ವಿಜಯಪುರ: ಪೀರಾಪುರ-ಬೂದಿಹಾಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಯೋಜನೆಗೆ ಅನುಮೋದನೆ ಕೊಡಿಸುವಲ್ಲಿ ಶ್ರಮಿಸಿದ್ದು ಅಂದು ಜಲ ಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲ. ವಾಸ್ತವ ಸ್ಥಿತಿ ಹೀಗಿದ್ದರೂ ಸದರಿ ಯೋಜನೆ ರೂಪಿಸಿದ್ದು ನಾವೇ, ಮಾಡಿದ್ದು ನಾವೇ ಎಂದು ಕೆಲಸವನ್ನು ಬಿಜೆಪಿ ಮಾಡಿದ ಸಾಧನೆ ಎಂಬಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್. ನಾಡಗೌಡ ಕಿಡಿ ಕಾರಿದರು.
ರವಿವಾರ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಮಂಜೂರು ಮಾಡಿದ್ದು, ಅನುಷ್ಠಾನ ಮಾಡಿದ್ದು ಬಿಜೆಪಿ ಸರ್ಕಾರ. ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಒಪ್ಪಿಗೆ ನೀಡಿದ್ದು, ಇದೀಗ ಯೋಜನೆಗೆ ಮುಖ್ಯಮಂತ್ರಿಯಾಗಿ ಅವರೇ ಚಾಲನೆ ನೀಡಿದ್ದಾರೆ ಎಂಬಂತೆ ಬಿಂಬಿಸುವ ಕೆಲಸ ಮಾಡಿದ್ದಾರೆ. ಅವರ ಸಂಪುಟದ ಸಚಿವ-ಶಾಸಕರು ಕೂಡ ಇಂಥದ್ದೇ ಹೇಳಿಕೆ ನೀಡಿದ್ದು ಜನರಿಗೆ ಸುಳ್ಳು ಹೇಳುವ ಕೆಲಸ ಮಾಡಿದ್ದಾರೆ ಎಂದರು.
ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಸದರಿ ಯೋಜನೆಗೆ ಟೆಂಡರ್ ಕರೆಲಾಯಿತು. ಟೆಂಡರ್ ಕರೆದ ಕೂಡಲೇ ಈ ಹಿಂದೆ ಜಿಲ್ಲೆಯ ಕಾಂಗ್ರೆಸ್ ಶಾಸಕರಾಗಿದ್ದವರೊಬ್ಬರು ಪ್ರಚಾರದ ಗಿಮಿಕ್ ಹಾಗೂ ಬ್ಲಾಕ್ ಮೇಲ್ ಮಾಡಲು ಬಂಡಿಯಾತ್ರೆ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಲು ತಂತ್ರ ಮಾಡಿದರು ಎಂದು ಪರೋಕ್ಷವಾಗಿ ತಮ್ಮ ರಾಜಕೀಯ ಎದುರಾಳಿ ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ವಿರುದ್ಧ ವಾಗ್ಧಾಳಿ ನಡೆಸಿದರು.
2013-14ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಮೊದಲ ಬಜೆಟ್‌ನಲ್ಲೇ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯನ್ನು ಘೋಷಿಸಲಾಯಿತು. 14-9-2015ರಲ್ಲಿ ಈ ಯೋಜನೆಗೆ ಅಗತ್ಯದ ನೀರಿನ ಹಂಚಿಕೆ ಪ್ರಕ್ರಿಯೆ ಆರಂಭಗೊಂಡಿತು. 20-7-2016ರಲ್ಲಿ ಅಂದಿನ ನಮ್ಮ ಪಕ್ಷದ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದರು. ಮುದ್ದೇಬಿಹಾಳ ತಾಲೂಕಿನ 26, ಸಿಂದಗಿ ತಾಲೂಕಿನ 16 ಹಳ್ಳಿ ಮಾತ್ರವಲ್ಲದೇ ಸುರಪುರ ತಾಲೂಕಿನ ಕೆಲ ಹಳ್ಳಿಗಳನ್ನು ಸೇರಿಸಿ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
840 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಲಭ್ಯವಾಗುವ ನೀರನ್ನು ಮರು ಹಂಚಿಕೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಪೀರಾಪುರ-ಬೂದಿಹಾಳ ವಿಸ್ತರಣೆ ಕಾಮಗಾರಿಗೆ 2018ರಲ್ಲಿ ಅಗತ್ಯ ಅನುಮೋದನೆ ನೀಡಿ, ಬಾಕಿ ಉಳಿಯುವ 17,805 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲು ಯೋಜಿಸಲಾಯಿತು. ಕಾಲುವೆ ಜಾಲದಿಂದ ಪೈಪ್ ಲೈನ್ ಜಾಲಕ್ಕೆ ಬದಲಾಯಿಸಿ, 1.96 ಟಿಎಂಸಿ ಅಡಿ ಹೆಚ್ಚಿನ ನೀರಿನ ಬಳಕೆಗೆ ಅವಕಾಶ ನೀಡಿದ್ದು ನಮ್ಮ ಸರ್ಕಾರ ಎಂದು ದಾಖಲೆ ಪ್ರದರ್ಶಿಸಿದರು.
ಬಬಲೇಶ್ವರ ಏತ ನೀರಾವರಿ, ತಿಡಗುಂದಿ, ಗುತ್ತಿ ಬಸವಣ್ಣ, ನಂದವಾಡಗಿ, ತುಬಚಿ-ಬಬಲೇಶ್ವರ ನೀರಾವರಿ ಯೋಜನೆಗಳು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಹಾಗೂ ಎಂ.ಬಿ. ಪಾಟೀಲ ಜಲ ಸಂಪನ್ಮೂಲ ಸಚಿವರಾಗಿದ್ದ ಕಾಲ ಘಟ್ಟದಲ್ಲಿ ಅನುಷ್ಠಾನಕ್ಕೆ ಬಂದಿವೆ. ಸದರಿ ಯೋಜನೆ ಕುರಿತು ಸದನದಲ್ಲಿ ಮೊದಲು ಧ್ವನಿ ಎತ್ತಿದ್ದು ನಾನೇ. ಈ ಬಗ್ಗೆ ಸದನದಲ್ಲಿ 45 ನಿಮಿಷಗಳ ಕಾಲ ಸದನದಲ್ಲಿ ಮಾತನಾಡಿದ್ದೆ. ಇಸ್ರೇಲ್ ದೇಶಕ್ಕೆ ಹೋಗಿ ಅಧ್ಯಯನ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರಿಂದಲೇ ಅಧ್ಯಯನ ಮಾಡಿ ಬಂದಿದ್ದರು ಎಂದು ವಿವರಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ| ರಾಜು ಆಲಗೂರ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ್ ಛಾಯಾಗೋಳ, ಎಸ್.ಎಂ. ಪಾಟೀಲ ಗಣಿಹಾರ, ಸುಭಾಷ್ ಕಾಲೇಬಾಗ, ವಸಂತ ಹೊನಮೋಡೆ ಇದ್ದರು.