸನ, ದಾವಣಗೆರೆ ಮತ್ತು ಬೀದರ್‌ ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂಬ ಒತ್ತಾಯ ಇದೆ. ಅಲ್ಲದೆ, ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ
ಕೆ.ಎಸ್‌.ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲಾಧ್ಯಕ್ಷರನ್ನು ಬದಲಾಯಿಸಲೇ ಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿದಿದ್ದಾರೆ.

ಅಷ್ಟೇ ಅಲ್ಲ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಓಬಿಸಿ ಮೋರ್ಚಾ ಸಮಾವೇಶಗಳನ್ನು ನಡೆಸುವ
ಜವಾಬ್ದಾರಿಯನ್ನು ತಮಗೆ ವಹಿಸಿದ ಮೇಲೆ ಮತ್ತಷ್ಟು ತಣ್ಣಗಾಗಿದ್ದಾರೆ. ಹೀಗಾಗಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ
ಒತ್ತಾಯಿಸುತ್ತಿರುವ ಗುಂಪಿನ ಕೂಗು ಕೂಡ ಮೊದಲಿನಷ್ಟು ಜೋರಾಗಿ ಕೇಳಿಬರುತ್ತಿಲ್ಲ.

ಓಬಿಸಿ ಸಮಾವೇಶ:
ರಾಜ್ಯಾದ್ಯಂತ ಬಿಜೆಪಿ ಓಬಿಸಿ ಮೋರ್ಚಾ ಸಮಾವೇಶ ನಡೆಸುವ ಬಗ್ಗೆಯೂ ಕೋರ್‌ ಕಮಿಟಿಯಲ್ಲಿ ಚರ್ಚೆಯಾಗಲಿದೆ. ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಓಬಿಸಿ ಸಮಾವೇಶ ನಡೆಸುವಂತೆ ಅಮಿತ್‌ ಶಾ ಅವರು ಸೂಚಿಸಿದ್ದು, ಅದರಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಒಟ್ಟಾಗಿ ಪಾಲ್ಗೊಳ್ಳಬೇಕು ಎಂದೂ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವ ರೀತಿ
ಸಮಾವೇಶಗಳನ್ನು ಹಮ್ಮಿಕೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆಯಾಗಲಿದೆ. ಅದೇ ರೀತಿ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆಗಳು ಮತ್ತು 2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆ ಕೈಗೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಅಸಮಾಧಾನಿತರನ್ನು ಕರೆಸಿ ಮಾತನಾಡುತ್ತೇನೆ: ಬಿಎಸ್‌ವೈ
ಬೆಂಗಳೂರು: ರಾಜ್ಯ ಪದಾಧಿಕಾರಿಗಳ ಪಟ್ಟಿ ಬದಲಾವಣೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವವರನ್ನು ಕರೆಸಿ
ಮಾತನಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ
ಒಡಕಿಲ್ಲ. ಎಲ್ಲರೂ ಒಂದಾಗಿದ್ದೇವೆ. ಈ ಹಿಂದೆ ಹೇಳಿದಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150
ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಆರಂಭಿಸಿದ್ದೇವೆ ಎಂದು ಹೇಳಿದರು.

Advertisement

ರಾಜ್ಯ ಬಿಜೆಪಿಯಲ್ಲಿ ಇನ್ನೂ ಅಸಮಾಧಾನ ಮುಂದುವರಿದಿದೆ. ಮಾಜಿ ಶಾಸಕರಿಬ್ಬರು ಮತ್ತೆ ಪದಾಧಿಕಾರಿಗಳ ಪಟ್ಟಿ
ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದು, ವರಿಷ್ಠರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರಲ್ಲಾ ಎಂಬ ಸುದ್ದಿಗಾರರ
ಪ್ರಶ್ನೆಗೆ, ಈ ವಿಚಾರ ಗೊತ್ತಿಲ್ಲ. ಅವರನ್ನು ಕರೆದು ಮಾತನಾಡುತ್ತೇನೆ ಎಂದರು. ಅಲ್ಲದೆ, ಈ ಸಂದರ್ಭದಲ್ಲಿ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಪ್ರಸ್ತಾಪಿಸುವುದಿಲ್ಲ ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next