Advertisement
ಸೋಮವಾರ ಶಿರಸಿ ಗುಡ್ನಾಪುರದಲ್ಲಿ ಮಾತನಾಡಿದ ಅವರು, ಈಗ ಬಿಜೆಪಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯ ಹಿರಿಯ ನಾಯಕ ಬಸವನಗೌಡ ಪಾಟೀಲ ಯತ್ನಾಳ್ ಅವರು ಯಡಿಯೂರಪ್ಪ ಮತ್ತು ಅವರ ಮಕ್ಕಳ ಬಗ್ಗೆ ವಿಧಾನಸೌಧದ ಒಳಗಡೆ ಮತ್ತು ಹೊರಗಡೆ ಏನೆಲ್ಲ ಮಾತನಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಸಾವಿರಾರು ಕೋಟಿ ರೂ. ಪಡೆದಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ. ಅವರನ್ನು ಏನು ಮಾಡಿದ್ದಾರೆ? ದೊಡ್ಡವರು ತಿಂದರೆ ಔಷಧ, ಬಡವರು ತಿಂದರೆ ಹೊಟ್ಟೆಗೆ ಹಿಟ್ಟಿಲ್ಲ ಎಂಬಂತಲ್ವಾ ಎಂದು ಬಿಜೆಪಿಗರನ್ನು ಪ್ರಶ್ನಿಸಿದರು.
ಉತ್ತರಕನ್ನಡ ಜಿಲ್ಲೆಯಲ್ಲಿ ರಾಮಕೃಷ್ಣ ಹೆಗಡೆ ನಂತರ ಮತ್ತೆ ಮುಖ್ಯಮಂತ್ರಿ ಸ್ಥಾನ ಬರುತ್ತದೆ ಎಂದರೆ ಸಂತೋಷ. ರಾಜಕೀಯದ ದೃಷ್ಟಿಕೋನದಲ್ಲಿ ಚರ್ಚೆ ಮಾಡುವುದಿಲ್ಲ. ಜಿಲ್ಲೆಯ ಸರ್ವಾಂಗೀಣ ಪ್ರಗತಿ ಮತ್ತು ಅಭಿವೃದ್ಧಿಯಾಗಬೇಕು. ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಬಂದರೆ ಸ್ವಾಗತಿಸುತ್ತೇನೆ ಎಂದು ಆರ್.ವಿ.ದೇಶಪಾಂಡೆ ಅವರ ಪರವಾಗಿ ಪರೋಕ್ಷ ಬ್ಯಾಟಿಂಗ್ ಬೀಸಿದರು. ನಾನು ಜನರ ನಡುವೆ ಇರುವವರು. ಜನರ ಉತ್ತರಕ್ಕಾಗಿ ಕಾಯುತ್ತೇವೆ. ಜನರು ಹೋಗು ಹೇಳಿದಾಗ ಹೋಗುತ್ತೇವೆ. ಅವರು ಇಟ್ಟುಕೊಂಡಾಗ ಅವರ ಕೆಲಸ ಮಾಡುತ್ತೇವೆ. ಇದರ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಚಿಂತೆ ಮಾಡುವ ಅವಶ್ಯಕತೆಯಿಲ್ಲ ಎಂದು ಪ್ರತ್ಯುತ್ತರ ನೀಡಿದರು.