ಸೇಡಂ: ಸುಳ್ಳು ಪ್ರಚಾರ ಮತ್ತು ಭ್ರಷ್ಟಾಚಾರವೇ ಬಿಜೆಪಿಯ ಮೂಲ ಅಜೆಂಡಾ ಆಗಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಆರೋಪಿಸಿದ್ದಾರೆ. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನೂತನ ಜಿಲ್ಲಾ ಕಾರ್ಮಿಕರ ವಿಭಾಗದ ಅಧ್ಯಕ್ಷ ನಾಗೇಂದ್ರಪ್ಪ ಹೆಡ್ಡಳ್ಳಿ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಬಿಜೆಪಿಯವರು ಕೇವಲ ಸುಳ್ಳು, ಪೊಳ್ಳು ಹೇಳುವ ಮೂಲಕ ಸಾಮಾನ್ಯ ಜನರ ಬದುಕಿನ
ದಾರಿ ತಪ್ಪಿಸುತ್ತಿದ್ದಾರೆ. ಚುನಾವಣೆಯಲ್ಲಿ ಸೋತರೂ ನಾವು ಎಂದೂ ಸುಳ್ಳು ಹೇಳಿಲ್ಲ.
ಆಗುವ ಕೆಲಸಕ್ಕೆ ಆಗುತ್ತೆ, ಆಗದಿರುವುದು ಆಗಲ್ಲ ಎಂದೇ ಹೇಳಿದ್ದೇವೆ ಎಂದರು. ಮೋದಿ ಸರಕಾರ ರೈತರ ಬೆನ್ನೆಲುಬು ಮುರಿಯುವ ಕೆಲಸ ಮಾಡಿದೆ. ಆರ್.ಟಿ.ಐ, ಅನ್ನಭಾಗ್ಯ ಹಾಗೂ ಉದ್ಯೋಗ ಖಾತ್ರಿಯಂತಹ ಶಾಶ್ವತವಾಗಿ ಬಡವರ ಬದುಕಿಗೆ ಆಸರೆಯಾಗುವ ಕಾನೂನುಗಳನ್ನು ಕಾಂಗ್ರೆಸ್ ತಂದಿದೆ. ಆದರೆ ಬಿಜೆಪಿ ಸರ್ಕಾರ ಕೇವಲ ಕಾರ್ಯಕ್ರಮಗಳನ್ನು ಮಾಡುತ್ತಾ ಕಾಲಹರಣ ಮಾಡುವುದಲ್ಲದೆ, ನಾವು ತಂದ ಕಾನೂನು ತೊಡೆದು ಹಾಕುವ ಹುನ್ನಾರ ನಡೆಸಿದೆ ಎಂದರು.
ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ಪುಟ್ಟೇಗೌಡಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತೈಲ ಬೆಲೆ ಏರಿಕೆಯಿಂದ ಬಹುತೇಕ ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಕಷ್ಟದಲ್ಲಿರುವ ಜನರ ಬದುಕಿಗೆ ಆಸರೆಯಾಗಬೇಕಾದ ಸರ್ಕಾರ, ಬಡ ಜನರ ಜೀವಕ್ಕೆ ಮಾರಕವಾಗಿ ಮಾರ್ಪಟ್ಟಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಅಧ್ಯಕ್ಷ ರವೀಂದ್ರ ನಂದಿಗಾವ, ಮಾಜಿ ಅಧ್ಯಕ್ಷ ನಾಗೇಶ್ವರರಾವ್ ಮಾಲಿಪಾಟಿಲ, ಸತೀಶರೆಡ್ಡಿ ಪಾಟೀಲ ರಂಜೋಳ, ಎಪಿಎಂಸಿ ಅಧ್ಯಕ್ಷ ಹೇಮರೆಡ್ಡಿ ಪಾಟೀಲ, ಅಶೋಕ ಗೂಳಿ, ಸಾಬಣ್ಣ, ರುದ್ರು ಪಿಲ್ಲಿ, ವಿಶ್ವನಾಥ ಪಾಟೀಲ ಬೊಮ್ನಳ್ಳಿ, ಚಂದ್ರಶೇಖರ ಹಿಂಚಗೇರಿ, ಅಂಬಾ ರಾಯ ಇತರರು ಇದ್ದರು.